ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಆಚರಣೆ ವೇಳೆ ಹಿಂಸಾಚಾರ; ಹಲವು ವಾಹನಗಳಿಗೆ ಬೆಂಕಿ: ಮಮತಾ ಬ್ಯಾನರ್ಜಿ ಎಚ್ಚರಿಕೆ
ಪಶ್ಚಿಮ ಬಂಗಾಳ,ಮಾರ್ಚ್ 30: ಪಶ್ಚಿಮ ಬಂಗಾಳದ ಹೌರಾ ನಗರದಲ್ಲಿ ರಾಮನವಮಿ ಮೆರವಣಿಗೆ ನಡೆಸುವಾಗ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಗುರುವಾರ ಸಂಜೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿ ಅಂಗಡಿಗಳನ್ನು ಧ್ವಂಸ ಮಾಡಲಾಗಿದೆ.
ಇನ್ನೂ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ರಾಮನವಮಿ ಮೆರವಣಿಗೆ ಕಾಜಿಪಾರಾ ಪ್ರದೇಶವನ್ನು ದಾಟುತ್ತಿದ್ದಾಗ ಹಿಂಸಾಚಾರ ಸಂಭವಿಸಿದೆ. ಹಿಂಸಾಚಾರದ ಸಮಯದಲ್ಲಿ ಕೆಲವು ಪೊಲೀಸ್ ವಾಹನಗಳು ಸೇರಿದಂತೆ ಹಲವಾರು ಕಾರುಗಳು ಹಾನಿಗೊಳಗಾಗಿವೆ. ಗುಂಪನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದೆ.

ಈ ಸಂಬಂಧ ಹಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಧರಣಿ ನಡೆಸುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಹಿಂಸಾಚಾರದ ಸಂದರ್ಭದಲ್ಲಿ ಹಲವಾರು ಅಂಗಡಿಗಳು ಮತ್ತು ಆಟೋ-ರಿಕ್ಷಾಗಳನ್ನು ಸುಟ್ಟಿದ್ದು, ಕೆಲವು ಪೊಲೀಸ್ ವಾಹನಗಳು ಸೇರಿದಂತೆ ಹಲವಾರು ಕಾರುಗಳಿಗೆ ಬೆಂಕಿ ಹಚ್ಚಲಾಯಿತು. ಬೆಂಕಿಯನ್ನು ನಂದಿಸಲು ನಾಲ್ಕು ಅಗ್ನಿಶಾಮಕದಳ ಆಗಮಿಸಿದೆ. ಇನ್ನೂ ಎರಡು ಗುಂಪು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದ್ದು, ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೌರಾದಲ್ಲಿ ನಡೆದ ರಾಮನವಮಿ ಮೆರವಣಿಗೆಯಲ್ಲಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ , ಘಟನೆಯಲ್ಲಿ ಭಾಗಿಯಾಗಿರುವವರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ರಾಮನವಮಿ ಮೆರವಣಿಗೆಯನ್ನು ತಡೆಯುವುದಿಲ್ಲ ಎಂದು ಪದೇ ಪದೇ ಹೇಳುತ್ತಲೇ ಇದ್ದೇನೆ. ಈ ಬಗ್ಗೆ ಪೊಲೀಸರಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಇಂದಿನ ಹಿಂಸಾಚಾರದಲ್ಲಿ ಭಾಗಿಯಾದವರನ್ನು ಬಿಡುವುದಿಲ್ಲ, ನಾನು ಗಲಭೆಕೋರರನ್ನು ಬೆಂಬಲಿಸುವುದಿಲ್ಲ ಅವರನ್ನು ದೇಶದ ಶತ್ರು ಎಂದು ಪರಿಗಣಿಸುತ್ತೇವೆ. ಬಿಜೆಪಿ ಯಾವಾಗಲೂ ಹೌರಾವನ್ನು ಗುರಿಯಾಗಿಸುತ್ತದೆ. ಅವರ ಇತರ ಗುರಿಗಳು ಪಾರ್ಕ್ ಸರ್ಕಸ್ ಮತ್ತು ಇಸ್ಲಾಂಪುರ, ಎಲ್ಲರೂ ಎಚ್ಚರವಾಗಿರಬೇಕು ಎಂದು ಮಮತಾ ಹೇಳಿದ್ದಾರೆ.
ಆದರೆ ಬಿಜೆಪಿಯ ಹಿರಿಯ ನಾಯಕ ಸುವೇಂದು ಅಧಿಕಾರಿ ಈ ಆರೋಪಗಳನ್ನು ಆಧಾರ ರಹಿತ ಎಂದು ಬಣ್ಣಿಸಿದ್ದಾರೆ. ಹಿಂಸಾಚಾರಕ್ಕೆ ತೃಣಮೂಲ ಸರ್ಕಾರವನ್ನು ದೂಷಿಸಿದರು. ಹಿಂಸಾಚಾರಕ್ಕೆ ಮುಖ್ಯಮಂತ್ರಿ ಮತ್ತು ರಾಜ್ಯ ಆಡಳಿತವೇ ಹೊಣೆ ಎಂದು ಅಧಿಕಾರಿ ಹೇಳಿದ್ದಾರೆ.
ರಾಮನವಮಿ ಆಚರಣೆಯ ದಿನವಾದ ಮಾರ್ಚ್ 30 ರಂದು ಪ್ರತಿಭಟನೆಯನ್ನು ಘೋಷಿಸಿದ್ದಕ್ಕಾಗಿ, ಬಿಜೆಪಿ ತೃಣಮೂಲ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿತು. ಸನಾತನ ಸಂಸ್ಕೃತಿಯಲ್ಲಿ ನಂಬಿಕೆ ಇರುವವರು ರಾಮನ ಜನ್ಮದಿನವನ್ನು ಆಚರಿಸುತ್ತಾರೆ ಎಂದು ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ನಾಯಕ ಸುವೇಂಧು ಅಧಿಕಾರಿ ಹೇಳಿದ್ದಾರೆ. ಆ ದಿನದಂದು ರಜೆ ಘೋಷಿಸುವ ಬದಲು ತಿರುಚಿದ ಮತ್ತು ಸುಳ್ಳು ಹೇಳಿಕೆಗಳನ್ನು ನೀಡಿದ ನಂತರ ಅವರು ಪ್ರತಿಭಟನೆಗಳನ್ನು ಘೋಷಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications