Bihar Workers: ನಮ್ಮ ಸಹೋದರರನ್ನು ರಕ್ಷಿಸುತ್ತೇವೆ, ವಲಸಿಗರ ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ಹೇಳಿದ್ದೇನು?
ಬಿಹಾರದ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ನಡೆದಿರುವ ದಾಳಿ ಕುರಿತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ. 'ನಮ್ಮ ಸಹೋದರರನ್ನು ರಕ್ಷಿಸುತ್ತೇವೆ' ಎಂದು ಎಂಕೆ ಸ್ಟಾಲಿನ್ ವಲಸೆ ಕಾರ್ಮಿಕರ ಅಭಯಹಸ್ತ ನೀಡಿದ್ದಾರೆ.
ನವದೆಹಲಿ, ಮಾರ್ಚ್ 04: ಬಿಹಾರದ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ನಡೆದಿರುವ ದಾಳಿ ಕುರಿತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ. ಈ ದಾಳಿಯ ಕುರಿತ ವರದಿಗಳು ಸುಳ್ಳು ಎಂದು ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಇದರ ನಡುವೆಯೇ 'ನಮ್ಮ ಸಹೋದರರನ್ನು ರಕ್ಷಿಸುತ್ತೇವೆ' ಎಂದು ಎಂಕೆ ಸ್ಟಾಲಿನ್ ವಲಸೆ ಕಾರ್ಮಿಕರ ಅಭಯಹಸ್ತ ನೀಡಿದ್ದಾರೆ.
ಈ ಕುರಿತು ಶನಿವಾರ ಮಾತನಾಡಿರುವ ಅವರು, 'ವಲಸೆ ಕಾರ್ಮಿಕರು ಭಯಪಡುವ ಅಗತ್ಯವಿಲ್ಲ. ಯಾರಾದರೂ ನಿಮಗೆ ಬೆದರಿಕೆ ಹಾಕಿದರೆ ಸಹಾಯವಾಣಿಗೆ ಕರೆ ಮಾಡಿ. ತಮಿಳುನಾಡು ಸರ್ಕಾರ ಮತ್ತು ಜನರು ವಲಸೆ ಸಹೋದರರನ್ನು ರಕ್ಷಿಸಲು ನಿಲ್ಲುತ್ತಾರೆ' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಬಿಹಾರದಿಂದ ವಲಸೆ ಬಂದ ಕಾರ್ಮಿಕರ ಮೇಲೆ ದಾಳಿಗಳ ಬಗ್ಗೆ ವದಂತಿಗಳನ್ನು ಹರಡದಂತೆ ತಮಿಳುನಾಡು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ದಾಳಿಗಳ ಬಗೆಗಿನ ವದಂತಿಗಳು ಕಾರ್ಮಿಕರಲ್ಲಿ ಭೀತಿಗೆ ಕಾರಣವಾಗಿದೆ. ಈ ಕುರಿತು ಬಿಹಾರ ವಿಧಾನಸಭೆಯಲ್ಲಿ ಚರ್ಚೆಗಳು ನಡೆದಿವೆ.
ಬಿಹಾರದ ಅಧಿಕಾರಿಗಳು ತಮಿಳುನಾಡಿನ ಅಧಿಕಾರಿಗಳೊಂದಿಗೆ ವಲಸೆ ಕಾರ್ಮಿಕರನ್ನು ಭೇಟಿಯಾಗಲಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಕಚೇರಿಯ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಬಿಹಾರದಿಂದ ವಲಸೆ ಬಂದ ಕಾರ್ಮಿಕರ ಮೇಲಿನ ದಾಳಿಯ ಬಗ್ಗೆ ವದಂತಿಗಳನ್ನು ಪರಿಶೀಲಿಸಲು ಎರಡೂ ರಾಜ್ಯಗಳ ಪೊಲೀಸರು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕವನ್ನು ಸಾಧಿಸಿದ್ದಾರೆ. ವಲಸೆ ಕಾರ್ಮಿಕರು ಭಯಪಡಬೇಡಿ ಎಂದು ತಮಿಳುನಾಡಿನ ಜಿಲ್ಲಾಧಿಕಾರಿಗಳು ಹಿಂದಿಯಲ್ಲಿ ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎಲ್ಲಾ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಬಿಹಾರ ವಿಧಾನಸಭೆಯಲ್ಲಿ ತೇಜಸ್ವಿ ಯಾದವ್ ಬಿಜೆಪಿಗೆ ಒತ್ತಾಯಿಸಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವಾಲಯಕ್ಕೆ ಬಿಜೆಪಿ ನಾಯಕರು ಹೇಳಿಲಿ ಎಂದು ಸವಾಲು ಹಾಕಿದ್ದಾರೆ.

ವೀಡಿಯೋಗಳು ಆಧಾರರಹಿತವಾಗಿವೆ ಎಂದು ತಮಿಳುನಾಡು ಪೊಲೀಸರು ಸ್ಪಷ್ಟಪಡಿಸಿದ್ದಾರೆ ಎಂದು ಯಾದವ್ ಆರೋಪಿಸಿದ್ದಾರೆ.
'ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರನ್ನು ಗುರಿಯಾಗಿಸಲಾಗುತ್ತಿದೆ ಎಂಬುದು ಸಂಪೂರ್ಣ ಆಧಾರ ರಹಿತ ಎಂದು ತಮಿಳುನಾಡು ಡಿಜಿಪಿ ಸ್ಪಷ್ಟವಾಗಿ ಹೇಳಿದ್ದಾರೆ. ಬಿಹಾರದ ಜನರು ಇನ್ನು ಮುಂದೆ ತಮಿಳುನಾಡಿನಲ್ಲಿ ಸುರಕ್ಷಿತವಾಗಿಲ್ಲ ಎಂದು ಹೇಳಲಾಗುತ್ತಿದೆ. ಹಿಂಸಾಚಾರದ ಹಳೆಯ ವೀಡಿಯೊವನ್ನು ಚೇಷ್ಟೆಯಿಂದ ಹರಡಲಾಗುತ್ತಿದೆ. ಇದು ಭೀತಿಯನ್ನು ಸೃಷ್ಟಿಸಿದೆ' ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
ದಕ್ಷಿಣ ರಾಜ್ಯದಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಸುತ್ತಿರುವ ನಕಲಿ ವಿಡಿಯೋಗಳನ್ನು ಉಲ್ಲೇಖಿಸಿ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ಜೆಎಸ್ ಗಂಗ್ವಾರ್, 'ಬಿಹಾರ ಡಿಜಿಪಿ ತಮಿಳುನಾಡು ಡಿಜಿಪಿ ಜೊತೆ ಮಾತನಾಡಿದ್ದಾರೆ. ಬಿಹಾರ ಪೊಲೀಸರ ಇತರ ಹಿರಿಯ ಅಧಿಕಾರಿಗಳು ತಮಿಳುನಾಡು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ವೀಡಿಯೋಗಳು ನಕಲಿ ಮತ್ತು ದಾರಿತಪ್ಪಿಸುವಂತಿವೆ ಎಂದು ತಮಿಳುನಾಡು ಪೊಲೀಸರು ಹೇಳಿದ್ದಾರೆ' ಎಂಬುದಾಗಿ ಜೆ ಎಸ್ ಗಂಗ್ವಾರ್ ಹೇಳಿದ್ದಾರೆ.
ಆಗಸ್ಟ್ 2012: ಅಸ್ಸಾಂನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತೀಕಾರವಾಗಿ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ನಿವಾಸಿಗಳ ಮೇಲೆ ದಾಳಿ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಈಶಾನ್ಯ ಭಾರತದ ನಿವಾಸಿಗಳು ಗುಳೆ ಹೋಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಆ ವೇಳೆ ಜಗದೀಶ್ ಶೆಟ್ಟರ್ ಸರಕಾರದಲ್ಲಿ ಗೃಹ ಸಚಿವರಾಗಿದ್ದ ಆರ್ ಅಶೋಕ್, ಸ್ವತಃ ಮೆಜೆಸ್ಟಿಕ್ ಕೇಂದ್ರ ರೈಲು ನಿಲ್ದಾಣಕ್ಕೆ ತೆರಳಿ, ಜನರು ಗಾಳಿಸುದ್ದಿಗೆ ಕಿವಿಗೊಡಬಾರದು, ಬೆಂಗಳೂರು ಅತ್ಯಂತ ಸುರಕ್ಷಿತವಾಗಿದ್ದು, ಎಲ್ಲರಿಗೂ ಎಲ್ಲಾ ರೀತಿಯ ರಕ್ಷಣೆ ನೀಡುವುದಾಗಿ ವಾಗ್ದಾನ ನೀಡಿದ್ದರು.












Click it and Unblock the Notifications