ಕಳ್ಳರಿಗೆಲ್ಲ 'ಮೋದಿ' ಸರ್‌ನೇಮ್ ಏಕೆ?: ರಾಹುಲ್ ಗಾಂಧಿ ಲೇವಡಿ
ಡೆಹರಾಡೂನ್, ಮಾರ್ಚ್ 16: ಪ್ರಧಾನಿ ನರೇಂದ್ರ ಮೋದಿ ಅವರು 'ನಾನೂ ಚೌಕಿದಾರ' ಆಂದೋಲನ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡೆಹ್ರಾಡೂನ್‌ನಲ್ಲಿ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರಫೇಲ್ ಒಪ್ಪಂದ ಪಾರದರ್ಶಕವಾಗಿದ್ದರೆ ಜಂಟಿ ಸಂಸದೀಯ ಸಮಿತಿಯನ್ನು ಏಕೆ ರಚಿಸಲಿಲ್ಲ ಎಂದು ಪ್ರಶ್ನಿಸಿದರು.
ಕಳೆದ ಚುನಾವಣೆಯಲ್ಲಿ 'ಅಚ್ಚೇ ದಿನ್' ಎಂಬ ಘೋಷಣೆ ಇತ್ತು. ಈಗ ಚೌಕಿದಾರ್ (ಚೋರ್ ಹೈ) ಘೋಷಣೆ ಇದೆ ಎಂದು ರಾಹುಲ್ ಲೇವಡಿ ಮಾಡಿದರು.

ವಂಚನೆ ಪ್ರಕರಣದಲ್ಲಿ ದೇಶಬಿಟ್ಟು ಹೋಗಿರುವ ನೀರವ್ ಮೋದಿ ಮತ್ತು ಲಲಿತ್ ಮೋದಿ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿದ ರಾಹುಲ್, 'ಎಲ್ಲ ಕಳ್ಳರ ಸರ್‌ನೇಮ್ 'ಮೋದಿ' ಎಂಬ ಹೆಸರು ಹೊಂದಿರುವುದು ಹೇಗೆಂದು ನನಗೆ ಅಚ್ಚರಿಯಾಗುತ್ತಿದೆ' ಎಂದಿದ್ದಾರೆ.
ರಫೇಲ್‌ಗೆ ಸಂಬಂಧಿಸಿದಂತೆ ನಾಲ್ಕು ಪ್ರಶ್ನೆಗಳನ್ನು ಸಂಸತ್‌ನಲ್ಲಿ ಕೇಳಿದ್ದೆ. ಅದಕ್ಕೆ ಮೋದಿ ತಡಬಡಾಯಿಸಿದರು. ಅವರಿಗೆ ನನ್ನ ಕಣ್ಣಲ್ಲಿ ಕಣ್ಣಿಡಲೂ ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯದಿಂದ ಹೇಳಿದರು.
ನೋಟು ನಿಷೇಧದಿಂದ ಯಾರಿಗಾದರೂ ಲಾಭವಾಗಿದೆಯೇ ಎಂದು ಜನರನ್ನು ಪ್ರಶ್ನಿಸಿದರು. ತಮಗೆ ಅಧಿಕಾರ ದೊರೆತರೆ ಜಿಎಸ್‌ಟಿಯನ್ನು ಸರಳಗೊಳಿಸುವುದಾಗಿ ಭರವಸೆ ನೀಡಿದರು. ನೋಟು ನಿಷೇಧದಿಂದ ತೊಂದರೆಯಾಗಿದ್ದಕ್ಕೆ ನರೇಂದ್ರ ಮೋದಿ ಅವರ ಪರವಾಗಿ ಕ್ಷಮೆಯಾಚಿಸುವುದಾಗಿ ರಾಹುಲ್ ಹೇಳಿದರು.












Click it and Unblock the Notifications