• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಳಿಸುದ್ದಿ : 2018ರ ಚುನಾವಣೆಯಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ!

By Prasad
|

ಬೆಂಗಳೂರು, ಏಪ್ರಿಲ್ 17 : ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಮಣ್ಣುಮುಕ್ಕಿಸಿ ಕಾಂಗ್ರೆಸ್ ಜಯಭೇರಿ ಬಾರಿಸುವ ಸೂಚನೆ ಸಿಗುತ್ತಿದ್ದಂತೆ ಮೊದಲು ಪಟಾಕಿಗೆ ಕಿಡಿ ಹಚ್ಚಿದವರು, ಕಾರ್ಯಕರ್ತರ ಬಾಯಿಗೆ ಪೇಡೆ ಇಟ್ಟವರು ಜೆಡಿಎಸ್ ಪಕ್ಷದವರು.

ಈ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೇಗೆ ಗೆದ್ದಿತೆಂಬ ಸಂಗತಿ ರಹಸ್ಯವಾಗೇನೂ ಉಳಿದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದಾಗಲೇ ಎಲ್ಲವೂ ನಿಚ್ಚಳವಾಗಿತ್ತು.

ಸೋತು ಸುಣ್ಣವಾಗಿರುವ ಭಾರತೀಯ ಜನತಾ ಪಕ್ಷದ ನಾಯಕರು ಬಿಜೆಪಿ ಕಚೇರಿಯಲ್ಲಿ ಕದ ಹಾಕಿಕೊಂಡು ಆತ್ಮವಿಮರ್ಶೆಯಲ್ಲಿ ತೊಡಗಿರುವ ಸಮಯದಲ್ಲಿ ಬೇರೆ ರೀತಿಯ ಲೆಕ್ಕಾಚಾರಗಳು ಈಗಾಗಲೆ ರಾಜಕೀಯ ಅಂಗಳದಲ್ಲಿ ಶುರುವಾಗಿವೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕೇವಲ ಒಂದು ವರ್ಷವಿರುವಾಗಲೇ ರಾಜಕೀಯ ಚದುರಂಗದಾಟದ ದಾಳಗಳು ಉರುಳಲು ಆರಂಭವಾಗಿವೆ.

ಬಲ್ಲ ಮೂಲಗಳ ಪ್ರಕಾರ, ಪರೋಕ್ಷವಾಗಿಯಾದರೂ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಮಾಡಿಕೊಂಡ ಮೈತ್ರಿಕೂಟ ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಮುಂದುವರಿಯುವ ಎಲ್ಲ ಲಕ್ಷಣಗಳೂ ದೃಗ್ಗೋಚರಿಸುತ್ತಿವೆ. ಇದರರ್ಥ, ಇಡೀ ದೇಶದಾದ್ಯಂತ ಮೆರೆಯುತ್ತಿರುವ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರದಿಂದ ದೂರವಿಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ರಚಿಸುವುದು ಸ್ಫಟಿಕದಷ್ಟೇ ಸ್ಪಷ್ಟ.

ದೇವೇಗೌಡರ ಮನದಲ್ಲೇನುದೆ?

ದೇವೇಗೌಡರ ಮನದಲ್ಲೇನುದೆ?

ದೂರದೃಷ್ಟಿಕೋನವಿಲ್ಲದೆ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಆಡಿದ ಆಟವನ್ನು ದೇವೇಗೌಡರು ಎಂದೂ ಆಡುವುದಿಲ್ಲ ಎಂಬುದು ಅವರನ್ನು ಆಳವಾಗಿ ಬಲ್ಲ ರಾಜಕೀಯ ಪಂಡಿತರ ಖಚಿತವಾದ ಅಭಿಪ್ರಾಯ. ಅಲ್ಲದೆ, ಯಾವ ದೂರದೃಷ್ಟಿಯಿಟ್ಟುಕೊಂಡು ಗೌಡರು ಈ ಆಟವಾಡುತ್ತಿದ್ದಾರೆ ಎಂಬುದೂ ತಿಳಿಯದ ಸಂಗತಿಯಲ್ಲ.

ಉತ್ತರಪ್ರದೇಶದಲ್ಲಿ ಏನಾಯಿತು?

ಉತ್ತರಪ್ರದೇಶದಲ್ಲಿ ಏನಾಯಿತು?

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಡನೆ ಕಾಂಗ್ರೆಸ್ ನಡೆಸಿದ ಅಪವಿತ್ರ ಮೈತ್ರಿಕೂಟದ ಪರಿಣಾಮ ಏನಾಯಿತೆಂದು ಎಲ್ಲರೂ ಬಲ್ಲರು. ಅಂಥ ದುಸ್ಸಾಹಸಕ್ಕೆ ಕಾಂಗ್ರೆಸ್ ಮತ್ತೆಂದೂ ಕೈಹಾವುದಿಲ್ಲ. ಆದರೆ, ಕರ್ನಾಟಕದ ರಾಜಕೀಯ ಸನ್ನಿವೇಶವೇ ವಿಭಿನ್ನವಾದುದು. ಅನುಕಂಪದ ಭಾರೀ ಅಲೆಗಳ ಮುಂದೆ ಇಲ್ಲಿ ಯಾರ ಹವಾನೂ ನಡೆಯಲಿಲ್ಲ.

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ

ಮೈತ್ರಿಕೂಟ ರಚಿಸಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಹೊಸದೇನೂ ಅಲ್ಲ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅವೆರಡು ಒಂದಾಗಿ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಬಿಜೆಪಿಯನ್ನು ಪಕ್ಕಕ್ಕಿಟ್ಟು ಆಡಳಿತ ನಡೆಸುತ್ತಿವೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯಾವುದೇ ರೀತಿಯ ಕಾಂಪ್ರೊಮೈಸಿಗೆ ಎರಡೂ ಪಕ್ಷಗಳು ರೆಡಿಯಾಗಿ ನಿಂತಿವೆ. ಇದೇ ಬಿಜೆಪಿಗೆ ಇರುವ ನಿಜವಾದ ತಲೆನೋವು.

ಬಿಜೆಪಿ ಮತ್ತು ಜೆಡಿಎಸ್ ನಡುವೆ ಟ್ವೆಂಟಿ20

ಬಿಜೆಪಿ ಮತ್ತು ಜೆಡಿಎಸ್ ನಡುವೆ ಟ್ವೆಂಟಿ20

ಹಿಂದೆ ಭಾರತೀಯ ಜನತಾ ಪಕ್ಷದೊಡನೆ ರಾತ್ರೋರಾತ್ರಿ ಕೈಜೋಡಿಸಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಪಟ್ಟವೇರಿ ಕುಳಿತಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಧರಂಸಿಂಗ್ ಅಧಿಕಾರ ಕಳೆದುಕೊಂಡಿದ್ದರು. ಬಿಜೆಪಿ ಮತ್ತು ಜೆಡಿಎಸ್ ನಡುವೆ ಟ್ವೆಂಟಿ20 ಮ್ಯಾಚ್ ನಡೆದಿತ್ತು. ಮುಂದೇನಾಯಿತು ಎಂಬುದು ಸಿದ್ದರಾಮಯ್ಯನವರಿಗೆ ತಿಳಿಯದ ಸಂಗತಿಯೇನಲ್ಲ.

ಬಿಜೆಪಿ ತಕ್ಕಪಾಠ ಕಲಿತಿದೆ ಅಂದುಕೊಳ್ಳೋಣ

ಬಿಜೆಪಿ ತಕ್ಕಪಾಠ ಕಲಿತಿದೆ ಅಂದುಕೊಳ್ಳೋಣ

ಬೀದರ್, ದೇವದುರ್ಗ ಮತ್ತು ಹೆಬ್ಬಾಳ ಉಪಚುನಾವಣೆಯಂತೆಯೇ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ವಿಜಯಮಾಲೆ ಧರಿಸುವ ಕನಸು ಹೊತ್ತು ಅತಿಯಾದ ಆತ್ಮವಿಶ್ವಾಸದಿಂದ ಕಣಕ್ಕಲಿದಿದ್ದ ಬಿಜೆಪಿ ತಕ್ಕಪಾಠ ಕಲಿತಿದೆ ಎಂದು ಅಂದುಕೊಳ್ಳೋಣ. ಆದರೆ, ಕಾಂಗ್ರೆಸ್ಸಿಗೆ ಈ ರಾಜಕೀಯ ತಂತ್ರಗಾರಿಕೆ ಹೊಸ ಹಾದಿಯನ್ನು ಕೂಡ ಹಾಕಿಕೊಟ್ಟಿದೆ.

ರಾಹುಲ್ - ಅಖಿಲೇಶ್ ದೋಸ್ತಿಗೆ ಸೋಲು

ರಾಹುಲ್ - ಅಖಿಲೇಶ್ ದೋಸ್ತಿಗೆ ಸೋಲು

ಈ ರಾಜಕೀಯ ನಡೆಗಳು ಹೀಗೆ ಎಂದು ಹೇಳಲು ಬರುವುದಿಲ್ಲ. ಬಿಹಾರದಲ್ಲಿ ಮಾಡಿಕೊಂಡಿದ್ದ ಮಹಾಘಟಬಂಧನ್ ಭರ್ಜರಿ ಯಶಸ್ಸು ಕಂಡರೆ, ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಮಾಡಿಕೊಂಡಿದ್ದ ದೋಸ್ತಿ ಹೇಳಹೆಸರಿಲ್ಲದಂತೆ ವಿಫಲವಾಯಿತು. ಇನ್ನು ವಿಧಾನಸಭೆ ಚುನಾವಣೆ ಬರುವುದರೊಳಗೆ ಇನ್ನೂ ಏನೇನು ಒಪ್ಪಂದಗಳು, ಲೆಕ್ಕಾಚಾರಗಳು ನಡೆದಿರುತ್ತವೋ?

ಮೈತ್ರಿಕೂಟ ಸಾಧ್ಯವಿಲ್ಲ : ಬಿಎಲ್ ಶಂಕರ್

ಮೈತ್ರಿಕೂಟ ಸಾಧ್ಯವಿಲ್ಲ : ಬಿಎಲ್ ಶಂಕರ್

ಕಾಂಗ್ರೆಸ್ ನ ಹಿರಿಯ ನಾಯಕರಾದ ಬಿಎಲ್ ಶಂಕರ್ ಅವರು, ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಮಾಡಿಕೊಂಡಿದ್ದು ತಾತ್ಕಾಲಿಕ ಒಪ್ಪಂದ ಮಾತ್ರ. ಇದು ಮುಂದಿನ ಮಹಾಚುನಾವಣೆ ನಡೆಯುವವರೆಗೆ ಖಂಡಿತ ಮುಂದುವರಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಜೊತೆ ಕೈಜೋಡಿಸಿದರೆ ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದಿದ್ದಾರೆ.

ಸುರೇಶ್ ಕುಮಾರ್ ಆಶಾಭಾವನೆ

ಸುರೇಶ್ ಕುಮಾರ್ ಆಶಾಭಾವನೆ

ಆದರೆ, ಬಿಜೆಪಿಯ ಹಿರಿಯ ನಾಯಕ ಸುರೇಶ್ ಕುಮಾರ್ ಅವರು ಇಂಥ ಮೈತ್ರಿಕೂಟ ಆಗುವ ಸಂಭವನೀಯತೆ ತುಂಬಾ ಜಾಸ್ತಿಯಿದೆ ಎಂದಿದ್ದಾರೆ. ಬಿಹಾರದಲ್ಲಿ ಸೋತರೂ ಉತ್ತರಪ್ರದೇಶದಲ್ಲಿ ನಮ್ಮ ನಾಯಕರ ತಂತ್ರಗಾರಿಕೆ ಕೈಗೂಡಿರುವ ಉದಾಹರಣೆ ನೀಡುವ ಸುರೇಶ್, ಮುಂದಿನ ದಿನಗಳಲ್ಲಿ ಬಿಜೆಪಿಯ ರಾಜಕೀಯ ತಂತ್ರಗಾರಿಕೆಗಳು ಭಾರೀ ಬದಲಾವಣೆ ಕಾಣಲಿವೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಚಾಪೆಯ ಕೆಳಗೆ, ಕಾಂಗ್ರೆಸ್ ರಂಗೋಲಿ ಕೆಳಗೆ

ಬಿಜೆಪಿ ಚಾಪೆಯ ಕೆಳಗೆ, ಕಾಂಗ್ರೆಸ್ ರಂಗೋಲಿ ಕೆಳಗೆ

ಕರ್ನಾಟಕದ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಪ್ರಬಲವಾಗಿರುವ ಗುಜರಾತ್ ನಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿಂದ ಬರುವ ಫಲಿತಾಂಶ ಕರ್ನಾಟಕದ ರಾಜಕೀಯ ನಡೆಗಳ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. ಒಂದೆಡೆ ಕಾಂಗ್ರೆಸ್ ಮುಕ್ತ ದೇಶ ಆಗಬೇಕೆಂದು ನರೇಂದ್ರ ಮೋದಿಯವರು ಪಣ ತೊಟ್ಟಿದ್ದರೆ, ಬಿಜೆಪಿಯನ್ನು ಹೇಗಾದರೂ ಮಾಡಿ ತೊಲಗಿಸಬೇಕು ಎಂದು ಕಾಂಗ್ರೆಸ್ ರಂಗೋಲಿಯ ಕೆಳಗೆ ನುಸುಳಲು ಯತ್ನಿಸುತ್ತಿದೆರೇ.

English summary
Will Congress and JDS tie up in the Karnataka assembly election to be held in 2018? Just concluded by polls in Nanjangud and Gundlupet has given indication that anything is possible. Completely dejected BJP should think of some other strategy to tackle Congress-JDS allianace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X