ಕೊವಿಡ್-19 ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಯಾಕೆ?: ಸರ್ಕಾರದ ಉತ್ತರ
ನವದೆಹಲಿ, ಆಗಸ್ಟ್ 10: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಕಟ್ಟಿ ಹಾಕುವ ಉದ್ದೇಶದಿಂದ ಲಸಿಕೆಯ ನೀಡಲಾಗುತ್ತಿದೆ. ದೇಶದ ಪ್ರಜೆಗಳಿಗೆ ಕೊವಿಡ್-19 ಲಸಿಕೆ ವಿತರಣೆ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರವುಳ್ಳ ಪ್ರಮಾಣಪತ್ರವನ್ನು ವಿತರಿಸುತ್ತಿರುವ ಕ್ರಮವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.
ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗೆ ಆರೋಗ್ಯ ಇಲಾಖೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಉತ್ತರಿಸಿದರು. "ಕೊವಿಡ್-19 ಲಸಿಕೆಯ ಕುರಿತು ಸಾರ್ವಜನಿಕರಲ್ಲಿ ಸೂಕ್ತ ರೀತಿಯ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರವನ್ನು ಮುದ್ರಿಸಲಾಗುತ್ತಿದೆ," ಎಂದು ಹೇಳಿದರು.
"ಲಸಿಕೆ ಸ್ವೀಕರಿಸಿದ ನಂತರದಲ್ಲಿ ನೀಡುವ ಪ್ರಮಾಣಪತ್ರದಲ್ಲಿ ಪ್ರಧಾನಮಂತ್ರಿ ಭಾವಚಿತ್ರದ ಜೊತೆಗೆ ಕೊವಿಡ್-19 ಲಸಿಕೆ ಕುರಿತು ಜಾಗೃತಿ ಮೂಡಿಸುವುದು, ಲಸಿಕೆ ಪಡೆದುಕೊಂಡವರು ಯಾವ ರೀತಿ ವರ್ತಿಸಬೇಕು, ಕೊರೊನಾವೈರಸ್ ಮಾರ್ಗಸೂಚಿಗಳ ಪಾಲನೆ ಕುರಿತಾಗಿ ಪ್ರಮುಖ ಸಂದೇಶವನ್ನು ಮುದ್ರಿಸಲಾಗಿರುತ್ತದೆ," ಎಂದು ಸಚಿವೆ ಭಾರತಿ ಪ್ರವೀಣ್ ಪವಾರ್ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.

ಲಸಿಕೆ ಕುರಿತು ಜಾಗೃತಿ ಮೂಡಿಸುವುದು ನೈತಿಕ ಹೊಣೆ
"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಿರ್ಣಾಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಸಂದೇಶಗಳು ಜನರಿಗೆ ತಲುಪಿಸುವಂತೆ ನೋಡಿಕೊಳ್ಳುವುದು ಸರ್ಕಾರದ ನೈತಿಕ ಹೊಣೆ ಆಗಿರುತ್ತದೆ. ಲಸಿಕೆ ವಿತರಣೆ ನಂತರದಲ್ಲಿ ನೀಡುವ ಪ್ರಮಾಣಪತ್ರದ ಸ್ವರೂಪವು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗೆ ಅನುಸಾರವಾಗಿರುತ್ತದೆ. ಲಸಿಕೆ ಪಡೆದುಕೊಂಡ ನಂತರವೂ ಸಾರ್ವಜನಿಕರು ಕೊವಿಡ್-19 ಮಾರ್ಗಸೂಚಿಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಮಹತ್ವದ ಸಂದೇಶಗಳನ್ನು ಈ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿರುತ್ತದೆ," ಎಂದು ಸಚಿವೆ ತಿಳಿಸಿದ್ದಾರೆ.

ಕೊವಿಡ್-19 ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ಏಕೆ ಬೇಕು?
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳುವ ಪ್ರತಿಯೊಬ್ಬರಿಗೆ ನೀಡಲಾಗುವ ಪ್ರಮಾಣಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರವನ್ನು ಮುದ್ರಿಸುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಛತ್ತೀಸ್ ಗಢ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಗಳಲ್ಲಿ 18 ರಿಂದ 44 ವಯೋಮಾನದವರಿಗೆ ಕೊವಿಡ್-19 ಲಸಿಕೆ ನೀಡಿದ ನಂತರದಲ್ಲಿ ವಿತರಿಸುವ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋವನ್ನು ತೆಗೆದು ಹಾಕಲಾಗಿತ್ತು.

ದೇಶದಲ್ಲಿ ಇಳಿಮುಖವಾಯಿತು ಲಸಿಕೆ ವಿತರಣೆ ಪ್ರಮಾಣ
ಕಳೆದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಿ 206 ದಿನಗಳೇ ಕಳೆದಿದ್ದು, ಕಳೆದ 24 ಗಂಟೆಗಳಲ್ಲಿ 51,09,58,562 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ಮಂಗಳವಾರದ ವೇಳೆಗೆ ಒಟ್ಟು 52,56,35,710 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಕೊರೊನಾವೈರಸ್ ಲಸಿಕೆಯ ಶೇ.75ರಷ್ಟು ಪ್ರಮಾಣವನ್ನು ಕೇಂದ್ರ ಸರ್ಕಾರವೇ ಕಂಪನಿಗಳಿಂದ ನೇರವಾಗಿ ಖರೀದಿಸುತ್ತದೆ. ಹೀಗೆ ಖರೀದಿಸಿದ ಲಸಿಕೆಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಸರಬರಾಜು ಮಾಡಲಾಗುತ್ತದೆ. ದೇಶದಲ್ಲಿ ಪ್ರತಿಯೊಬ್ಬರಿಗೆ ಕೊವಿಡ್-19 ಲಸಿಕೆ ಸಿಗಬೇಕು ಎನ್ನುವ ಉದ್ದೇಶದಿಂದ ಉಚಿತ ಲಸಿಕೆ ವಿತರಣೆ ಅಭಿಯಾನವನ್ನು ನಡೆಸಲಾಗುತ್ತಿದೆ.

ಕೊವಿಡ್-19 ಲಸಿಕೆ ಪೂರೈಕೆ ಆಗಿದ್ದೆಷ್ಟು, ಬಳಸಿದ್ದೆಷ್ಟು?
2021ರ ಆಗಸ್ಟ್ 10ರ ಅಂಕಿ-ಅಂಶಗಳ ಪ್ರಕಾರ, 52,56,35,710 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.
ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ ಪಟ್ಟಿ:
* ಪೂರೈಕೆಯಾದ ಲಸಿಕೆ ಪ್ರಮಾಣ - 52,56,35,710
* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 48,43,100
* ಬಳಕೆ ಆಗಿರುವ ಲಸಿಕೆ ಪ್ರಮಾಣ - 51,09,58,562
* ಕೊವಿಡ್-19 ಲಸಿಕೆಯ ಲಭ್ಯತೆ - 2,07,55,852

ಭಾರತದಲ್ಲಿ ಕೊವಿಡ್-19 ಸೋಂಕಿತರ ಏರಿಳಿತದ ಅಂಕಿ-ಸಂಖ್ಯೆ
ದೇಶದಲ್ಲಿ 147 ದಿನಗಳಲ್ಲೇ ಮೊದಲ ಬಾರಿಗೆ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಸೋಮವಾರ ಒಂದು ದಿನ 28,204 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 41,511 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 373 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,28,682 ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,19,98,158ಕ್ಕೆ ಏರಿಕೆಯಾಗಿದೆ. ಈವರೆಗೂ 3,11,80,968 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 4,06,822 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications