ನೀವು ಬಳಸುವ ಧಾನ್ಯ ಯಾವುದು? ಜನಗಣತಿಯಲ್ಲಿ ಹೊಸ ಪ್ರಶ್ನೆ
ನವದೆಹಲಿ, ಜನವರಿ 10: ವಿರೋಧಪಕ್ಷಗಳು ಮತ್ತು ಕೇರಳ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳ ವಿರೋಧದ ನಡುವೆಯೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮತ್ತು ಜನಗಣತಿ ನಡೆಸಲು ಸಿದ್ಧತೆ ನಡೆಸಿದೆ.
ಎನ್‌ಪಿಆರ್ ಹಾಗೂ ಜನಗಣತಿಗೆ ತೆರಳುವ ಸಿಬ್ಬಂದಿ, ಹಲವು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಕಳೆದ ಬಾರಿ ನಡೆಸಲಾಗಿದ್ದ ಜನಗಣತಿ ಪ್ರಶ್ನಾವಳಿಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಜನಗಣತಿ ವೇಳೆ ಕುಟುಂಬಗಳು ಯಾವ ಧಾನ್ಯ ಬಳಸುತ್ತಾರೆ ಎಂಬುದನ್ನು ಒಳಗೊಂಡಂತೆ ಅವರ ಆಹಾರ ಸೇವನೆಯ ವಿವರಗಳನ್ನು ಪಡೆದುಕೊಳ್ಳುವಂತೆ ಹೊಸ ಮಾಹಿತಿಯನ್ನು ಅಳವಡಿಸಲು ಸರ್ಕಾರ ಗುರುವಾರ ಸೂಚಿಸಿದೆ.
2021ರ ಮನೆ-ಮನೆ ಸಮೀಕ್ಷೆ ಕಾರ್ಯಾಚರಣೆಯ ಪ್ರಕ್ರಿಯೆಯಲ್ಲಿ ಮೊದಲ ಬಾರಿಗೆ ಸ್ಮಾರ್ಟ್‌ಫೋನ್‌ಗಳ ಮೂಲಕ ಪೈಪ್ ಗ್ಯಾಸ್ ಸಂಪರ್ಕ ಮತ್ತು ಮೊಬೈಲ್ ನಂಬರ್‌ಗಳ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ. ಮೊಬೈಲ್ ನಂಬರ್‌ಗಳನ್ನು ಜನಸಂಖ್ಯೆ ಸಂಬಂಧಿಸಿದ ಸಂವಹನಕ್ಕಾಗಿ ಮಾತ್ರವೇ ಕೇಳಲಾಗುತ್ತದೆ ಎಂದು ಅಧಿಸೂಚನೆ ಸ್ಪಷ್ಟಪಡಿಸಿದೆ.

ಈ ಹಿಂದಿನ ಎರಡು ಪ್ರಕ್ರಿಯೆಗಳಲ್ಲಿದ್ದ ಮನೆಗಳಿಗೆ ಬ್ಯಾಂಕಿಂಗ್ ಸೇವೆ ಲಭ್ಯತೆ ಕುರಿತಾದ ಪ್ರಮುಖ ಪ್ರಶ್ನೆಯನ್ನು ಈ ಬಾರಿ ಕೈಬಿಡಲಾಗಿದೆ.
2021ರ ಜನಗಣತಿ ಮತ್ತು ಎನ್‌ಪಿಆರ್ ಅಪ್‌ಡೇಟ್ ಮಾಡುವ ಕಾರ್ಯಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದ ಎರಡು ವಾರಗಳ ಬಳಿಕ ಈ ಅಧಿಸೂಚನೆ ಹೊರಡಿಸಲಾಗಿದೆ. ಮನೆ-ಮನೆ ಸಮೀಕ್ಷೆ ಮತ್ತು ಎನ್‌ಪಿಆರ್ ಅಪ್‌ಡೇಟ್ ಮಾಡುವ ಕಾರ್ಯಗಳು 2020ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಏಕಕಾಲದಲ್ಲಿ ನಡೆಯಲಿದೆ. ಜನಗಣತಿಯು 2021ರ ಫೆಬ್ರವರಿ 9-28ರ ನಡುವೆ ನಡೆಯಲಿದೆ.
ಗೃಹ ಸಚಿವಾಲಯದ ಅಡಿಯಲ್ಲಿನ ರಿಜಿಸ್ಟ್ರಾರ್ ಜನರಲ್ ಗುರುವಾರ ಹೊರಡಿಸಿರುವ ಅಧಿಸೂಚನೆಯಲ್ಲಿ 31 ದತ್ತಾಂಶಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕಳೆದ ಜನಗಣತಿ ಸಂದರ್ಭದಲ್ಲಿ 30 ಪ್ರಶ್ನೆಗಳನ್ನು ಕೇಳಲಾಗಿತ್ತು. ಇದರಲ್ಲಿ ಧಾನ್ಯಗಳ ಬಳಕೆ ಕುರಿತು ಯಾವ ಪ್ರಶ್ನೆಯೂ ಇರಲಿಲ್ಲ.
ಎನ್‌ಪಿಆರ್ ಉನ್ನತೀಕರಣವು ಪೋಷಕರು ಜನ್ಮದಿನಾಂಕ ಮತ್ತು ಸ್ಥಳ, ಕೊನೆಯ ವಾಸಸ್ಥಳ, ಪಾನ್, ಆಧಾರ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ 21 ಅಂಶಗಳನ್ನು ಒಳಗೊಂಡಿರುತ್ತದೆ.
2010ರಲ್ಲಿ ನಡೆಸಲಾಗಿದ್ದ ಎನ್‌ಪಿಆರ್‌ನಲ್ಲಿ 15 ಅಂಶಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಪೋಷಕರ ಜನ್ಮದಿನಾಂಕ ಮತ್ತು ಸ್ಥಳದ ವಿವರ ಹಾಗೂ ಕೊನೆಯ ವಾಸಸ್ಥಳ ಮುಂತಾದ ಮಾಹಿತಿಗಳನ್ನು ಪಡೆದಿರಲಿಲ್ಲ.












Click it and Unblock the Notifications