ಯಾರು ಆ ಸರ್ಕಾರಿ ಪ್ರಾಯೋಜಿತ ದಾಳಿಕೋರರು: ದಿನೇಶ್ ಗುಂಡೂರಾವ್ ಪ್ರಶ್ನೆ
ಬೆಂಗಳೂರು, ನವೆಂಬರ್ 1: ವಿಪಕ್ಷ ನಾಯಕರು ಬಳಸುತ್ತಿರುವ ಐಫೋನ್‌ಗಳನ್ನು 'ಸರ್ಕಾರಿ ಪ್ರಾಯೋಜಿತ ದಾಳಿಕೋರರು' ಹ್ಯಾಕ್ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಸ್ವತಃ ಆ್ಯಪಲ್ ಕಂಪನಿಯೇ ಸಂದೇಶ ಕಳಿಸಿದೆ ಎಂಬ ಆರೋಪ ಬೆನ್ನಲ್ಲೇ ಯಾರು ಆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ನಾಯಕ ಮೊಬೈಲ್‌ಗಳನ್ನು ಹ್ಯಾಕ್ ಮಾಡುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಪ್ರಶ್ನೆ ಎತ್ತಿದ್ದಾರೆ. ಇದು ವಿರೋಧ ಪಕ್ಷಗಳ ನಾಯಕರ ಮೇಲೆ ಕೇಂದ್ರ ನಡೆಸುತ್ತಿರುವ ಅಕ್ರಮ ಬೇಹುಗಾರಿಕೆ. ಆ್ಯಪಲ್ ಸಂಸ್ಥೆಯೇ 'ಸರ್ಕಾರಿ ಪ್ರಾಯೋಜಿತ ದಾಳಿಕೋರರು' ಎಂದಿದೆ. ಹಾಗಾದರೆ ಯಾರು ಆ 'ಸರ್ಕಾರಿ ಪ್ರಾಯೋಜಿತ ದಾಳಿಕೋರರು'? ಎಂದು ಅವರು ಕೇಳಿದ್ದಾರೆ.

ಕೇಂದ್ರ ಸರ್ಕಾರ ಪೆಗಾಸಸ್ ಕುತಂತ್ರಾಂಶ ಬಳಸಿ ವಿಪಕ್ಷ ನಾಯಕರ ಮೇಲೆ ಬೇಹುಗಾರಿಕೆ ನಡೆಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.
ಈಗ ಐಫೋನ್ ಹ್ಯಾಕ್ ಮಾಡಲು ಸರ್ಕಾರಿ ಪ್ರಾಯೋಜಿತ ದಾಳಿಕೋರರು ಪ್ರಯತ್ನಿಸುತ್ತಿರುವುದು ಕೇಂದ್ರ ಸರ್ಕಾರದ ಅಕ್ರಮ ಬೇಹುಗಾರಿಕೆಯ ಮುಂದುವರೆದ ಭಾಗವಷ್ಟೆ. ವಿಪಕ್ಷ ನಾಯಕರ ಫೋನ್ ಕದ್ದಾಲಿಸಲೆಂದಲೇ ಕೇಂದ್ರ ಕಳ್ಳಗಿವಿ ಇಟ್ಟಿರುವುದು ಸತ್ಯ ಎಂದು ಆರೋಪಿಸಿದ್ದಾರೆ.
ಆ್ಯಪಲ್ ಸಂಸ್ಥೆಯೇ ಕಳಿಸಿರುವ ಸಂದೇಶದ ಪ್ರಕಾರ 'ಸರ್ಕಾರಿ ಪ್ರಾಯೋಜಿತ ದಾಳಿಕೋರರು' ಕೇವಲ ವಿಪಕ್ಷ ನಾಯಕರು ಮಾತ್ರವಲ್ಲ, ಕೆಲ ಪತ್ರಕರ್ತರ ಐಫೋನ್‌ಗಳಿಗೂ ಕನ್ನ ಹಾಕಲು ಯತ್ನಿಸಿದ್ದಾರೆ. ಆಯ್ದ ಕೆಲವು ವಿಪಕ್ಷ ನಾಯಕರು ಹಾಗೂ ಕೆಲ ನಿರ್ದಿಷ್ಟ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಅವರ ಫೋನ್‌ಗಳಿಗೆ ಕಳ್ಳಗಿವಿ ಇಡಲಾಗಿದೆ. ಇದು ಅಕ್ರಮ ಬೇಹುಗಾರಿಕೆಯಲ್ಲದೆ ಮತ್ತೇನು? ಎಂದು ಅವರು ಪ್ರಶ್ನಿಸಿದ್ದಾರೆ.
ವಿಪಕ್ಷ ನಾಯಕರ ಹಾಗೂ ಕೆಲ ಪತ್ರಕರ್ತರ ಐಫೋನ್‌ಗಳಿಗೆ ಕಳ್ಳಗಿವಿ ಇಡುತ್ತಿರುವ ಆ 'ಸರ್ಕಾರಿ ಪ್ರಾಯೋಜಿತ ದಾಳಿಕೋರರು' ಯಾರು ಎಂಬುದೇ ಸದ್ಯದ ಯಕ್ಷಪ್ರಶ್ನೆ. ಈ ಯಕ್ಷಪ್ರಶ್ನೆಗೆ ಉತ್ತರ ಗೊತ್ತಿರುವುದು ಪ್ರಧಾನಿ ಮೋದಿಯವರಿಗೆ ಮತ್ತು ಗೃಹಸಚಿವ ಅಮಿತ್ ಶಾರವರಿಗೆ ಮಾತ್ರ. ಆದರೆ ಇವರಿಬ್ಬರಿಗೆ ಈ ಪ್ರಶ್ನೆಗೆ ಉತ್ತರಿಸುವ ಧೈರ್ಯವಿದೆಯೇ.? ಎಂದು ಸವಾಲು ಎಸೆದಿದ್ದಾರೆ.
ಈ ಮಧ್ಯೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಬುಧವಾರ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ತಮ್ಮ ಐಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಗಳ ಕುರಿತು ಹಲವಾರು ವಿರೋಧ ಪಕ್ಷದ ನಾಯಕರು ಸ್ವೀಕರಿಸಿದ ಅಲರ್ಟ್ ಮೆಸೇಜ್‌ಗಳನ್ನು ಗಮನಕ್ಕೆ ತಂದಿದ್ದಾರೆ. ಸ್ಪೀಕರ್ ಅವರು ಈ ಬಗ್ಗೆ ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ.
ಮಂಗಳವಾರ, ಮೊಯಿತ್ರಾ, ಶಿವಸೇನಾ (ಯುಬಿಟಿ) ಸಂಸದ ಪ್ರಿಯಾಂಕಾ ಚತುರ್ವೇದಿ, ಎಎಪಿಯ ರಾಘವ್ ಚಡ್ಡಾ, ಕಾಂಗ್ರೆಸ್‌ನ ಶಶಿ ತರೂರ್ ಮತ್ತು ಅವರ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮತ್ತು ಸಿಪಿಐ(ಎಂ) ಜನರಲ್ ಸೀತಾರಾಮ್ ಯೆಚೂರಿ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಅಲರ್ಟ್ ಮೆಸೇಜ್ ಅನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications