Wrestlers' Protests: ಕಾಂಗ್ರೆಸ್ ಇದ್ದಿದ್ದರೆ ಈಗಾಗಲೇ ಆರೋಪಿ ಅಮಾನತುಗೊಂಡಿರುತ್ತಿದ್ದ- ಬಾಕ್ಸರ್ ವಿಜೇಂದರ್ ಸಿಂಗ್
ನವದೆಹಲಿ, ಮೇ 31: ದೇಶದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ಬೆನ್ನಲ್ಲೇ ಇಂಡಿಯಾ ಗೇಟ್ ಬಳಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ. ಏತನ್ಮಧ್ಯೆ, ಈ ಗಂಭೀರ ವಿಚಾರದ ಬಗ್ಗೆ ವಿವರವಾಗಿ ಚರ್ಚಿಸಲು ರೈತ ಮುಖಂಡ ರಾಕೇಶ್ ಟಿಕಾಯತ್ ಅವರು ನಾಳೆ 'ಮಹಾಪಂಚಾಯತ್'ಗೆ ಕರೆ ನೀಡಿದ್ದಾರೆ.
ನಿನ್ನೆ ಪ್ರತಿಭಟನಾನಿರತ ಕುಸ್ತಿಪಟುಗಳು ತಮ್ಮ ಒಲಂಪಿಕ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಗಂಗಾ ನದಿಯಲ್ಲಿ ಮುಳುಗಿಸುವುದನ್ನು ರೈತ ಮುಖಂಡ ನರೇಶ್ ಟಿಕಾಯತ್ ಅವರು ಯಶಸ್ವಿಯಾಗಿದ್ದಾರೆ. ಆ ನಂತರ ರೈತ ಮುಖಂಡರು ಬಿಜೆಪಿ ಸಂಸದ ಹಾಗೂ ಆರೋಪಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದ್ದಾರೆ. ಇದಕ್ಕೆ ಐದು ದಿನಗಳ ಕಾಲ ಗಡುವನ್ನೂ ಸಹ ನೀಡಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಬಾಕ್ಸರ್ ವಿಜೇಂದರ್ ಸಿಂಗ್, 'ಕಾಂಗ್ರೆಸ್ ಆಡಳಿತದಲ್ಲಿ ಇದು ಸಂಭವಿಸಿದ್ದರೆ, ಸಚಿವರನ್ನು ಈಗಲೇ ಅಮಾನತುಗೊಳಿಸಲಾಗುತ್ತಿತ್ತು' ಎಂದು ಹೇಳಿದ್ದಾರೆ.
'ಬೇಟಿ ಬಚಾವೋ ಬೇಟಿ ಪಢಾವೋ' ಘೋಷಣೆಯು ಈಗ ಟೊಳ್ಳಾಗಿದೆ ಮತ್ತು 'ಬೇಟಿ ಭಾಜ್ಪಾ ಕೆ ನೇತಾಂ ಸೇ ಬಚಾವೋ' ( ಬಿಜೆಪಿ ನಾಯಕರಿಂದ ಹೆಣ್ಣು ಮಕ್ಕಳನ್ನು ಉಳಿಸಿ ) ಎಂದು ಕಾಂಗ್ರೆಸ್ ಮುಖಂಡ ದೀಪೇಂದರ್ ಹೂಡಾ ಕುಸ್ತಿಪಟುಗಳ ಪ್ರತಿಭಟನೆಯ ಕುರಿತು ವಾಗ್ದಾಳಿ ನಡೆಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಡಿಎಂಕೆ ನಾಯಕಿ ಹಾಗೂ ಸಂಸದೆ ಕನಿಮೋಳಿ, 'ತಮ್ಮ ಹಕ್ಕು ಮತ್ತು ಗೌರವಕ್ಕಾಗಿ ಹೋರಾಡುತ್ತಿರುವ ಈ ಮಹಿಳೆಯರಿಗೆ ( ಕುಸ್ತಿಪಟುಗಳು ) ಏನಾಗುತ್ತಿದೆ ಎಂಬುದನ್ನು ನೋಡಿದರೆ ನಿಜವಾಗಿಯೂ ದುಃಖವಾಗುತ್ತದೆ. ಸರ್ಕಾರ ಅವರ ಮಾತನ್ನು ಆಲಿಸಬೇಕು ಮತ್ತು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಹಾಪಂಚಾಯತ್
ಲೈಂಗಿಕ ಕಿರುಕುಳ ಆರೋಪದ ಮೇಲೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಚರ್ಚಿಸಲು ಗುರುವಾರ ಮುಜಾಫರ್‌ನಗರದ ಸೊರಮ್ ಗ್ರಾಮದಲ್ಲಿ 'ಮಹಾಪಂಚಾಯತ್' ನಡೆಯಲಿದೆ ಎಂದು ಬಿಕೆಯು ಮುಖಂಡ ನರೇಶ್ ಟಿಕಾಯತ್ ಹೇಳಿದ್ದಾರೆ.
ಈ ವಿಷಯವನ್ನು ಮಹಾಪಂಚಾಯತ್‌ನಲ್ಲಿ ವಿವರವಾಗಿ ಚರ್ಚಿಸಲಾಗುವುದು ಎಂದು ಬಲ್ಯಾನ್ ಖಾಪ್ ಮುಖ್ಯಸ್ಥ ಟಿಕಾಯತ್ ಮಂಗಳವಾರ ರಾತ್ರಿ ತಿಳಿಸಿದ್ದಾರೆ. ಭಾರತದ ಕೆಲವು ಅತ್ಯುತ್ತಮ ಕುಸ್ತಿಪಟುಗಳು ನೂರಾರು ಬೆಂಬಲಿಗರೊಂದಿಗೆ ಹರಿದ್ವಾರದ ಗಂಗಾ ದಡದಲ್ಲಿ ಜಮಾಯಿಸಿ, ತಮ್ಮ ವಿಶ್ವ ಮತ್ತು ಒಲಿಂಪಿಕ್ ಪದಕಗಳನ್ನು ಪವಿತ್ರ ನದಿಯಲ್ಲಿ ಮುಳುಗಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಖಾಪ್ ಮತ್ತು ರೈತ ಮುಖಂಡರು ಕುಸ್ತಿಪಟುಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಐದು ದಿನಗಳ ಕಾಲಾವಕಾಶವನ್ನು ಕೋರಿದ್ದಾರೆ.
ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಮಂಗಳವಾರ ಹರ್ ಕಿ ಪೌರಿಗೆ ತೆರಳಿ ಪ್ರತಿಭಟಿಸಿದ್ದಾರೆ. ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಮುಂದಿನ ಕ್ರಮವನ್ನು ನಿರ್ಧರಿಸಲು ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ರಾಜಸ್ಥಾನ ಮತ್ತು ದೆಹಲಿಯಿಂದ ಬಂದಿರುವ ವಿವಿಧ ಖಾಪ್‌ಗಳ ಹಲವಾರು ಪ್ರತಿನಿಧಿಗಳು ಮತ್ತು ಅವರ ಮುಖ್ಯಸ್ಥರು ಮಹಾಪಂಚಾಯತ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಟಿಕಾಯತ್ ಹೇಳಿದ್ದಾರೆ.

ಮೇ 28 ರಂದು ದೆಹಲಿ ಪೊಲೀಸರು ಕುಸ್ತಿಪಟುಗಳನ್ನು ಬಂಧಿಸಿ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಗಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.












Click it and Unblock the Notifications