ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ: ಮೇನಕಾ ಗಾಂಧಿ
ನವದೆಹಲಿ, ಏಪ್ರಿಲ್ 13: ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಸಾಧ್ಯವಾಗುವಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಗೆ (ಪೋಸ್ಕೊ) ತಿದ್ದುಪಡಿ ತರುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕತುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣದಿಂದ ತೀವ್ರ ಆಘಾತಕ್ಕೆ ಒಳಗಾಗಿರುವುದಾಗಿ ಅವರು ಹೇಳಿದ್ದಾರೆ. ಅವರ ಹೇಳಿಕೆಯನ್ನು ಒಳಗೊಂಡ ವಿಡಿಯೊವನ್ನು ಸಚಿವಾಲಯ ಬಿಡುಗಡೆ ಮಾಡಿದೆ. ಪೋಸ್ಕೊ ಕಾಯ್ದೆಯಲ್ಲಿ ತಿದ್ದುಪಡಿ ತರಲು ಸಂಪುಟದ ಮುಂದೆ ಪ್ರಸ್ತಾಪಿಸುವುದಾಗಿ ಅವರು ಹೇಳಿದ್ದಾರೆ.
ಅಪ್ರಾಪ್ತ ವಯಸ್ಸಿನವರ ಮೇಲೆ ಅತ್ಯಾಚಾರ ನಡೆಸುವ ಅಪರಾಧಿಗಳನ್ನು ಗಲ್ಲುಶಿಕ್ಷೆಗೆ ಗುರಿಪಡಿಸಲು ಹೊಸ ಕಾನೂನು ರಚಿಸುವುದಾಗಿ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಗುರುವಾರ ಒತ್ತಾಯಿಸಿದ್ದರು.

'ಈ ರೀತಿ ಮತ್ತೊಂದು ಮಗು ಸಂಕಟ ಅನುಭವಿಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಅಮಾನವೀಯವಾಗಿ ಅತ್ಯಾಚಾರ ಎಸಗುವವರನ್ನು ಕಡ್ಡಾಯವಾಗಿ ಗಲ್ಲುಶಿಕ್ಷೆಗೆ ಒಳಪಡಿಸುವ ಹೊಸ ಕಾನೂನನ್ನು ನಾವು ಜಾರಿಗೆ ತರುತ್ತೇವೆ. ಈ ಪುಟ್ಟ ಕಂದಮ್ಮಳ ಪ್ರಕರಣವೇ ಕೊನೆಯದ್ದಾಗಲಿದೆ' ಎಂದು ಮೆಹಬೂಬಾ ಟ್ವೀಟ್ವ ಮಾಡಿದ್ದರು.
ಜನವರಿ ತಿಂಗಳಿನಲ್ಲಿ ಕತುವಾ ಜಿಲ್ಲೆಯ ಹೀರಾನಗರ ತಾಲ್ಲೂಕಿನ ರಸನಾ ಗ್ರಾಮದಲ್ಲಿ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು.
ಬಕರ್‌ವಾಲ್ ಸಮುದಾಯದ ಈ ಬಾಲಕಿ ಕುದುರೆಯನ್ನು ಮೇಯಿಸಲು ರಸನಾದ ಅರಣ್ಯಕ್ಕೆ ಹೋಗಿದ್ದಳು. ಒಂದು ವಾರದ ಬಳಿಕ ಜನವರಿ 17ರಂದು ಆಕೆಯ ಶವ ಕಾಡಿನಲ್ಲಿ ಪತ್ತೆಯಾಗಿತ್ತು.
ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸೋಮವಾರ ಆರೋಪಪಟ್ಟಿ ಸಲ್ಲಿಸಲು ಮುಂದಾದ ಅಪರಾಧ ದಳದ ಅಧಿಕಾರಿಗಳಿಗೆ ತಡೆಯೊಡ್ಡಲು ಪ್ರಯತ್ನಸಿದ ಜಮ್ಮುವಿನ ವಕೀಲರ ಗುಂಪಿನ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಈ ವಕೀಲರ ಗುಂಪಿನ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ.
ಈ ಘಟನೆ ರಾಜ್ಯದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಗಿದ್ದು, ಜಮ್ಮುವಿನಿಲ್ಲಿ ಹಿಂದೂ ಪ್ರಾಬಲ್ಯವಿರುವ ಪ್ರದೇಶದ ಕೆಲವು ವಕೀಲರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.












Click it and Unblock the Notifications