Sabarimala: ಈ ದಿನ ಶಬರಿಮಲೆಗೆ ಮಹಿಳೆಯರು ಮತ್ತು ಮಕ್ಕಳು ಬರಬಾರದು! ದೇವಸಂ ಮಂಡಳಿ ಮನವಿ
ಪತ್ತನಂತಿಟ್ಟ ಜನವರಿ 12: ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ಇದೇ ಜನವರಿ 14 ಮತ್ತು 15ರಂದು ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಆ ದಿನಾಂಕದಂದು ಮಹಿಳೆಯರು ಮತ್ತು ಮಕ್ಕಳು ಬರಬಾರದು ಎಂದು ತಿರುವಾಂಕೂರು ದೇವಸಂ ಮಂಡಳಿ ಸೂಚಿಸಿದೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪನ ದೇವಸ್ಥಾನದ ಮಕರ ದೀಪ ಪೂಜಾ ಅವಧಿ ಮುಕ್ತಾಯವಾಗುತ್ತಿದೆ. 15ರಂದು ಮಕರ ಜ್ಯೋತಿ ಪೂಜೆ ನಡೆಯಲಿದೆ. ಈಗಾಗಲೇ ದೇವಸ್ಥಾನ ಭಕ್ತರಿಂದ ತುಂಬಿ ತುಳುಕುತ್ತಿದೆ. ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ತಿರುವಾಂಕೂರು ದೇವಸಂ ಮಂಡಳಿಯು 'ಸ್ಪಾಟ್ ಬುಕಿಂಗ್' ಎಂದು ಕರೆಯಲ್ಪಡುವ, ದೇವಸ್ಥಾನಕ್ಕೆ ಆಗಮಿಸಿದ ನಂತರ ದರ್ಶನ ಪಡೆಯುವ ಬುಕಿಂಗ್ ಪ್ರಕ್ರಿಯೆಯನ್ನು ನಿನ್ನೆಯಿಂದ ಸ್ಥಗಿತಗೊಳಿಸಿದೆ.

ಮಕರ ಜ್ಯೋತಿ ದರ್ಶನ
ಸದ್ಯ ಆನ್‌ಲೈನ್ ಬುಕ್ಕಿಂಗ್ ಮಾತ್ರ ಜಾರಿಯಲ್ಲಿದೆ. ಮಕರ ಜ್ಯೋತಿ ದರ್ಶನಕ್ಕೆ ಜನವರಿ 15ರಂದು ಕೇವಲ 40,000 ಭಕ್ತರು ಮಾತ್ರ ಆನ್‌ಲೈನ್ ಬುಕ್ಕಿಂಗ್ ಕಾಯ್ದಿರಿಸಿಕೊಳ್ಳಬಹುದು. ಕಾಯ್ದಿರಿಸಿಕೊಂಡವರಿಗೆ ಮಾತ್ರ ಮಕರ ಜ್ಯೋತಿ ದರ್ಶನಕ್ಕೆ ಅವಕಾಶವಿರುತ್ತದೆ.
ಮರುದಿನ ಜ.16ರಂದು 50 ಸಾವಿರ ಭಕ್ತರಿಗೆ ಹಾಗೂ ಜ.17ರಿಂದ 20ರವರೆಗೆ ಪ್ರತಿದಿನ 60 ಸಾವಿರ ಭಕ್ತರಿಗೆ ಆನ್‌ಲೈನ್ ಬಿಕ್ಕಿಂಗ್‌ಗೆ ಅವಕಾಶವಿರುತ್ತದೆ.
ಸದ್ಯಕ್ಕೆ ಶಬರಿಮಲೆ ಅಯ್ಯಪ್ಪನ ದೇವಸ್ಥಾನಕ್ಕೆ ಪ್ರತಿದಿನ ಒಂದು ಲಕ್ಷ ಭಕ್ತರು ಭೇಟಿ ನೀಡುತ್ತಿದ್ದಾರೆ. ಇದರಲ್ಲಿ 80,000 ಜನರು 'ಆನ್‌ಲೈನ್' ಬುಕಿಂಗ್ ಮೋಡ್ ಮೂಲಕ ದರ್ಶನ ಪಡೆಯುತ್ತಿದ್ದಾರೆ. ಇದರಿಂದ ಭಕ್ತರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ದರ್ಶನ ಪಡೆಯಬೇಕಾಗಿದೆ.
ಮಕರ ದೀಪ ಪೂಜೆ ವೇಳೆ ಭಕ್ತಾದಿಗಳ ದಂಡೇ ಇರಲಿದ್ದು, ಜನವರಿ 14 ಮತ್ತು 15 ರಂದು ಮಹಿಳೆಯರು ಮತ್ತು ಮಕ್ಕಳು ದೇವಸ್ಥಾನಕ್ಕೆ ಬರಬಾರದು ಎಂದು ದೇವಸಂ ಮಂಡಳಿ ಅಧ್ಯಕ್ಷ ಪ್ರಶಾಂತ್ ಮನವಿ ಮಾಡಿದ್ದಾರೆ. ಜನವರಿ 16ರಿಂದ 20ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಅಂದು ದರ್ಶನ ಪಡೆಯಬಹುದು ಎಂದರು.

ಜನವರಿ 20ರವರೆಗೆ ಮಾತ್ರ ಭಕ್ತರಿಗೆ ಅವಕಾಶ
ಮಕರ ದೀಪ ಪೂಜೆ ಮುಗಿದ ಬಳಿಕ ಜನವರಿ 20ರವರೆಗೆ ದೇವಸ್ಥಾನ ತೆರೆದಿರುತ್ತದೆ. ಜನವರಿ 20ರಂದು ರಾತ್ರಿ ದೇವಸ್ಥಾನದಲ್ಲಿ ಪೂಜೆ ಮಾಡಿದ ನಂತರ ಭಕ್ತರಿಗೆ ಪ್ರವೇಶ ನೀಡಲಾಗುವುದಿಲ್ಲ. ಮರುದಿನ ಬಂಡಲ ರಾಜಮನೆತನದವರು ಅಯ್ಯಪ್ಪನ ದರ್ಶನ ಪಡೆದ ನಂತರ ಮಂಡಲ-ಮಕರ ದೀಪ ಪೂಜೆಯ ಅವಧಿ ಮುಗಿದು ದೇವಾಲಯವನ್ನು ಮುಚ್ಚಲಾಗುತ್ತದೆ.
ಸಮಯ
ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವ ಆ ವಿಶೇಷ ಶುಭ ಮುಹೂರ್ತದಲ್ಲಿ ಆಕಾಶದಲ್ಲಿ ಬೆಳಗುವ ನಕ್ಷತ್ರವೇ ಮಕರ ಜ್ಯೋತಿ. ಅಂದರೆ ಮಕರ ಜ್ಯೋತಿಯನ್ನು ಆಕಾಶದಲ್ಲಿ ಕಾಣಿಸಿಕೊಳ್ಳುವ ನಕ್ಷತ್ರ ಎಂದು ಹೇಳಲಾಗುತ್ತದೆ .ಶಬರಿಮಲೆಯಿಂದ 4 ಕಿಲೋಮೀಟರ್ ದೂರದಲ್ಲಿರುವ ಪೊನ್ನಂಬಲಮೇಡುವಿನಲ್ಲಿ 2024 ರ ಜನವರಿ 14 ರಂದು ಭಾನುವಾರ ಸಂಜೆ 6:00 ರಿಂದ 8:00 ಗಂಟೆಯ ನಡುವೆ ಮಕರ ಜ್ಯೋತಿ ಗೋಚರಿಸಲಿದೆ.
ಅದು, ಮಕರ ಮಾಸದ ಮೊದಲ ದಿನದಂದು ಉದಯಿಸುವ ನಕ್ಷತ್ರವನ್ನು ಮಕರಜ್ಯೋತಿ ಎಂದು ಕರೆಯಲಾಗುತ್ತದೆ. ಈ ನಕ್ಷತ್ರವು ಸೂರ್ಯಾಸ್ತದ ನಂತರ ಹೆಚ್ಚು ಗೋಚರಿಸುತ್ತದೆ ಮತ್ತು ಸ್ವಲ್ಪ ಸಮಯದೊಳಗೆ ಕಣ್ಮರೆಯಾಗುತ್ತದೆ. ಪಂದಳಂನಿಂದ ಶಬರಿಮಲೆಗೆ ಅಯ್ಯಪ್ಪನ ತಿರುವಾಭರಣವನ್ನು ತರುವ ದಿನದಂದು ಈ ನಕ್ಷತ್ರವು ಆಕಾಶದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.












Click it and Unblock the Notifications