ಜೂ.11ರಿಂದ ಹರಿದ್ವಾರದಲ್ಲಿ ವಿಶ್ವ ಹಿಂದೂ ಪರಿಷತ್ ಸಭೆ, ಚರ್ಚೆ ವಿಷಯ ಏನು?
ನವದೆಹಲಿ, ಮೇ 12: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಸಂಯೋಜಿತ ವಿಶ್ವ ಹಿಂದೂ ಪರಿಷತ್ ಜೂನ್ 11, 12ರಂದು ಹರಿದ್ವಾರದಲ್ಲಿ ಸಭೆ ಹಮ್ಮಿಕೊಂಡಿದೆ. ಮುಂದಿನ ವರ್ಷದ ಸಂಘದ ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದು, ದೇಶದಲ್ಲಿ ಸುದ್ದಿಯಲ್ಲಿರುವ ಹನುಮಾನ್ ಚಾಲಿಸಾ, ಧ್ವನಿವರ್ಧಕ ನಿಷೇಧ ವಿವಾದ, ಏಕರೂಪ ನಾಗರಿಕ ಸಂಹಿತೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ದೇಶದ ವಿವಿಧ ಭಾಗಗಳಿಂದ 300 ಕ್ಕೂ ಅಧಿಕ ಸಾಧು-ಸಂತರು, ವಿಎಚ್‌ಪಿ ಸಂಘಟನೆ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
"ಸಭೆಯಲ್ಲಿ ಮುಂದಿನ ವರ್ಷ ಹಮ್ಮಿಹೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಕಾಶಿ ಮತ್ತು ಮಥುರಾ ಕ್ಷೇತ್ರಗಳ ವಿವಾದಗಳ ಬಗ್ಗೆಯೂ ಚರ್ಚಿಸಲಾಗುವುದು" ಎಂದು ಸಂಘದ ಸಂಚಾಲಕ ಅಶೋಕ್ ತಿವಾರಿ ತಿಳಿಸಿದ್ದಾರೆ.
"ಕೃಷ್ಣ ಜನ್ಮಭೂಮಿ ಮತ್ತು ಕಾಶಿ ವಿಶ್ವನಾಥ ಮಂದಿರದ ಬಗ್ಗೆ ಸಭೆಯಲ್ಲಿ ಮುಖ್ಯ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಮೂಲಗಳು ತಿಳಿಸಿವೆ. ಜನಸಂಖ್ಯಾ ನಿಯಂತ್ರಣ ಕಾಯ್ದೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೈಗೊಳ್ಳಬೇಕಾದ ಹೋರಾಟದ ಬಗ್ಗೆಯೂ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಏನಿದು ಜನಸಂಖ್ಯಾ ನಿಯಂತ್ರಣ ಕಾಯ್ದೆ:
ಈಗಾಗಲೇ ಉತ್ತರ ಪ್ರದೇಶ, ಅಸ್ಸಾಂನಲ್ಲಿ ಜಾರಿಯಲ್ಲಿರುವ ಈ ಕಾಯ್ದೆಯ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಯಾವುದೇ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ. ಸರ್ಕಾರದ ನಿಯಮದಂತೆ ಎರಡು ಮಕ್ಕಳ ನೀತಿ ಅನುಸರಿಸುವವರಿಗೆ ಪ್ರೋತ್ಸಾಹಿಸಲು ಯೋಜನೆ ಹಾಕಿಕೊಳ್ಳಬಹುದು ಎಂದು ಹೇಳಲಾಗಿದೆ. ಈ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಬಹುದು.

ಕರ್ನಾಟಕದಲ್ಲಿಯೂ ಆಗಾಗ್ಗೆ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿ ಕೂಗು ಕೇಳಿ ಬರುತ್ತಿದ್ದು ಬಿಜೆಪಿ ನಾಯಕರು ಈ ಕಾಯ್ದೆಯನ್ನು ಬೆಂಬಲಿಸಿದರೆ, ಕಾಂಗ್ರೆಸ್ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಕಾಯ್ದೆ ಜಾರಿಗೊಳಿಸುವಂತೆ ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಬಂದಿವೆ.

Recommended Video
ಚುನಾವಣೆ ವೇಳೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಆಶ್ವಾಸನೆ ಕೊಟ್ಟಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಯ್ದೆ ಜಾರಿಗೊಳಿಸಲು ತಡ ಮಾಡುತ್ತಿದೆ ಎನ್ನುವ ಅಸಮಾಧಾನ ಕೂಡ ಹಿಂದೂ ಸಂಘಟನೆಗಳಿಗಿದೆ. ಈ ಕುರಿತು ಹರಿದ್ವಾರದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.











Click it and Unblock the Notifications