ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದೇನು?
ನವದೆಹಲಿ, ಮೇ 31: ಕುಸ್ತಿಪಟುಗಳ ಮೇಲೆ ಲೈಗಿಂಕ ಕಿರುಕುಳ ಆರೋಪ ಸಂಬಂಧ ಅವರು ತಮ್ಮ ಅಮೂಲ್ಯ ಪದಕಗಳನ್ನು ಗಂಗಾ ನದಿಗೆ ಎಸೆಯುವ ನಿರ್ಧಾರದ ಕುರಿತು ಮಾತನಾಡಿರುವ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.
ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊಂದಿರರುವ ಅವರು, ಕುಸ್ತಿಪಟುಗಳು ತಮ್ಮ ಪ್ರಶಸ್ತಿಗಳನ್ನು ನೀರಿಗೆ ಒಪ್ಪಿಸುವ ನಿರ್ಧಾರವು ಸಂಪೂರ್ಣವಾಗಿ ಅವರು ತೆಗೆದುಕೊಂಡ ನಿಲುವಾಗಿದೆ. ನನ್ನ ಮೇಲಿನ ಆರೋಪ ಸಂಬಂಧ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಸತ್ಯವಿದ್ದರೆ ಬಂಧನವಾಗುವುದು ಎಂದು ಅವರು ಹೇಳಿದರು.

ಮಂಗಳವಾರ ಕುಸ್ತಿಪಟುಗಳು ತಾವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಹರಿದ್ವಾರ ನಗರಕ್ಕೆ ಆಗಮಿಸಿದ್ದರು. ಆಗ ಅವರನ್ನು ನದಿ ದಡದಲ್ಲಿ ಮನವೊಲಿಸಿದ ರೈತ ಮುಖಂಡ ನರೇಶ್ ಟಿಕಾಯತ್ ವಾಪಸು ಕರೆತಂದರು. ನಂತರ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಐದು ದಿನಗಳ ಗಡುವು ನೀಡಿದರು.
ಲೈಂಗಿಕ ಕಿರುಕುಳದ ಆರೋಪದ ಮೇಲೆ ಡಬ್ಲ್ಯುಎಫ್‌ಐ ಅಧ್ಯಕ್ಷರನ್ನು ತೆಗೆದುಹಾಕಬೇಕು ಮತ್ತು ಬಂಧಿಸಬೇಕು ಎಂದು ಒತ್ತಾಯಿಸುತ್ತಿರುವ ಒಲಿಂಪಿಯನ್‌ಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರು ತಮ್ಮ ಪದಕಗಳನ್ನು ಗಂಗೆಯಲ್ಲಿ ಮುಳುಗಿಸಲು ಮಂಗಳವಾರ ಮುಂಜಾನೆ ಹರಿದ್ವಾರದಲ್ಲಿ ಅಳುತ್ತಾ ಬಿಕ್ಕಳಿಸಿದ ದೃಶ್ಯಗಳು ವೈರಲ್ ಆಗಿವೆ.

ಮಂಗಳವಾರ ಬೆಳಗ್ಗೆ ತಾವು ಸಂಜೆ 6 ಗಂಟೆಗೆ ಹರಿದ್ವಾರಕ್ಕೆ ಭೇಟಿ ನೀಡಿ ಗಂಗಾ ನದಿಯಲ್ಲಿ ಪದಕಗಳನ್ನು ಎಸೆಯುವುದಾಗಿ ಪ್ರತಿಭಟನಾನಿರತ ಕುಸ್ತಿಪಟುಗಳು ತಿಳಿಸಿದ್ದರು. ಆದರೂ ಅವರಿಗೆ ಸರ್ಕಾರದಿಂದ ಯಾವುದೇ ಪ್ರತ್ರಿಕ್ರಿಯೆ ಸಿಕ್ಕಿರಲಿಲ್ಲ.
ಕುಸ್ತಿಪಟುಗಳು ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ, "ಮೇ 28 ರಂದು ನಡೆದ ಎಲ್ಲವನ್ನೂ ನೀವು ನೋಡಿದ್ದೀರಿ, ಪೊಲೀಸರು ನಮ್ಮನ್ನು ಹೇಗೆ ನಡೆಸಿಕೊಂಡರು ಮತ್ತು ಅವರು ನಮ್ಮನ್ನು ಬಂಧಿಸಿದ ರೀತಿಯನ್ನು ನೀವು ನೋಡಿದ್ದೀರಿ. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೆವು. ನಮಗೆ ಪ್ರತಿಭಟನೆ ನಡೆಸಲು ಸ್ಥಳ ನೀಡಲಾಗಿಲ್ಲ. ಮರುದಿನ ಗಂಭೀರ ಪ್ರಕರಣಗಳು ಮತ್ತು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ನಮ್ಮ ವಿರುದ್ಧ ಕುಸ್ತಿಪಟುಗಳು ತಮಗೆ ಆಗಿರುವ ಲೈಂಗಿಕ ಕಿರುಕುಳಕ್ಕೆ ನ್ಯಾಯ ಕೇಳುವ ಮೂಲಕ ಯಾವುದೇ ಅಪರಾಧ ಎಸಗಿದ್ದಾರೆಯೇ? ಪೊಲೀಸರು ಮತ್ತು ವ್ಯವಸ್ಥೆ ನಮ್ಮನ್ನು ಅಪರಾಧಿಗಳಂತೆ ನಡೆಸಿಕೊಳ್ಳುತ್ತಿದೆ, ದಬ್ಬಾಳಿಕೆ ನಡೆಸುವವರು ಮುಕ್ತವಾಗಿ ಓಡಾಡುತ್ತಿದ್ದಾರೆ. ಪೋಕ್ಸೋ ಕಾಯ್ದೆಯನ್ನು ಬದಲಾಯಿಸುವ ಬಗ್ಗೆ ಅವರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
"ಪದಕಗಳನ್ನು ಹಿಂದಿರುಗಿಸಬೇಕೆಂದು ಯೋಚಿಸುತ್ತಿರುವ ನಮಗೆ ಇದು ಸಾವಿಗಿಂತ ಕಡಿಮೆಯಿಲ್ಲ. ಆದರೆ ನಾವು ನಮ್ಮ ಆತ್ಮಗೌರವಕ್ಕೆ ರಾಜಿ ಮಾಡಿಕೊಳ್ಳುವುದು ಹೇಗೆ? ಇನ್ನು ಮುಂದೆ ನಮಗೆ ಈ ಪದಕಗಳು ಅಗತ್ಯವಿಲ್ಲ, ಶೋಷಣೆಯ ವಿರುದ್ಧ ಮಾತನಾಡಿದರೆ ನಮ್ಮನ್ನು ಜೈಲಿಗೆ ಹಾಕಲು ಅವರು ಸಿದ್ಧರಾಗಿದ್ದಾರೆ ಎಂದು ಕುಸ್ತಿಪಟುಗಳು ಹೇಳಿದರು.












Click it and Unblock the Notifications