ಮಧ್ಯಪ್ರದೇಶ ಚುನಾವಣೆ; ಕಾಂಗ್ರೆಸ್‌ಗೆ ಸಿಗುತ್ತಾ ಒಬಿಸಿ ಮತಗಳ ಬೆಂಬಲ
ಭೋಪಾಲ್, ನವೆಂಬರ್ 03: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಈ ಬಾರಿ ಗೆದ್ದು ರಾಜ್ಯದಲ್ಲಿ ಅಧಿಕಾರ ಹಿಡಿಯುವ ಉತ್ಸಾಹದಲ್ಲಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗ (ಒಬಿಸಿ) ಮತಗಳ ಮೇಲೆ ಹೆಚ್ಚು ಗಮನ ಹರಿಸಿದೆ.
ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನವೆಂಬರ್ 17ರಂದು ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಶಿವರಾಜ್ ಸಿಂಗ್ ಚೌವ್ಹಾಣ್ ಮುಖ್ಯಮಂತ್ರಿಗಳು.

ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ಚುನಾವಣಾ ಭರವಸೆಯಾಗಿ ಜಾತಿ ಸಮೀಕ್ಷೆಯ ಭರವಸೆ ನೀಡಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ಒಬಿಸಿ ಸಮುದಾಯದವರಿಗೆ ಹೆಚ್ಚಿನ ಸೌಲಭ್ಯಗಳು ಸಿಗಬೇಕು ಎಂದು ಹೇಳಿದ್ದಾರೆ. 1980ರಲ್ಲಿ ಅಂದಿನ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ದಿ. ಅರ್ಜುನ್ ಸಿಂಗ್ ಒಬಿಸಿ ಸಮಯದಾಯಕ್ಕೆ ಮೀಸಲಾತಿ ನೀಡಿರುವುದನ್ನು ಜನರು ನೆನಪು ಮಾಡಿಕೊಳ್ಳುತ್ತಾರೆ.
ಸುಮಾರು 43 ವರ್ಷಗಳ ಬಳಿಕ ಮತ್ತೆ ರಾಜ್ಯದಲ್ಲಿ ಅಧಿಕಾರ ಪಡೆಯಲು ಕಾಂಗ್ರೆಸ್ ಪಕ್ಷ ಇತರೆ ಹಿಂದುಳಿದ ವರ್ಗ (ಒಬಿಸಿ) ಮತಗಳ ಮೇಲೆ ಹೆಚ್ಚು ಗಮನ ಹರಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಜಾತಿ ಸಮೀಕ್ಷೆಯನ್ನು ನಡೆಸಿ, ಮತ್ತೆ ಒಬಿಸಿ ವರ್ಗಕ್ಕೆ ಹೆಚ್ಚಿನ ಸೌಲಭ್ಯವನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡಿದೆ.
ಒಬಿಸಿ ಸಮುದಾಯಕ್ಕೆ ಮೀಸಲಾತಿ; ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿಯೇ ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್, 1980ರಲ್ಲಿ ರಾಮ್ ಜಿ ಮಹಾಜನ್ ಆಯೋಗ ರಚನೆ ಮಾಡಿದರು. ಸರ್ಕಾರಿ ಉದ್ಯೋಗದಲ್ಲಿ ಒಬಿಸಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ವರದಿ ನೀಡಲು ಆಯೋಗ ರಚಿಸಲಾಯಿತು. 1983ಲ್ಲಿ ವರದಿ ನೀಡಿದ ಆಯೋಗ ಶೇ 25ರಷ್ಟು ಮೀಸಲಾತಿಯನ್ನು ಸರ್ಕಾರಿ ಉದ್ಯೋಗದಲ್ಲಿ ನೀಡಬಹುದು ಎಂದು ಶಿಫಾರಸು ಮಾಡಿತು.
ಆದರೆ ಈ ಶಿಫಾರಸು ಜಾರಿಗೆ ಬರಲಿಲ್ಲ. ಕಾಂಗ್ರೆಸ್ ಪಕ್ಷ ಅರ್ಜುನ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಮೋತಿಲಾಲ್ ವೋರಾ ಅವರನ್ನು ಮುಖ್ಯಮಂತ್ರಿಯಾಗಿ 1985ರಲ್ಲಿ ನೇಮಕ ಮಾಡಿತು. ಅರ್ಜುನ್ ಸಿಂಗ್ 2008ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿ ಸಮುದಾಯಗಳಿಗೆ ಶೇ 27ರಷ್ಟು ಮೀಸಲಾತಿಯನ್ನು ಜಾರಿಗೆ ತಂದರು. ಇದಕ್ಕಾಗಿ ಭಾರತೀಯ ಸಂವಿಧಾನದ 93ನೇ ನಿಯಮ ತಿದ್ದುಪಡಿ ಮಾಡಲಾಯಿತು. ಸರ್ಕಾರಿ ಉದ್ಯೋಗಗಳಲ್ಲಿ ಒಬಿಸಿಯವರಿಗೆ ಶೇ 27ರಷ್ಟು ಮೀಸಲಾತಿನಿರ್ಧಾರ 2009ರಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವೂ ಆಯಿತು.
ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರು ಮಾತನಾಡಿ, "ಅರ್ಜುನ್ ಸಿಂಗ್ ರಜಪೂತ ಸಮುದಾಯದವರಾದರೂ ಸಹ ಒಬಿಸಿ ಸಮುದಾಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಎರಡು ಸಮುದಾಯಗಳ ಬೆಂಬಲ ಪಕ್ಷಕ್ಕೆ ಸಿಕ್ಕಿತು" ಎಂದು ಹೇಳಿದರು. 1993ರಲ್ಲಿ ಅರ್ಜುನ್ ಸಿಂಗ್ ರಜಪೂತ ಸಮುದಾಯದ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿಯಾಗಲು ಬೆಂಬಲಿಸಿದರು. 1956ರಲ್ಲಿ ವಿಂದ್ಯ ಪ್ರದೇಶ ಮಧ್ಯ ಭಾರತದಲ್ಲಿ ವಿಲೀನಗೊಂಡಿತು. ಈ ಪ್ರದೇಶ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದೆ.
"ನಮ್ಮ ತಂದೆ ಇತರೆ ಹಿಂದುಳಿದ ವರ್ಗದ ಸೌಲಭ್ಯಗಳಿಗಾಗಿ ಶ್ರಮಿಸಿದರು. ಈಗ ಕಾಂಗ್ರೆಸ್ ಅವರ ಜನಸಂಖ್ಯೆಗೆ ತಕ್ಕಂತೆ ಸೌಲಭ್ಯಗಳು ಸಿಗಬೇಕು ಎಂದು ಚುನಾವಣೆ ಎದುರಿಸಲು ಹೊರಟಿದೆ" ಎಂದು ಅರ್ಜುನ್ ಸಿಂಗ್ ಪುತ್ರ ಅಜಯ್ ಸಿಂಗ್ ಹೇಳಿದ್ದಾರೆ. ಆದರೆ ಈ ಭರವಸೆ ಚುನಾವಣೆಯಲ್ಲಿ ಹೇಗೆ ಸಹಕಾರಿಯಾಗಲಿದೆ? ಎಂದು ಕಾದು ನೋಡಬೇಕಿದೆ.
2018ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿಂದ್ಯ ಪ್ರದೇಶದಲ್ಲಿ ಬಿಜೆಪಿ 30 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆದರೆ ರಾಜ್ಯದ ಬೇರೆ ಯಾವುದೇ ಪ್ರದೇಶದಲ್ಲಿ ಪಕ್ಷ ಇಂತಹ ಜಯ ಸಾಧಿಸಲು ವಿಫಲವಾಯಿತು. 2018ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷದ ಬಳಿಕ ಪತನಗೊಂಡಿತು.












Click it and Unblock the Notifications