ಕರ್ನಾಟಕ ಚುನಾವಣಾ ಪ್ರಚಾರದಿಂದ ಸೀದಾ ಕುಸ್ತಿಪಟುಗಳ ಪ್ರತಿಭಟನಾ ಸ್ಥಳಕ್ಕೆ ಪ್ರಿಯಾಂಕಾ ಗಾಂಧಿ!
ನವದೆಹಲಿ, ಏಪ್ರಿಲ್. 29: ದೆಹಲಿಯ ಜಂತರ್ ಮಂತರ್‌ನಲ್ಲಿ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕುಸ್ತಿಪಟುಗಳನ್ನು ಭೇಟಿ ಮಾಡಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ಸರಣಿಯಲ್ಲಿ ಪಾಲ್ಗೊಂಡಿದ್ದ ಅವರು ಶನಿವಾರ ಬೆಳಗ್ಗೆ ಜಂತರ್ ಮಂತರ್ ತಲುಪಿದ್ದಾರೆ. ಇದಾದ ನಂತರವೂ ಚುನಾವಣಾ ನಡೆಯಲಿರುವ ಕರ್ನಾಟಕದಲ್ಲಿ ಪ್ರಚಾರ ನಡೆಸಲಿದ್ದಾರೆ. ಜಂತರ್ ಮಂತರ್‌ನಲ್ಲಿ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರಂತಹ ಮಹಿಳಾ ಕುಸ್ತಿಪಟುಗಳೊಂದಿಗೆ ಸಂವಾದ ನಡೆಸಿದ್ದಾರೆ.

ಏಳು ಮಹಿಳಾ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳದ ಆರೋಪದ ಮೇಲೆ ದೆಹಲಿ ಪೊಲೀಸರು ಶುಕ್ರವಾರ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಈ ವೇಳೆ ಪೊಲೀಸರು ಎಫ್‌ಐಆರ್ ಪ್ರತಿಯನ್ನು ತೋರಿಸಬೇಕೆಂದು ಒತ್ತಾಯಿಸಿದ ಪ್ರಿಯಾಂಕಾ ಗಾಂಧಿ, ಬಿಜೆಪಿ ನಾಯಕನ ವಿರುದ್ಧದ ಪ್ರತಿಭಟನೆಗಳು ಮತ್ತು ಆರೋಪಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಪ್ರತಿಕ್ರಿಯಿಸದ ಕಾರಣ ತನಗೆ ಅವರಿಂದ ಅಂತಹ ಯಾವುದೇ 'ನಿರೀಕ್ಷೆ' ಇಲ್ಲ ಎಂದು ಟೀಕಿಸಿದ್ದಾರೆ.
"ಪ್ರಧಾನಿ ಮೋದಿ ಈ ಕುಸ್ತಿಪಟುಗಳ ಬಗ್ಗೆ ಕಾಳಜಿ ವಹಿಸಿದ್ದರೆ, ಅವರು ಕನಿಷ್ಠ ಅವರೊಂದಿಗೆ ಮಾತನಾಡುತ್ತಿದ್ದರು. ಇವರುಗಳು ದೇಶಕ್ಕಾಗಿ ಪದಕಗಳನ್ನು ಗೆದ್ದಾಗ ಅವರನ್ನು ಚಹಾ ಕೂಟಕ್ಕೆ ಕರೆದಿದ್ದರು. ಹಾಗಾಗಿ ಅವರ ಜೊತೆ ಮಾತಾಡಿ, ಅವರು ನಮ್ಮ ಹುಡುಗಿಯರೇ" ಎಂದು ಹೇಳಿದ್ದಾರೆ.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬೆಂಬಲ ಸೂಚಿಸಿದ್ದಾರೆ...#priyankagandhi #jantharmanthar #breakingnews #athletics pic.twitter.com/fFkyYyiVO1
— oneindiakannada (@OneindiaKannada) April 29, 2023
"ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ ಏನಿದೆ ಎಂಬುದು ಯಾರಿಗೂ ತಿಳಿದಿಲ್ಲ. ಅವರು ಅದನ್ನು ಏಕೆ ತೋರಿಸುತ್ತಿಲ್ಲ..? ಈ ಕುಸ್ತಿಪಟುಗಳು ಪದಕಗಳನ್ನು ಗೆದ್ದಾಗ ನಾವೆಲ್ಲರೂ ಟ್ವೀಟ್ ಮಾಡಿ ಹೆಮ್ಮೆ ಪಡುತ್ತೇವೆ. ಆದರೆ ಇಂದು ಅವರಿಗೆ ನ್ಯಾಯ ಸಿಗದೆ ರಸ್ತೆಯಲ್ಲೇ ಕುಳಿತಿದ್ದಾರೆ. ಈ ಎಲ್ಲಾ ಮಹಿಳಾ ಕುಸ್ತಿಪಟುಗಳು ಈ ಹಂತಕ್ಕೆ ಬರಲು ಸಾಕಷ್ಟು ಕಷ್ಟಪಡುತ್ತಾರೆ. ಸರ್ಕಾರವು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಉಳಿಸಲು ಏಕೆ ಯತ್ನಿಸುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಪ್ರಿಯಾಂಕಾ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ. ಬಿಜೆಪಿ ಮತ್ತು ಅದರ ನಾಯಕರ ದುರಹಂಕಾರವು ಭಾರತದ ಹೆಮ್ಮೆಯ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಬುಧವಾರ ಟ್ವೀಟ್‌ನಲ್ಲಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದರು.
ಮಂಗಳವಾರ ದೇಶದ ಅಗ್ರ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಅವರನ್ನು ಬಂಧಿಸುವವರೆಗೂ ಆಂದೋಲನವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಬೆಂಬಲ ನೀಡಿದ ಪ್ರಿಯಾಂಕಾ ಗಾಂಧಿ, ಕ್ರೀಡಾಪಟುಗಳನ್ನು ಗೌರವಿಸಬೇಕು ಮತ್ತು ಅವರ ಗೆಲುವು ನಮ್ಮ ಗೆಲುವು ಎಂದು ಹೇಳಿದ್ದಾರೆ.
''ಮಹಿಳಾ ಆಟಗಾರ್ತಿಯರ ಗೆಲುವು ಉಳಿದವರಿಗಿಂತ ದೊಡ್ಡದು, ಸಂಸತ್ತಿನ ಮುಂದಿನ ರಸ್ತೆಯಲ್ಲಿ ಕಣ್ಣೀರು ಹಾಕುತ್ತಾ ಕುಳಿತಿದ್ದಾರೆ. ಹಿಂದಿನಿಂದಲೂ ನಡೆಯುತ್ತಿರುವ ಶೋಷಣೆ ವಿರುದ್ಧ ಅವರ ಮನವಿಯನ್ನು ಆಲಿಸುವವರಿಲ್ಲ. ನಮ್ಮ ಈ ಸಹೋದರಿಯರನ್ನು ಬೆಂಬಲಿಸೋಣ. ಇದು ದೇಶದ ಗೌರವದ ವಿಷಯವಾಗಿದೆ" ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications