ಜೂ 9 ರೊಳಗೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್‌ನನ್ನು ಬಂಧಿಸಿ, ಇಲ್ಲದಿದ್ದರೆ..: ಮೋದಿಗೆ ರೈತ ನಾಯಕರ ಎಚ್ಚರಿಕೆ
ನವದೆಹಲಿ, ಜೂನ್ 02: ಕುಸ್ತಿ ಸಂಸ್ಥೆಯ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಹೋರಾಟದಲ್ಲಿ ಭಾರತದ ಪ್ರಮುಖ ಕ್ರೀಡಾಪಟುಗಳನ್ನು ಬೆಂಬಲಿಸುತ್ತಿರುವ ರೈತ ಮುಖಂಡರು ಕೇಂದ್ರಕ್ಕೆ ಹೊಸ ಎಚ್ಚರಿಕೆ ನೀಡಿದ್ದಾರೆ. ಅವರನ್ನು ಬಂಧಿಸಿ ಅಥವಾ ದೊಡ್ಡ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಅವರಿಗೆ ನೇರ ಸಂದೇಶ ರವಾನಿಸಿದ್ದಾರೆ.
'ಕುಸ್ತಿಪಟುಗಳ ಸಂಕಷ್ಟಗಳನ್ನು ಸರ್ಕಾರ ಪರಿಹರಿಸಬೇಕು. ಅವರನ್ನು (ಬ್ರಿಜ್ ಭೂಷಣ್ ಶರಣ್ ಸಿಂಗ್) ಬಂಧಿಸಬೇಕು ಎಂದು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಇಲ್ಲದಿದ್ದರೆ, ನಾವು ಜೂನ್ 9 ರಂದು ದೆಹಲಿಯ ಜಂತರ್ ಮಂತರ್‌ಗೆ ಕುಸ್ತಿಪಟುಗಳೊಂದಿಗೆ ತೆರಳಿ ರಾಷ್ಟ್ರದಾದ್ಯಂತ ಪಂಚಾಯ್ತಿ ನಡೆಸುತ್ತೇವೆ' ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.

'ಕುಸ್ತಿಪಟುಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕು. ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನವಾಗಬೇಕು' ಎಂದು ರಾಕೇಶ್ ಟಿಕಾಯತ್ ತಿಳಿಸಿದರು.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡುವ ಮೂಲಕ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ.
ರೈತ ಸಂಘಗಳು ಉತ್ತರ ಪ್ರದೇಶದಲ್ಲಿ ಖಾಪ್ ಮಹಾಪಂಚಾಯತ್ ಮತ್ತು ನಿನ್ನೆ ಪಂಜಾಬ್, ಹರಿಯಾಣದಲ್ಲಿ ಕುಸ್ತಿಪಟುಗಳಿಗೆ ಪರ ಒಗ್ಗಟ್ಟಿನಿಂದ ಸರಣಿ ಪ್ರತಿಭಟನೆಗಳನ್ನು ನಡೆಸಿವೆ.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಿದ ನಂತರ ಕುಸ್ತಿಪಟುಗಳು ಹೊಸ ಸಂಸತ್ ಭವನದ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ ದೆಹಲಿ ಪೊಲೀಸ್ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಒಲಂಪಿಕ್ ಮತ್ತು ವಿಶ್ವ ಚಾಂಪಿಯನ್ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಂಗೀತಾ ಫೋಗಟ್ ನಿರ್ಗಮಿತ ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವುದಾಗಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭರವಸೆ ನೀಡಿದ್ದಾರೆ. ಆದರೆ ಬಿಜೆಪಿ ಸಂಸದರ ಬಂಧನವಾಗುವುದು ಇನ್ನೂ ಖಚಿತಪಡಿಸಿಲ್ಲ.

'ಸರ್ಕಾರವು ನಿಷ್ಪಕ್ಷಪಾತ ತನಿಖೆಗೆ ಒಲವು ಹೊಂದಿದೆ. ನಿಮ್ಮೆಲ್ಲರಿಗೂ ನ್ಯಾಯವನ್ನು ತಲುಪಿಸಬೇಕೆಂದು ಬಯಸುತ್ತೇವೆ. ಆದರೆ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದ ನಂತರ ಅದು ಸಂಭವಿಸುತ್ತದೆ' ಎಂದು ಠಾಕೂರ್ ಹೇಳಿದ್ದಾರೆ.
ಕುಸ್ತಿಪಟುಗಳು ಮಂಗಳವಾರ ಹರಿದ್ವಾರಕ್ಕೆ ತೆರಳಿ ಪದಕವನ್ನು ಗಂಗೆಯಲ್ಲಿ ಮುಳುಗಿಸುವುದಾಗಿ ಘೋಷಿಸಿದ್ದರು. ಇದನ್ನು ತಡೆಯುವ ಮೂಲಕ ಖಾಪ್ ಮತ್ತು ರೈತ ಮುಖಂಡರು ಮನವೊಲಿಸಿದರು. ಮುಖಂಡರು ಕುಸ್ತಿಪಟುಗಳಿಂದ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಐದು ದಿನಗಳ ಸಮಯವನ್ನು ಕೋರಿದರು.
ಕುಸ್ತಿಪಟುಗಳ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು (ಪ್ರಥಮ ಮಾಹಿತಿ ವರದಿ) ದಾಖಲಿಸಿದ್ದಾರೆ. ಅವುಗಳಲ್ಲಿ ಒಂದು ಅಪ್ರಾಪ್ತ ಕುಸ್ತಿಪಟುವಿನ ಲೈಂಗಿಕ ಕಿರುಕುಳದ ಆರೋಪವಿದೆ. ಇದನ್ನು ಲೈಂಗಿಕ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ದಾಖಲಿಸಲಾಗಿದೆ.












Click it and Unblock the Notifications