ಬಾಂಗ್ಲಾದೇಶೀಯರು ಎಂಬ ಶಂಕೆ ಮೇಲೆ ಬೆಂಗಳೂರಿನ ಜೈಲಿನಲ್ಲಿ 301 ದಿನಗಳನ್ನು ಕಳೆದ ಪಶ್ಚಿಮ ಬಂಗಾಳ ದಂಪತಿ
ಬೆಂಗಳೂರು, ಜೂನ್. 02: ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಪಶ್ಚಿಮ ಬಂಗಾಳದ ಬುರ್ದ್ವಾನ್‌ನ ದಂಪತಿಯನ್ನು ಅಕ್ರಮ ಬಾಂಗ್ಲಾ ವಲಸಿಗರು ಎಂಬ ಶಂಕೆಯಿಂದ ಬಂಧಿಸಲಾಗಿತ್ತು. ಈ ದಂಪತಿ ಒಟ್ಟು 301 ದಿನಗಳ ಜೈಲುವಾಸ ಅನುಭವಿಸಿದ್ದಾರೆ. ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ತಮ್ಮ ರಾಜ್ಯಕ್ಕೆ ಹೋಗಲು ಗುರುವಾರ ರೈಲು ಹತ್ತಿದ್ದಾರೆ.
ಪಲಾಶ್ ಮತ್ತು ಶುಕ್ಲಾ ಅಧಿಕಾರಿ ಎಂಬ ದಂಪತಿಯನ್ನು ಜುಲೈ 2022 ರಲ್ಲಿ ಬಂಧಿಸಲಾಗಿತ್ತು. ಅವರು ತಮ್ಮ ಎರಡು ವರ್ಷದ ಮಗುವಿನೊಂದಿಗೆ ಬೆಂಗಳೂರಿನಲ್ಲಿದ್ದಾಗ ಅವರು ಬಾಂಗ್ಲಾದೇಶದಿಂದ ಬಂದವರು ಎಂದು ಪೊಲೀಸರು ಶಂಕಿಸಿ ಬಂಧಿಸಿದ್ದರು. ಇಬ್ಬರ ಮೇಲೆ ವಿದೇಶಿಯರ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. ದಂಪತಿ ತಾವು ಪೂರ್ವ ಬುರ್ದ್ವಾನ್‌ನ ಜಮಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಝೌಗ್ರಾಮ್‌ನ ಟೆಲಿಪುಕೂರ್‌ನಿಂದ ಬಂದವರು ಎಂದು ಪೊಲೀಸರಿಗೆ ವಿವರಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ನಂತರ ಬೆಂಗಳೂರು ಪೊಲೀಸರ ತಂಡವು ಪೂರ್ವ ಬುರ್ದ್ವಾನ್‌ನಲ್ಲಿರುವ ಪಲಾಶ್ ಅವರ ಮನೆಗೆ ತಪಾಸಣೆ ನಡೆಸಿತು. ತಂಡವು ಸ್ಥಳೀಯ ಜಮಾಲಪುರ ಬಿಡಿಒ ಅವರನ್ನು ಭೇಟಿಯಾಗಿ ದಾಖಲೆಗಳನ್ನು ಪರಿಶೀಲಿಸಿತು. ಪಾಲಾಶ್ ಅವರ ಸಂಬಂಧಿಕರು ಬೆಂಗಳೂರಿಗೆ ಆಗಮಿಸಿ ಜಾಮೀನು ಅರ್ಜಿ ಸಲ್ಲಿಸಲು ವಕೀಲರನ್ನು ನೇಮಿಸಿಕೊಂಡರು. ಪೊಲೀಸರು ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಬಳಿಕ ಕಳೆದ ತಿಂಗಳು ಏಪ್ರಿಲ್ 28 ರಂದು ದಂಪತಿಗೆ ಜಾಮೀನು ನೀಡಲಾಯಿತು. ಆದರೆ ಸ್ಥಳೀಯ ಜಾಮೀನುದಾರರು ತಮ್ಮ ಜಮೀನು ದಾಖಲೆಗಳನ್ನು ಸಲ್ಲಿಸಲು ಅಗತ್ಯವಿರುವ ಜಾಮೀನು ಬಾಂಡ್‌ಗಳನ್ನು ತಕ್ಷಣವೇ ಅನುಸರಿಸಲು ಸಾಧ್ಯವಾಗದ ಕಾರಣ ಅವರನ್ನು ಮೇ 24 ರಂದು ಜೈಲಿನಿಂದ ಬಿಡುಗಡೆ ಮಾಡಲಾಯಿತು ಎಂದು ಪಲಾಶ್ ಅವರ ಸಂಬಂಧಿ ಸುಜೋಯ್ ಹಲ್ದಾರ್ ಹೇಳಿದ್ದಾರೆ.

ಇಷ್ಟೇಲ್ಲಾ ನಡೆದ ಮೇಲೆ ಪಶ್ಚಿಮ ಬಂಗಾಳದಿಂದ ಬಂದಿದ್ದ ಅವರ ಸಂಬಂಧಿ ಸುಜೋಯ್ ಹಲ್ದಾರ್ ಈ ದಂಪತಿ ಜೊತೆಗೆ ಗುರುವಾರ ಬೆಳಗ್ಗೆ ಹೌರಾಕ್ಕೆ ಹೋಗುವ ಡುರೊಂಟೊ ಎಕ್ಸ್‌ಪ್ರೆಸ್ ಹತ್ತಿದರು. ಶುಕ್ರವಾರ ಮನೆ ತಲುಪಲಿದ್ದಾರೆ. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿರುವ ಪಲಾಶ್‌ನ ಸಹೋದರಿ ಸತಿ ಅಧಿಕಾರಿ ತನ್ನ ಸಂಪಾದನೆಯನ್ನು ಪ್ರಕರಣದ ಹೋರಾಟಕ್ಕೆ ಖರ್ಚು ಮಾಡಿದ್ದಾರೆ.
"ಮೇ 24 ರಂದು ರಾತ್ರಿ 9.30 ರ ಸುಮಾರಿಗೆ ನನಗೆ ಕರೆ ಬಂದಿತು, ದಾದಾ (ಅಣ್ಣ) ಮತ್ತು ಬೌದಿ (ಅತ್ತಿಗೆ) ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನಾನು ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದೆ. ಈ ವೇಳೆ ನನ್ನ ತಾಯಿಗೆ ಕಣ್ಣೀರು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ನೋವು ಹೊರಹಾಕಿದ್ದಾರೆ.












Click it and Unblock the Notifications