ವಿಡಿಯೋ: ಕಾರಿನ ಮುಂದೆಯೇ ರಿಕ್ಷಾ ಪಲ್ಟಿಯಾದರೂ ನೋಡದ ಜಿಲ್ಲಾಧಿಕಾರಿ, ಎಸ್‌ಪಿ
ಸೀತಾಪುರ ಅಕ್ಟೋಬರ್ 11: ಸಾಮಾನ್ಯವಾಗಿ ನಡೆದುಕೊಂಡು ಹೋಗುವ ವ್ಯಕ್ತಿ ನಮ್ಮ ಕಣ್ಣು ಮುಂದೆ ಎಡವಿದರೆ ತಕ್ಷಣ ಅವರನ್ನು ಬೀಳದಂತೆ ಹಿಡಿಯಲು ನಾವು ಮುಂದಾಗುತ್ತೇವೆ. ಅವರೊಂದು ವೇಳೆ ಬಿದ್ದರು ಅವರಿಗೆ ಏನಾದರು ಆಯ್ತೆ ಎಂದು ವಿಚಾರಿಸುತ್ತೇವೆ. ಹಾಗೊಂದು ವೇಳೆ ಗಂಭೀರವಾದ ಗಾಯಗಳಾದರೆ ಅವರಿಗೆ ಚಿಕಿತ್ಸೆ ಕೊಡಿಸಲು ಮುಂದಾಗುತ್ತೇವೆ. ಆದರೆ ಇಲ್ಲೊಂದು ಘಟನೆಯ ವಿಡಿಯೋ ನೋಡಿ ಜನ ಅಧಿಕಾರಿಗಳನ್ನು ಹಿಗ್ಗಾಮುಗ್ಗ ನಿಂದಿಸುತ್ತಿದ್ದಾರೆ.
ಉತ್ತರ ಪ್ರದೇಶದ ಸೀತಾಪುರದಲ್ಲಿ ಇ-ರಿಕ್ಷಾವೊಂದು ಪಲ್ಟಿಯಾಗಿರುವ ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು ಸೀತಾಪುರದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ಅಸೂಕ್ಷ್ಮತೆಯನ್ನೂ ಈ ವಿಡಿಯೋ ಬಯಲು ಮಾಡಿದೆ. ಸೀತಾಪುರದಲ್ಲಿ ಪ್ರಯಾಣಿಕರು ತುಂಬಿದ್ದ ಇ-ರಿಕ್ಷಾವೊಂದು ನೀರು ಮತ್ತು ಕೆಸರು ತುಂಬಿದ ರಸ್ತೆಗಳಲ್ಲಿನ ಗುಂಡಿಗೆ ಪಲ್ಟಿಯಾಗಿದೆ. ಆಟೋ ರಿಕ್ಷಾದ ಮುಂದೆ ಪೊಲೀಸ್ ವಾಹನ ಸೇರಿದಂತೆ ಸರಕಾರಿ ವಾಹನಗಳು ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಸೀತಾಪುರದ ಡಿಎಂ ಮತ್ತು ಎಸ್ಪಿ ಅವರ ಬೆಂಗಾವಲು ಪಡೆ ಜಹಾಂಗೀರಾಬಾದ್ ಮಾರ್ಗದಲ್ಲಿ ಹೊರಡುವಾಗ ಈ ಅಪಘಾತ ಸಂಭವಿಸಿದೆ. ಈ ವೇಳೆ ಇ-ರಿಕ್ಷಾ ಮುಂಭಾಗದಿಂದ ಬಂದ ಬೆಂಗಾವಲು ಪಡೆಯ ವಾಹನಗಳನ್ನು ತಪ್ಪಿಸಲು ಪ್ರಯತ್ನಿಸಿ ಗುಂಡಿಗಳಿಗೆ ಬಿದ್ದಿದೆ. ಆದರೆ ಅಧಿಕಾರಿಗಳು ಅವರ ಕಾರನ್ನು ನಿಲ್ಲಿಸದೇ ಆಟೋ ಮುಂಭಾಗದಿಂದಲೇ ಸಾಗಿದ್ದಾರೆ. ಮಾನವೀಯತೆಯನ್ನೇ ಮರೆತು ಅಧಿಕಾರಿಗಳು ವರ್ತಿಸಿದ್ದಾರೆ ಎಂದು ವೈರಲ್ ವಿಡಿಯೋ ಹಂಚಿಕೊಂಡು ಜನ ದೂರುತ್ತಿದ್ದಾರೆ.
|
ಡಿಎಂ ಮತ್ತು ಎಸ್ಪಿ ವಾಹನದ ಮುಂದೆ ಘಟನೆ
ಇ-ರಿಕ್ಷಾ ಉರುಳಿದ ನಂತರ ಅದರಲ್ಲಿ ಕುಳಿತಿದ್ದ ಪ್ರಯಾಣಿಕರು ನೆಲಕ್ಕೆ ಬಿದ್ದಿದ್ದಾರೆ. ಡಿಎಂ ಮತ್ತು ಎಸ್ಪಿ ಅವರು ತಮ್ಮ ಕಾರಿನೊಳಗಿಂದ ಈ ಘಟನೆಯನ್ನು ನೋಡಿಯೋ ವಾಹನವನ್ನು ನಿಲ್ಲಿಸದೆ ಅಲ್ಲಿಂದ ತೆರಳಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸಾರ್ವಜನಿಕರ ಮೇಲಿನ ನಿರಾಸಕ್ತಿ ಕಂಡು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಅಧಿಕಾರಿಗಳಾಗಲಿ ಅಥವಾ ಅವರ ಯಾವುದೇ ಹಿಂಬಾಲಕರಾಗಲಿ ಆಟೋ ರಿಕ್ಷಾ ಹಾಗೂ ಪ್ರಯಾಣಿಕರು ಬಿದ್ದ ಬಳಿಕ ಸಹಾಯ ಮಾಡಲು ಬಂದಿಲ್ಲ ಎಂದು ಜನರು ಹೇಳುತ್ತಿದ್ದಾರೆ.
ಯಾರೂ ಸಹಾಯ ಮಾಡದಿದ್ದಾಗ, ಪ್ರಯಾಣಿಕರು ತಮ್ಮನ್ನು ಇ-ರಿಕ್ಷಾದ ಕೆಳಗೆ ಎಳೆದುಕೊಂಡು ಮತ್ತೆ ಇ-ರಿಕ್ಷಾವನ್ನು ಎತ್ತಿಕೊಂಡರು. ಆ ರಸ್ತೆಯಲ್ಲಿ ಹೊಂಡಗಳು ಬಿದ್ದಿದ್ದು, ಇಡೀ ರಸ್ತೆಯಲ್ಲಿ ನೀರು, ಕೆಸರು ತುಂಬಿಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಮಳೆಯಿಂದಾಗಿ ಗೋಚರಿಸಿದ ರಸ್ತೆಗಳ ತಗ್ಗು ಗುಂಡಿಗಳು
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಡಿಎಂ ಅನುಜ್ ಸಿಂಗ್ ಮತ್ತು ಎಸ್ಪಿ ಸುಶೀಲ್ ಚಂದ್ರಭಾನ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬೆಂಗಾವಲು ಪಡೆಯೊಂದಿಗೆ ತೆರಳಿದ್ದರು. ಡಿಎಂ ಮತ್ತು ಎಸ್ಪಿ ಪ್ರವಾಹ ಪೀಡಿತ ಪ್ರದೇಶದಿಂದ ಹಿಂತಿರುಗುತ್ತಿದ್ದಾಗ ಇ-ರಿಕ್ಷಾ ಅಪಘಾತ ಸಂಭವಿಸಿದೆ. ಸೀತಾಪುರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಹಾಂಗೀರಾಬಾದ್ ಪ್ರದೇಶದ ರಸ್ತೆಗಳು ಜಲಾವೃತವಾಗಿವೆ. ಹೀಗಾಗಿ ರಸ್ತೆಗಳ ತಗ್ಗು ಗುಂಡಿಗಳು ಕಾಣದೆ ಸವಾರರು ಪರದಾಡುವಂತಾಗಿದೆ.

'ರಾಜ್ಯದ ಎಲ್ಲ ನಾಗರಿಕರಿಗೂ ಉತ್ತಮ ಸಂಪರ್ಕದ ಹಕ್ಕು ಇದೆ' ಸಿಎಂ ಯೋಗಿ
ನವೆಂಬರ್ 15 ರೊಳಗೆ ರಸ್ತೆಗಳನ್ನು ಗುಂಡಿ ಮುಕ್ತ ಮಾಡುವಂತೆ ಸಿಎಂ ಯೋಗಿ ಆದೇಶಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನವೆಂಬರ್ 15 ರೊಳಗೆ ರಾಜ್ಯದಲ್ಲಿ ರಸ್ತೆಗಳನ್ನು ಹೊಂಡ ಮುಕ್ತಗೊಳಿಸುವ ಅಭಿಯಾನವನ್ನು ಪ್ರಾರಂಭಿಸಲು ಅಕ್ಟೋಬರ್ ಆರಂಭದಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ನ.15ರೊಳಗೆ ರಸ್ತೆಗಳು ಹೊಂಡ ಮುಕ್ತವಾಗಬೇಕು. ರಾಜ್ಯದ ಎಲ್ಲ ನಾಗರಿಕರಿಗೂ ಉತ್ತಮ ಸಂಪರ್ಕದ ಹಕ್ಕು ಇದೆ ಎಂದು ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಯೋಗಿ ಹೇಳಿದ್ದಾರೆ.

ಘಟನೆ ಬಗ್ಗೆ ಡಿಎಂ ಸ್ಪಷ್ಟನೆ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಡಿಎಂ ಸ್ಪಷ್ಟನೆ ನೀಡಿದ್ದು, ತಮ್ಮ ಬೆಂಗಾವಲು ವಾಹನ ಹೊರಟ ಬಳಿಕ ಈ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ. ಘಟನೆ ನಮ್ಮ ಗಮನಕ್ಕೆ ಬಂದಿಲ್ಲ ಬಂದಿದ್ದರೆ ವಾಹನಗಳನ್ನು ನಿಲ್ಲಿಸುತ್ತಿದ್ದೆ ಎಂದಿದ್ದಾರೆ. ಆದರೆ ವಿಡಿಯೊದಲ್ಲಿ ರಿಕ್ಷಾವನ್ನು ಹಿಮ್ಮುಖಗೊಳಿಸುವಾಗ ಬಿಳಿ ಬಣ್ಣದ ಕಾರು ಅಲ್ಲಿಂದ ಹಾದು ಹೋಗುತ್ತಿರುವುದು ಕಂಡುಬಂದಿದೆ.












Click it and Unblock the Notifications