ಭಾರತ ಲಾಕ್ ಡೌನ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲವೇ ಎಂದ ದೀದಿ!
ನವದೆಹಲಿ, ಏಪ್ರಿಲ್.27: ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಭಾರತ ಲಾಕ್ ಡೌನ್ ಘೋಷಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನಿರ್ಧಾರಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆಗೆ ಸಂವಾದ ನಡೆಸಿದ ಮಮತಾ ಬ್ಯಾನರ್ಜಿ ಮೇ.21ರವರೆಗೂ ಪಶ್ಚಿಮ ಬಂಗಾಳದಲ್ಲಿ ಲಾಕ್ ಡೌನ್ ವಿಸ್ತರಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಲಾಕ್ ಡೌನ್ ಮುಂದುವರಿಯುವುದಂತೂ ಖಚಿತವಾಗಿದ್ದು ಕೆಲವು ಪ್ರದೇಶಗಳಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗುತ್ತದೆ. ಗ್ರೀನ್, ಆರೆಂಜ್ ಹಾಗೂ ರೆಡ್ ಝೋನ್ ಗಳನ್ನಾಗಿ ವಿಂಗಡನೆ ಮಾಡಲಾಗಿದ್ದು, ಯಾವ ವಲಯಕ್ಕೆ ಏನೆಲ್ಲ ವಿನಾಯಿತಿಗಳನ್ನು ನೀಡಬೇಕು ಎಂಬುದನ್ನು ಇನ್ನಷ್ಟೇ ತೀರ್ಮಾನಿಸಬೇಕಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಲಾಕ್ ಡೌನ್ ಘೋಷಿಸುವುದೇಕೆ, ಸಡಿಲಿಕೆ ಮಾಡುವುದೇಕೆ?
ಭಾರತ ಲಾಕ್ ಡೌನ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸರಿಯಾದ ಸ್ಪಷ್ಟತೆಯಿಲ್ಲ. ಹಲವು ರಾಜ್ಯಗಳು ಲಾಕ್ ಡೌನ್ ವಿಸ್ತರಣೆಗೆ ಬೆಂಬಲ ಸೂಚಿಸುತ್ತಿವೆ. ಆದರೆ ಕೇಂದ್ರ ಸರ್ಕಾರ ಯಾವ ರೀತಿ ಲಾಕ್ ಡೌನ್ ಮುಂದುವರಿಸಬೇಕು ಎಂಬುದರ ಬಗ್ಗೆ ಕ್ಲ್ಯಾರಿಟಿ ಇಲ್ಲ. ಒಂದು ಕಡೆಯಲ್ಲಿ ಲಾಕ್ ಡೌನ್ ವಿಸ್ತರಿಸಲಾಗುತ್ತದೆ ಎನ್ನುವ ಸರ್ಕಾರ, ಇನ್ನೊಂದು ಕಡೆಯಲ್ಲಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುತ್ತಿದೆ. ಹೀಗೆ ಅನುಮತಿ ನೀಡಿದ್ದಲ್ಲಿ ಅದು ಲಾಕ್ ಡೌನ್ ಹೇಗೆ ಆಗುತ್ತದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ.

"ಒಳ್ಳೆಯ ಕೆಲಸಗಳ ಬಗ್ಗೆ ಯಾರೂ ಮಾತಾಡಲ್ಲ"
ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ ಪ್ರಾಧಿಕಾರಗಳನ್ನು ರಚನೆ ಮಾಡಲಾಗಿದೆ. ರಾಜ್ಯ ಸರ್ಕಾರವು ಉತ್ತಮ ಕಾರ್ಯಗಳನ್ನು ಜಾರಿಗೊಳಿಸಿದಾಗ ಅದರ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ. ಅದರ ಬದಲು ಒಂದೇ ಒಂದು ತಪ್ಪು ಹೆಜ್ಜೆ ಇಟ್ಟರೆ ಎಲ್ಲರೂ ಅದರ ಬಗ್ಗೆಯೇ ವಾಗ್ದಾಳಿ ನಡೆಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಆಪಾದಿಸಿದರು.

ಕ್ವಾರೆಂಟೈನ್ ಗಿಂತ ಗೃಹ ದಿಗ್ಬಂಧನವೇ ಲೇಸು
ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ಕ್ವಾರೆಂಟೈನ್ ಕೇಂದ್ರಗಳಿಗೆ ರವಾನಿಸುವ ಬದಲು ಸಾಧ್ಯವಾದಷ್ಟು ಗೃಹ ದಿಗ್ಬಂಧನದಲ್ಲಿ ಇರಿಸುವತ್ತ ಲಕ್ಷ್ಯ್ ವಹಿಸಲಾಗಿದೆ. ದೇಶದಲ್ಲಿ ವೈದ್ಯಕೀಯ ಕಿಟ್ ಸಮಸ್ಯೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಲು ಸೋಂಕಿತರು ಸ್ವಯಂಪ್ರೇರಿತರಾಗಿ ಗೃಹ ದಿಗ್ಬಂಧನದಲ್ಲಿ ಎಚ್ಚರಿಕೆ ವಹಿಸಿಕೊಂಡಿರಬೇಕು. ಗೃಹ ದಿಗ್ಬಂಧನ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಮಾದರಿ ಕ್ರಮ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ದೀದಿ ಗುಡುಗು
ರಾಜ್ಯ ಸರ್ಕಾರವು ಎಲ್ಲರಿಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿಲ್ಲ. ಬದಲಿಗೆ ಅಸಹಾಯ ಸ್ಥಿತಿಯಲ್ಲಿ ಇರುವ ಬಡವರು ಮತ್ತು ಅಂಗವಿಕಲರಿಗೆ ಮಾತ್ರ ಅಗತ್ಯ ನೆರವು ನೀಡಲಾಗುತ್ತದೆ. ಏಕೆಂದರೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರವು ಅಗತ್ಯವಿರುವ ಆರ್ಥಿಕ ನೆರವು ನೀಡಿಲ್ಲ ಎಂದು ದೀದಿ ಗುಡುಗಿದ್ದಾರೆ.












Click it and Unblock the Notifications