ಯಮ, ಗಣಪ ಇಹಲೋಕಕ್ಕಿಳಿದಿದ್ದಾರೆ ಹುಷಾರ್!
ಚೆನ್ನೈ, ಜು. 1 : ಯಮ ಎಂದರೆ ಜನರಿಗೆ ಪರಲೋಕದ ನೆನಪಾಗುತ್ತದೆ. ಆದರೆ, ಆತ ಇಹಲೋಕಕ್ಕೆ ಬರುತ್ತಾನೆಂದಾದರೆ ಎಲ್ಲರಿಗೂ ಒಂದು ಕ್ಷಣ ಆತಂಕವಾಗುತ್ತದೆ. ತಮಿಳುನಾಡಿನಲ್ಲಿ ಅಭಿಯಾನವೊಂದು ಆರಂಭವಾಗಿದ್ದು, ಪಾಶ ಹಿಡಿದು ಬರುವ ಯಮಧರ್ಮ ಬೈಕ್ ಸವಾರರ ಬಳಿ ಹೆಲ್ಮೆಟ್ ಧರಿಸಿ ಪ್ರಯಾಣ ಮಾಡಿ ಎಂಬ ಸಂದೇಶ ಸಾರುತ್ತಿದ್ದಾನೆ.
ಹೆಲ್ಮೆಟ್ ಧರಿಸದೆ ಪ್ರಯಾಣ ಮಾಡುವ ದ್ವಿಚಕ್ರ ವಾಹನ ಸವಾರರಿಗೆ ಯಮಧರ್ಮನೇ ಬುದ್ಧಿವಾದ ಹೇಳುತ್ತಿದ್ದಾನೆ. ಬೈಕ್‌ನ ಸವಾರ ಹಾಗೂ ಹಿಂಬದಿ ಪ್ರಯಾಣಿಕರಿಗೆ ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತಮಿಳುನಾಡಿನಲ್ಲಿ ಯಮಧರ್ಮರಾಜ ಹಾಗೂ ಗಣಪನ ವೇಷಧಾರಿಗಳು ರಸ್ತೆಗೆ ಇಳಿದಿದ್ದಾರೆ. ಹೆಲ್ಮೆಟ್ ಹಾಕಿಕೊಳ್ಳದೆ ವಾಹನ ಚಲಾಯಿಸುವುದರಿಂದ ಆಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ಜೀವನದಲ್ಲಿ ಸಾಕಷ್ಟು ವರ್ಷಗಳು ನಿಮ್ಮ ಪಾಲಿಗಿವೆ. ಈ ಭೂಮಿಯಲ್ಲಿ ಬದುಕುವ ಅವಕಾಶ ನಿಮಗಿದೆ. ಆದ್ದರಿಂದ ಹೆಲ್ಮೆಟ್ ಧರಿಸಿ ಪ್ರಯಾಣ ಮಾಡಿ ಎಂಬ ಸಂದೇಶವನ್ನು ಜೆಸಿಎ ಎಂಬ ಸಂಸ್ಥೆಯು ಕಿರು ಪ್ರಹಸನದ ಮೂಲಕ ಜನರಿಗೆ ತಲುಪಿಸುತ್ತಿದೆ. ತಮಿಳುನಾಡು ಸಂಚಾರಿ ಪೊಲೀಸರು ಸಹ ಈ ಅಭಿಯಾನದ ಜೊತೆ ಕೈ ಜೋಡಿಸಿದ್ದಾರೆ.
ಅಪಘಾತವಾದಾಗ ಇದು ನನಗೆ ಸಂಬಂಧಿಸಿದ್ದಲ್ಲ ಎಂದು ಜನರು ಅಸಡ್ಡೆ ಮಾಡುತ್ತಾರೆ. ಅವರಿಗೆ ಅಪಘಾತವಾದಾಗ ತಪ್ಪಿನ ಅರಿವಾಗುತ್ತದೆ. ಆದ್ದರಿಂದ ಅಪಘಾತದ ಬಗ್ಗೆ ಅರಿವು ಮೂಡಿಸಲು ಈ ಅಭಿಯಾನ ಕೈಗೊಳ್ಳಲಾಗಿದೆ ಎಂದು ಟಿ. ತವಾಮಣಿ ಅವರು ಹೇಳಿದ್ದಾರೆ.












Click it and Unblock the Notifications