Vande Bharat Express: ಬೆಂಗಳೂರಿನಿಂದ ಮತ್ತೊಂದು ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲು ಸಂಚಾರ?, ಅಪ್ಟೇಟ್ಸ್
Vande Bharat Express Train: ದೇಶದ ರೈಲ್ವೆ ಪ್ರಯಾಣಿಕರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವಿಸ್ತರಣೆ, ಹೊಸ ಮಾರ್ಗದಲ್ಲಿ ಕಾರ್ಯಾಚರಣೆ ಉಪಕ್ರಮ ಮುಂದುವರಿದಿದೆ. ಇದೀಗ ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಮತ್ತೊಂದು ಹೊಸ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಮಾಡಲಿದೆ. ಈ ಭಾಗದ ಜನರ ಬಹುದಿನಗಳ ಆಸೆ ಈಡೇರುವ ಕಾಲ ಸನ್ನಿಹಿತವಾಗಿದೆ.
ರಾಜಧಾನಿ ಬೆಂಗಳೂರಿನಿಂದ ಆಂಧ್ರಪ್ರದೇಶದ ಪ್ರಮುಖ ಪಟ್ಟಣವಾದ ವಿಜಯವಾಡಕ್ಕೆ (Bengaluru-Vijayawada Vande Bharat Express Train) ಹೊಸ ವಂದೇ ಭಾರತ್ ರೈಲು ಸೇವೆ ಎದುರು ನೋಡಲಾಗುತ್ತಿದೆ. ಈ ವರ್ಷದ ಆರಂಣಭದಲ್ಲೇ ಈ ಮಾರ್ಗದಲ್ಲಿ ಸೇವೆ ಆರಂಭವಾಗಲಿದೆ ಎನ್ನಲಾಗಿತ್ತು, ಆದರೆ ಆಗಿರಲಿಲ್ಲ. ದಕ್ಷಿಣ ಮಧ್ಯ ರೈಲ್ವೆ (SCR) ಮೂಲಗಳ ಪ್ರಕಾರ ಮುಂದಿನ ಡಿಸೆಂಬರ್ 10 ರಂದು ವಿಜಯವಾಡ ಮತ್ತು ಬೆಂಗಳೂರು ನಡುವೆ ತಿರುಪತಿ ಮೂಲಕ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸುವ ನಿರೀಕ್ಷೆ ಇದೆ.

ಈ ರೈಲು ವಾರದಲ್ಲಿ ಆರು ದಿನ ನಿತ್ಯ ಸಂಚಾರ ಮಾಡಲಿದೆ. ತಿರುಪತಿ ಸೇರಿದಂತೆ ನಿಲ್ದಾಣಗಳ ಮೂಲಕ ಹಾದು ಹೋಗಲಿದೆ. ಇದರಿಂದ ಬೆಂಗಳೂರಿನಿಂದ ತಿರುಪತಿಗೆ ತೆರಳುವ ಭಕ್ತರಿಗೂ ಅನುಕೂಲವಾಗಲಿದೆ. ವಿಜಯವಾಡ-ಬೆಂಗಳೂರು ರೈಲು (20711) ಪ್ರಯಾಣಿಕರಿಗೆ ಹೊಸ ಭರವಸೆ ಸಿಕ್ಕಂತಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಯು ಎರಡು ಪ್ರಮುಖ ನಗರಗಳ ಮಧ್ಯ ಅತ್ಯಾಧುನಿಕ ವಂದೇಭಾರತ್ ಎಕ್ಸ್‌ಪ್ರೆಸ್ ಸೇವೆ ಪರಿಚಯಿಸುವ ಉಪಕ್ರಮವನ್ನು ಅಂತಿಮಗೊಳಿಸಿದೆ. ಒಟ್ಟು ಒಂಬತ್ತು ಗಂಟೆಗಳ ಜರ್ನಿ ಇದಾಗಿರಲಿದೆ. ಇತರ ರೈಲುಗಳಿಗಿಂತ ಈ ರೈಲಿನಲ್ಲಿ ಆರಾಮದಾಯಕ, ವಿಶೇಷ ಮತ್ತು ಐಶಾರಾಮಿ ಅನುಭವ ಪ್ರಯಾಣಿಕರಿಗೆ ಸಿಗಲಿದೆ. ಈ ಭಾಗದ ಸಾರಿಗೆ, ಕೈಗಾರಿಕೆ, ಶಿಕ್ಷಣ ಮುಖ್ಯವಾಗಿ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ.
ಸದ್ಯಕ್ಕೆ ಕಡಿಮೆ ಬೋಗಿಗಳೊಂದಿಗೆ ಸಂಚಾರ
ಅರಂಭದಲ್ಲಿ ಈ ರೈಲು ಒಟ್ಟು 08 ಬೋಗಿಗಳೊಂದಿಗೆ ಸಂಚಾರ ಸೇವೆ ಆರಂಭಿಸಲಿದೆ. ಅದರಲ್ಲಿ ಏಳು ಎಸಿ ಚೇರ್ ಕಾರ್‌ಗಳು ಮತ್ತು ಒಂದು ಎಕ್ಸಿಕ್ಯುಟಿವ್ ಚೇರ್ ಕಾರ್ ಇರಲಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಭವಿಷ್ಯದಲ್ಲಿ ಬೋಗಿಗಳ ಸಂಖ್ಯೆ ಹೆಚ್ಚಿಸಲೂಬಹುದು.
ಬೆಂಗಳೂರು-ವಿಜಯವಾಡ ವಿಬಿ ರೈಲು ವೇಳಾಪಟ್ಟಿ
ವಿಜಯವಾಡದಿಂದ ಬೆಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20711) ಬೆಳಗ್ಗೆ 5:15 ಗಂಟೆಗೆ ವಿಜಯವಾಡದಿಂದ ಹೊಡುತ್ತದೆ. ಅದೇ ದಿನ ಮಧ್ಯಾಹ್ನ 15 ಕ್ಕೆ SMVT ಬೆಂಗಳೂರು ನಿಲ್ದಾಣಕ್ಕೆ ಬಂದು ಸೇರುತ್ತದೆ. ಮಾರ್ಗ ಮಧ್ಯದಲ್ಲಿ ತೆನಾಲಿ (5:39ಕ್ಕೆ) ಓಂಗೋಲ್ (6:28ಕ್ಕೆ), ನೆಲ್ಲೂರು (7:43ಕ್ಕೆ), ತಿರುಪತಿ (9:45ಕ್ಕೆ), ಚಿತ್ತೂರು (10:27), ಕಟ್ಪಾಡಿ (11:13) ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಮಧ್ಯಾಹ್ನ 1:38 ಗಂಟೆಗೆ ಕೆ.ಆರ್.ಪುರಂ ಹಾದು ಬೆಂಗಳೂರಿಗೆ ಬರಲಿದೆ.
ಬೆಂಗಳೂರಿನಿಂದ ವಿಜಯವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20712) ಅದೇ ದಿನ ಮಧ್ಯಾಹ್ನ 2:45 ಗಂಟೆಗೆ ರಾಜಧಾನಿಯಿಂದ ಪ್ರಯಾಣ ಆರಂಭಿಸಿ ರಾತ್ರಿ 11:45 ಕ್ಕೆ ವಿಜಯವಾಡ ತಲುಪುತ್ತದೆ. ಮಾರ್ಗ ಮಧ್ಯ ಕೃಷ್ಣರಾಜಪುರಂ (ಮಧ್ಯಾಹ್ನ 2:58ಕ್ಕೆ), ಕಟ್ಪಾಡಿ (ಸಂಜೆ 5:23ಕ್ಕೆ), ಚಿತ್ತೂರು (5:49), ತಿರುಪತಿ (6:55), ನೆಲ್ಲೂರು (ರಾತ್ರಿ 8:18ಕ್ಕೆ), ಓಂಗೋಲ್ (ರಾತ್ರಿ 9:29), ತೆನಾಲಿ (ರಾತ್ರಿ 10:42) ನಲ್ಲಿ ನಿಲುಗಡೆ ನೀಡಿ ರಾತ್ರಿ 11:45ಕ್ಕೆ ವಿಜಯವಾಡ ತಲುಪುತ್ತದೆ. ಈ ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಸೇವೆ ಅಧಿಕೃತವಾಗುತ್ತಿದ್ದಂತೆ ರೈಲ್ವೆ ಇಲಾಖೆ ಅಂತಿಮ ವೇಳಾಪಟ್ಟಿ ಪ್ರಕಟಿಸಲಿದೆ.
ಹಾಲಿ ಬೆಂಗಳೂರಿಗೆ ವಿಜಯವಾಡದಿಂದ ಏಕೈಕ ನೇರ ರೈಲು ಆಯ್ಕೆಯೆಂದರೆ ಮಚಲಿಪಟ್ನಂ-ಯಶವಂತಪುರ ಕೊಂಡವೀಡು ಎಕ್ಸ್‌ಪ್ರೆಸ್ ರೈಲು. ಈ ರೈಲು ವಾರದಲ್ಲಿ ಮೂರು ಸಲ ಕಾರ್ಯಾಚರಣೆ ಮಾಡುತ್ತುದೆ. ಇದರೊಂದಿಗೆ ಇದೇ ಡಿಸೆಂಬರ್ ಇಲ್ಲವೇ 2026ರ ಜನವರಿಗೆ ಹೊಸ ವಂದೇ ಭಾರತ್ ರೈಲು ಸೇವೆ ಆರಂಭಿಸುವ ನಿರೀಕ್ಷೆಗಳು ಇವೆ.












Click it and Unblock the Notifications