ದೇಶದ್ರೋಹದ ಕಾನೂನಿನಲ್ಲಿ ಮಹತ್ವದ ಬದಲಾವಣೆ: ಅಪರಾಧಿಗೆ ಜೀವಾವಧಿ ಶಿಕ್ಷೆ- ಕೇಂದ್ರದ ಹೊಸ ಮಸೂದೆಯಲ್ಲಿ ಏನಿದೆ? ತಿಳಿಯಿರಿ
ನವದೆಹಲಿ, ಆಗಸ್ಟ್ 11: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ನ್ಯಾಯ ಸಂಹಿತೆ 2023 ಮಸೂದೆ ಮಂಡನೆ ಮಾಡಿದೆ. ಭಾರತೀಯ ದಂಡ ಸಂಹಿತೆ ( ಐಪಿಸಿ ), ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ( ಸಿಆರ್‌ಪಿಸಿ ) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ ಅನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಹೊಸ ಮಸೂದೆಯನ್ನು ಮಂಡಿಸಿದರು.
ಕಳೆದ 160 ವರ್ಷಗಳಿಂದ ಐಪಿಸಿ ಸೆಕ್ಷನ್‌ಗಳು ಜಾರಿಯಲ್ಲಿವೆ. ಈ ಕಾಯ್ದೆಗಳನ್ನು ಬ್ರಿಟಿಷರು 1860ರಲ್ಲಿ ರೂಪಿಸಿದ್ದರು. ಇವು ಕಾನೂನು ಹಾಗೂ ಸಂಹಿತೆಗಳಿಗೆ ಪರ್ಯಾಯವಾಗಿ ಭಾರತೀಯ ನ್ಯಾಯ ಸಂಹಿತೆ 2023 ಜಾರಿಗೆ ಬರಲಿದೆ ಎಂದು ಅಮಿತ್ ಶಾ ಹೇಳಿದರು.

ಭಾರತೀಯ ದಂಡ ಸಂಹಿತೆಗೆ ಬದಲಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 150 ಅನ್ನು ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಮಾಹಿತಿ ನೀಡಿದರು.
ಇದು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳ ವಿರುದ್ಧದ ಕಾನೂನುಗಳನ್ನು ಒಳಗೊಂಡಿದೆ.
ಕಾನೂನು ಆಯೋಗವು ದೇಶದ್ರೋಹ ಕಾನೂನನ್ನು ಬಲವಾಗಿ ಬೆಂಬಲಿಸಿದೆ. ಈ ಕಾನೂನಿನಲ್ಲಿ ಬದಲಾವಣೆ ತರಬೇಕು. ಕೆಲ ಮಹತ್ವದ ಬದಲಾವಣೆಗೊಂದಿಗೆ ಈ ಕಾನೂನನ್ನು ಉಳಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿತ್ತು.

ದೇಶದ್ರೋಹಕ್ಕೆ ಸಂಬಂಧಿಸಿದ ಶಿಕ್ಷೆಯನ್ನು ಮೂರು ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಅಥವಾ ಏಳು ವರ್ಷಗಳ ಜೈಲು ಶಿಕ್ಷೆಗೆ ಹೆಚ್ಚಿಸುವಂತೆ ಆಯೋಗವು ಶಿಫಾರಸು ಮಾಡಿತ್ತು. ಇದನ್ನು ಇಂದು ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯಲ್ಲಿ ಜಾರಿಗೆ ತಂದಿದ್ದಾರೆ. ಇದಕ್ಕೆ ನ್ಯಾಯ ಸಂಹಿತೆಯ ಸೆಕ್ಷನ್ 150 ಎಂದು ಹೆಸರಿಸಲಾಗಿದೆ. ಇದು 1860 ರ ಭಾರತೀಯ ದಂಡ ಸಂಹಿತೆಯನ್ನು ಬದಲಿಸುತ್ತದೆ.
ದೇಶದಲ್ಲಿ ಪ್ರತ್ಯೇಕತೆ, ಸಶಸ್ತ್ರ ಬಂಡಾಯ, ವಿಧ್ವಂಸಕ ಕೃತ್ಯಗಳು ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳ ಕುರಿತು ನ್ಯಾಯ ಸಂಹಿತೆಯ ಸೆಕ್ಷನ್ 150 ರಲ್ಲಿ ಉಲ್ಲೇಖವಾಗಿದೆ.
ವ್ಯಕ್ತಿಯೊಬ್ಬ ಈ ಮೇಲ್ಕಂಡ ಚಟುವಟಿಕೆಗಳಲ್ಲಿ ಭಾಗವಹಿಸಿದರೆ, ಆತನಿಗೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಇದು ಹೇಳುತ್ತದೆ.

ಹೇಳಿಕೆಗಳು, ಬರವಣಿಗೆ, ಚಿಹ್ನೆ, ಸಂವಹನ, ಹಣಕಾಸಿನ ವಿಧಾನಗಳ ಮೂಲಕ ಪ್ರತ್ಯೇಕತೆಯನ್ನು ಪ್ರಚೋದಿಸುವುದು, ಸಶಸ್ತ್ರ ದಂಗೆಗೆ ಪ್ರೋತ್ಸಾಹ ನೀಡುವುದು, ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಆರೋಪಿಗೆ ಈ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ನ್ಯಾಯ ಸಂಹಿತೆಯ ಸೆಕ್ಷನ್ 150 ರಲ್ಲಿ ಹೇಳಲಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಅಸಮಾಧಾನವನ್ನು ಹೊರಹಾಕಬಹುದು. ಆದರೆ, ಇದು ದ್ವೇಷದ ಭಾವನೆಗಳನ್ನು ಕೆರಳಿಸುವಂತಿರಬಾರದು. ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕ ತಮಗಾಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಬಹುದು. ವ್ಯವಸ್ಥೆಯನ್ನು ಟೀಕಿಸುವ ಭರದಲ್ಲಿ ದ್ವೇಷ, ತಿರಸ್ಕಾರ ಅಥವಾ ಅಸಮಾಧಾನವನ್ನು ಹುಟ್ಟುಹಾಕುವಂತಿಲ್ಲ ಎಂದು ನ್ಯಾಯ ಸಂಹಿತೆಯ ಸೆಕ್ಷನ್ 150 ರಲ್ಲಿ ವಿವರಿಸಿದೆ.











Click it and Unblock the Notifications