ಎಐಸಿಸಿ ಅಧ್ಯಕ್ಷರಾಗುವಂತೆ ರಾಹುಲ್ ಗಾಂಧಿಯವರನ್ನು ಒತ್ತಾಯಿಸುತ್ತೇವೆ: ಮಲ್ಲಿಕಾರ್ಜುನ್ ಖರ್ಗೆ
ನವದೆಹಲಿ, ಆಗಸ್ಟ್ 27: ರಾಹುಲ್ ಗಾಂಧಿ ಅವರನ್ನು ಬಿಟ್ಟು ಬೇರೆ ಯಾರೂ ಸೂಕ್ತ ಅಭ್ಯರ್ಥಿ ಕಾಂಗ್ರೆಸ್ ಪಕ್ಷದಲ್ಲಿಲ್ಲದ ಕಾರಣ ಅವರನ್ನೇ ಅಧ್ಯಕ್ಷರಾಗಿ ನೇಮಕ ಮಾಡಲು ಪ್ರಯತ್ನಿಸಲಾಗುವುದು ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪಕ್ಷಕ್ಕೆ ಕಗ್ಗಾಂಟಾಗಿರುವ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಚುನಾವಣೆಗೆ ತಯಾರಿಗಳು ನಡೆಯುತ್ತಿವೆ. ಆದರೆ ಅಧ್ಯಕ್ಷರು ಯಾರು ಎಂಬುದರ ಬಗ್ಗೆ ಇನ್ನೂ ಪಕ್ಷದಲ್ಲಿ ತಿಳಿಯಾದ, ಗಟ್ಟಿ ನಿರ್ಧಾರಗಳು ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿ 23 ನಾಯಕರ ಗುಂಪಿನ ಪ್ರಮುಖ ನಾಯಕರಾದ ಗುಲಾಂ ನಬಿ ಅಜಾದ್ ಸೇರಿದಂತೆ ಕೆಲವು ಮುಖಂಡರು ರಾಜೀನಾಮೆ ನೀಡಿದ್ದು, ಇದು ಕಾಂಗ್ರೆಸ್‌ಗೆ ಅಧ್ಯಕ್ಷರ ಆಯ್ಕೆ ಬಗೆಗಿನ ಹಾದಿಯನ್ನು ಇನ್ನಷ್ಟು ಕಠಿಣಗೊಳಿಸಿದೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷವನ್ನು ಮುನ್ನಡೆಸಲು ಬಯಸುವ ಯಾರಾದರೂ ದೇಶಾದ್ಯಂತ ಪರಿಚಿತರಾಗಿರಬೇಕು. ಅಂದರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ, ಪಶ್ಚಿಮ ಬಂಗಾಳದಿಂದ ಗುಜರಾತ್‌ವರೆಗೆ ಜನರ ಬೆಂಬಲವನ್ನು ಗಳಿಸಿರಬೇಕು. ಹಾಗಾಗಿಯೇ ಸೂಕ್ತ ಅಭ್ಯರ್ಥಿಗಳ ಹುಡುಕಾಟಕ್ಕೆ ಹೆಚ್ಚು ಪ್ರಯಾಸ ಮಾಡಿಕೊಂಡಿಲ್ಲ ಎಂದು ಹೇಳಿದರು.
ಅದ್ಯಕ್ಷ ಅಭ್ಯರ್ಥಿ ಅವರು ಇಡೀ ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಗುರುತಿಸಲ್ಪಡಬೇಕು. ಅಲ್ಲದೆ ಸ್ವೀಕರಿಸಲ್ಪಡುವ ವ್ಯಕ್ತಿತ್ವದ ವ್ಯಕ್ತಿಯಾಗಬೇಕು. ಆದ್ದರಿಂದ ಅಂತಹ ಯಾವುದೇ ಅಭ್ಯರ್ಥಿ ರಾಹುಲ್ ಗಾಂಧಿಯವರನ್ನು ಬಿಟ್ಟು ಬೇರೆಯವರಿಲ್ಲ. ಎಲ್ಲಾ ಹಿರಿಯ ನಾಯಕರು ಸೋನಿಯಾ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷಗಿರಿ ಹಿಡಿದು ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ನೆನಪಿಸಿಕೊಂಡ ಅವರು, ರಾಹುಲ್ ಗಾಂಧಿಗೆ ಮತ್ತೆ ಅಧ್ಯಕ್ಷಗಾಧಿಯ ಚುಕ್ಕಾಣಿ ಹಿಡಿಯಲು ವಿನಂತಿಸಲಾಗುವುದು ಎಂದು ಖರ್ಗೆ ಹೇಳಿದರು.

ಆರ್‌ಎಸ್‌ಎಸ್-ಬಿಜೆಪಿ ವಿರುದ್ಧ ಹೋರಾಡಲು ವಿನಂತಿ
ನೀವು ರಾಹುಲ್ ಗಾಂಧಿ ಹೊರತುಪಡಿಸಿ ಪಕ್ಷದಲ್ಲಿ ಬೇರೆ ವ್ಯಕ್ತಿ ಪರ್ಯಾಯವಾಗಿ ಯಾರಿದ್ದಾರೆ ನನಗೆ ಹೇಳಿ?. ಏಕೀಕೃತ ಪಕ್ಷಕ್ಕಾಗಿ, ದೇಶಕ್ಕಾಗಿ, ಆರ್‌ಎಸ್‌ಎಸ್-ಬಿಜೆಪಿ ವಿರುದ್ಧ ಹೋರಾಡಲು ಮತ್ತು ಕಾಂಗ್ರೆಸ್‌ನ ಅಧಿಕಾರವನ್ನು ಉಳಿಸಿಕೊಳ್ಳಲು ರಾಹುಲ್ ಗಾಂಧಿ ಅವರನ್ನು ವಿನಂತಿಸಲಾಗುವುದು. ಈ ಹಿನ್ನೆಲೆಯಲ್ಲಿ ಜೋಡೋ ಭಾರತ್ ಯಾತ್ರೆ ರಾಹುಲ್ ಗಾಂಧಿ ಅಗತ್ಯವಿದೆ ಎಂದು ಹೇಳಿದರು.

ಬೆಂಬಲವಾಗಿ ನಾವು ಅವರ ಹಿಂದೆ ನಿಲ್ಲುತ್ತೇವೆ: ಖರ್ಗೆ
ಈ ವೇಳೆ ನಾವು ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ಹಿಂತಿರುಗುವಂತೆ ಕೇಳುತ್ತೇವೆ, ನಾವು ಅವರನ್ನು ಒತ್ತಾಯಿಸುತ್ತೇವೆ. ಮಾತ್ರವಲ್ಲ ಅವರಿಗೆ ಬೆಂಬಲವಾಗಿ ನಾವು ಅವರ ಹಿಂದೆ ನಿಲ್ಲುತ್ತೇವೆ. ನಾವು ಅಧ್ಯಕ್ಷರಾಗಿ ರಾಹುಲ್ ಅವರನ್ನು ಮುಂದುವರಿಸಲು ಪ್ರಯತ್ನಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಚುನಾವಣೆಗೆ ಭಾನುವಾರ ವರ್ಚುವಲ್ ಸಭೆ
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಥವಾ ಸಿಡಬ್ಲ್ಯೂಸಿ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ. ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ದಿನಾಂಕಗಳ ವೇಳಾಪಟ್ಟಿಯನ್ನು ಅನುಮೋದಿಸಲು ಭಾನುವಾರ ವರ್ಚುವಲ್ ಸಭೆಯನ್ನು ನಡೆಸಲಿದೆ. ಸಿಡಬ್ಲ್ಯೂಸಿ ಸಭೆಯ ಅಧ್ಯಕ್ಷತೆಯನ್ನು ಸೋನಿಯಾ ಗಾಂಧಿ ವಹಿಸಲಿದ್ದಾರೆ. ರಾಹುಲ್ ಗಾಂಧಿ ಮತ್ತೆ ಪಕ್ಷದ ಮುಖ್ಯಸ್ಥರಾಗುವಂತೆ ಹಲವು ನಾಯಕರು ಸಾರ್ವಜನಿಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಈ ವಿಚಾರದಲ್ಲಿ ಅನಿಶ್ಚಿತತೆ ಮತ್ತು ರಹಸ್ಯ ಮುಂದುವರಿದಿದೆ. ಈ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗುವುದಿಲ್ಲ ಎಂಬ ತಮ್ಮ ನಿಲುವನ್ನು ಮುಂದುವರಿಸುತ್ತಿದ್ದಾರೆ ಎಂದು ಪಕ್ಷದ ಹಲವಾರು ಒಳಗಿನವರು ಇನ್ನೂ ಹೇಳುತ್ತಾರೆ.

ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆ
2019ರಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ಪಕ್ಷವು ಸತತ ಎರಡನೇ ಸೋಲನ್ನು ಅನುಭವಿಸಿದ ನಂತರ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಹಂಗಾಮಿ ಅಧ್ಯಕ್ಷರಾಗಿ ಮತ್ತೆ ಪಕ್ಷದ ಆಡಳಿತವನ್ನು ವಹಿಸಿಕೊಂಡ ಸೋನಿಯಾ ಗಾಂಧಿ, ಜಿ -23 ನಾಯಕರ ಒಂದು ವಿಭಾಗದ ಬಹಿರಂಗ ಬಂಡಾಯದ ನಂತರ ಆಗಸ್ಟ್ 2020 ರಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಸಿಡಬ್ಲ್ಯೂಸಿ ಅವರನ್ನು ಮುಂದುವರಿಸಲು ಒತ್ತಾಯಿಸಿತ್ತು.












Click it and Unblock the Notifications