ಹಿಮಾಲಯದಲ್ಲಿ 8.5ರಷ್ಟು ತೀವ್ರತೆಯ ಭೂಕಂಪ ಸಂಭವ: ವಿಜ್ಞಾನಿಗಳ ಎಚ್ಚರಿಕೆ
ಹಿಮಾಲಯದಲ್ಲಿ ಹೆಚ್ಚು ತೀವ್ರತೆಯ ಭೂಕಂಪನ ಸಂಭವಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಾ ಬಂದಿದ್ದು, ಇದೀಗ ಭಾರತೀಯ ಸಂಶೋಧಕರೊಬ್ಬರು ಇದೇ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಜವಾಹರ್ ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ರಾಜೇಂದ್ರನ್ ನೇತೃತ್ವದ ಅಧ್ಯಯನದಲ್ಲಿ ಈ ಸಂಗತಿ ತಿಳಿಸಲಾಗಿದೆ.
ಯಾವುದೇ ಸಮಯದಲ್ಲಿ 8.5 ಹಾಗೂ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪನ ಮಧ್ಯ ಹಿಮಾಲಯದಲ್ಲಿ ಸಂಭವಿಸಬಹುದು ಎಂದು ತಿಳಿಸಲಾಗಿದೆ. ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಬಿಡುಗಡೆ ಮಾಡಿದ ಸ್ಥಳೀಯ ಭೂ ವಿಜ್ಞಾನ ಹಾಗೂ ರಚನೆಯ ನಕ್ಷೆಯನ್ನು ಸಂಶೋಧಕರು ಅನುಸರಿಸಿದ್ದಾರೆ.
8.5 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಭೂಕಂಪನ 1315 ಹಾಗೂ 1440ರ ಮಧ್ಯೆ ಸಂಭವಿಸಿತ್ತು. ಆದ್ದರಿಂದ ಆ ಪ್ರಮಾಣದ ಭೂ ಕಂಪನವು ಬಹಳ ಕಾಲದಿಂದ ಹಾಗೆ ಬಾಕಿ ಉಳಿದುಹೋಗಿದೆ. ಈ ಭಾಗದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಪರಿಸರದಲ್ಲಿ ಹೆಚ್ಚುತ್ತಿರುವ ನಿರ್ಮಾಣಗಳು, ಅನಿರೀಕ್ಷಿತ ಎದುರಾದರೆ ಅದನ್ನು ಎದುರಿಸಲು ಅಷ್ಟಾಗಿ ಸಿದ್ಧವಿಲ್ಲದಿರುವುದರಿಂದ ಈ ಬಾರಿಯ ಅಪಾಯ ಹೆಚ್ಚು ಎಂದು ರಾಜೇಂದ್ರನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅಮೆರಿಕದ ಜಿಯೋಫಿಸಿಸ್ಟ್ ರೋಜರ್ ಬಿಲ್ಹಮ್ ಅವರು ಭಾರತೀಯ ಸಂಶೋಧಕರ ಸಂಶೋಧನೆಯನ್ನು ಅನುಮೋದಿಸಿದ್ದಾರೆ. ಆ ಎಚ್ಚರಿಕೆಯನ್ನು ನಿರಾಕರಿಸಲು ಸಾಧ್ಯವಿಲ್ಲ. 8.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಬಹುದು ಎಂದಿದ್ದಾರೆ.
ಪುಣೆ ಮೂಲದ ಸಂಶೋಧಕರಾದ ಅರುಣ್ ಬಾಪಟ್ ಈ ಹಿಂದೆ ಹಿಂದೂ ಮಹಾಸಾಗರದಲ್ಲಿ ಸುನಾಮಿ ಸಂಭವಿಸುವ ಬಗ್ಗೆ ತಿಳಿಸಿದ್ದರು. ಅದೇ ಸಂಶೋಧಕರು ಈಗ ಮಾಧ್ಯಮದ ಜತೆ ಮಾತನಾಡಿ, 2018 ಅಥವಾ ಆಚೀಚೆ ಹಿಮಾಲಯದಲ್ಲಿ ದೊಡ್ಡ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದಿದ್ದಾರೆ.












Click it and Unblock the Notifications