ವಿಡಿಯೋ: ಮನೆಗೆ ಟಿವಿ, ಫ್ರಿಡ್ಜ್, ಬಿರಿಯಾನಿ ಆರ್ಡರ್‌ಗಳ ಸುರಿಮಳೆ! ಇನ್‌ಫ್ಲುಯೆನ್ಸರ್ ವೀರಮಣಿಗೆ ಫಜೀತಿ, ಊರೇ ಬಿಟ್ಟ!
ಮಧುರೈ: ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ರೀತಿಯಲ್ಲಿ, ಸ್ಥಳೀಯ ಭಾಷೆಯಲ್ಲಿ ಮಾತನಾಡಿಕೊಂಡು ವಿಡಿಯೋ (ವ್ಲಾಗ್) ಹಂಚಿಕೊಳ್ಳುತ್ತಾ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವೀರಮಣಿ (Veeramani Influencer Instagram) ಅವರು, ಇದೀಗ ತಮ್ಮ ವಿಡಿಯೋದಿಂದಲೇ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಪ್ರಸ್ತುತದಲ್ಲಿ ಅವರಿಗೆ 4.17 ಲಕ್ಷ ಇನ್ಸ್ಟಾ ಫಾಲೋವರ್ಸ್ ಇದ್ದಾರೆ. ಒಂದಷ್ಟು ಫಾಲೋವರ್ಸ್ ಮಾಡಿದ ಕೆಲಸದಿಂದ ಅವರು ಫಜೀತಿ ಅನುಭವಿಸಿ ಊರೇ ಖಾಲಿ ಮಾಡಿದ್ದಾರೆ.
ವೀರಮಣಿ ಅವರು ತಮಿಳುನಾಡು ರಾಜ್ಯದ ಪ್ರಮುಖ ನಗರವಾದ ಮಧುರೈ ನಿವಾಸಿ. ಫಾಲೋವರ್ಸ್‌ಗಳು ಬಿರಿಯಾನಿ, ಸಿಹಿ ಜೊತೆಗೆ ಟಿವಿ, ಫ್ರಿಡ್ಜ್ ಸೇರಿ ಸುಮಾರು 500 ಕ್ಕು ಅಧಿಕ ವಸ್ತುಗಳನ್ನು ಆನ್‌ಲೈನ್ ಆರ್ಡರ್ ಮಾಡಿ ವೀರಮಣಿ ಅವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಇದೆಲ್ಲ ಕೊಳಲಾಗದೇ ಅವರು ಮನೆ ಖಾಲಿ ಮಾಡಿದ್ದಾರೆ. ಆನ್‌ಲೈನ್ ವೇದಿಕೆಯಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂದುಕೊಂಡವರಿಗೆ ಇಂದೊಂದು ಹಾಸ್ಯಮಯ ರೀತಿಯಲ್ಲಿ ಪಾಠ ಹೇಳಿದಂತಾಗಿದೆ.

ಹಣ ಕೇಳಿದ್ದ ವೀರಮಣಿ, ಬಳಿಕ ಸಿಹಿ..!
ಹೌದು, ವೀರಮಣಿ ಅವರು ಈ ಹಿಂದೊಮ್ಮೆ ನಾನು ಪ್ರವಾಸ ಹೋಗಬೇಕೆಂದಿದ್ದೇನೆ. ಹಣ ಹಾಕುವಂತೆ ಕ್ಯೂಆರ್ ಕೋಡ್ ಪ್ರದರ್ಶಿಸಿ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಅವರ ಫಾಲೋವರ್ಸ್ ಸುಮಾರು 9000 ರೂ. ನಷ್ಟು ಹಣ ಹಾಕಿದ್ದರು. ಅದೇ ಹಣದಿಂದ ಪ್ರವಾಸ ಮಾಡಿ, ವ್ಲಾಗ್ ಮಾಡಿ, ಪ್ರವಾಸಿ ಸ್ಥಳಗಳನ್ನು ಇನ್ ಸ್ಟಾಗ್ರಾಮದಲ್ಲಿ ಹಂಚಿಕೊಂಡಿದ್ದರು.
ನಂತರ ದೀಪಾವಳಿ ಹಬ್ಬ ಎದುರಾದ ಹೊತ್ತಿನಲ್ಲಿ ಸಿಹಿ ತಿನಿಸಬೇಕೆಂದು, ಆರ್ಡರ್ ಮಾಡುವಂತೆ ಮತ್ತೊಂದು ವಿಡಿಯೋ ಮಾಡಿ ಹಾಕಿದರು. ಅದರಲ್ಲಿ ಮನೆ ಅಡ್ರೆಸ್, ಮೊಬೈಲ್ ಸಂಖ್ಯೆ ಎಲ್ಲವನ್ನು ತಿಳಿಸಿಬಿಟ್ಟಿದ್ದರು. ಈ ವಿಡಿಯೋ ಅವರನ್ನು ಮನೆ, ಊರೇ ಬಿಡುವಂತೆ ಮಾಡಿದೆ. ಅವರಿಗೆ ಸಂಬಂಧಿಸದಿಂತೆ ವಿಡಿಯೋಗಳ ಕಳೆದ ಎರಡು ದಿನಗಳಿಂದ ಟ್ರೆಂಡ್ ಆಗಿದ್ದು, ನೆಟ್ಟಿಗರಿಗೆ ಹಾಸ್ಯದ ಮಹಾಪೂರವೇ ಸಿಕ್ಕಂತಾಗಿದೆ. 'ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತೆ ' ಫಾಲೋವರ್ಸ್ ಬಿದ್ದು ಬಿದ್ದು ನಗಾಡುತ್ತಿದ್ದರೆ, ವೀರಮಣಿಗೆ ಸ್ವಂತ ಮನೆಯಲ್ಲಿ ಇರದಂಥ ಸ್ಥಿತಿ ನಿರ್ಮಾಣವಾಗಿದೆ.
ಅಷ್ಟಕ್ಕೂ ಆಗಿದ್ದೇನು?
ವೀರಮಣಿ ಸಿಹಿ ಕೇಳಿದ ವಿಡಿಯೋ ನೋಡಿದ ಅವರ ಫಾಲೋವರ್ಸ್ ಗಳಲ್ಲಿ ಕೆಲವರು ಆರ್ಡರ್ ಮಾಡಿ ಕಳುಹಿಸಿದ್ದಾರೆ. ಇತ್ತ ಮತ್ತೊಬ್ಬ ಫಾಲೋವರ್ಸ್ 7 ಬಕೆಟ್ ಬಿರಿಯಾನಿಯನ್ನು ಅವರ ಮನೆ ಅಡ್ರೆಸ್‌ಗೆ ಕ್ಯಾಶ್ ಆನ್ ಡೆಲಿವರಿ (ಹಣ ಕೊಟ್ಟು ವಸ್ತು ಸ್ವೀಕರಿಸುವ ವಿಧಾನ) ಆರ್ಡರ್ ಮಾಡಿದ್ದಾರೆ. ನೋಡ ನೋಡುತ್ತಿದ್ದಂತೆ ಟಿವಿ, ಫ್ರಿಡ್ಜ್, ಒಂದರ ಹಿಂದೊಂದರಂತೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸಾಮಗ್ರಿಗಳನ್ನು ವೀರಮಣಿ ಅಡ್ರೆಸ್‌ಗೆ ಬುಕ್ ಮಾಡಿಬಿಟ್ಟಿದ್ದಾರೆ!.
ಮನೆಗೆ ಡೆಲಿವರಿ ಬಾಯ್‌ಗಳ ಸರತಿ ಸಾಲು ನೋಡಿದ ವೀರಮಣಿಗೆ ಯಾಕಾದಾರೂ ಸಿಹಿಗಾಗಿ ಅರ್ಡರ್ ಮಾಡುವಂತೆ ವಿಡಿಯೋ ಮಾಡಿದೇನೋ ಅಂತನ್ನಿಸಿಬಿಟ್ಟಿದೆ. ಟಿವಿ, ಫ್ರಿಡ್ಜ್ ಇತರ ವಸ್ತುಗಳನ್ನು ಹೊತ್ತ ಡೆಲಿವರಿ ವಾಹನಗಳು ಮನೆ ಮುಂದೆ ಬಂದು ನಿಂತ ವಿಡಿಯೋಗಳು ವೈರಲ್ ಆಗುತ್ತಿವೆ. ಸುಮಾರು ಅರ್ಧ ಗಂಟೆಯಲ್ಲಿ 15 ಡೆಲಿವರಿ ಬಾಯ್‌ಗಳು ವೀರಮಣಿ ಅವರ ಮನೆಗೆ ಡೆಲಿವರಿ ಕೊಡಲು ಬಂದು ಹೋಗಿದ್ದಾರೆ. ಅಷ್ಟೊಂದು ಹಣ ಕೊಟ್ಟು ಖರೀದಿಸಲು ಆಗದೇ ಅವರನ್ನು ಮರಳಿ ಕಳುಹಿಸಿದ್ದಾರೆ. ಈ ಸಂಬಂಧ ಅವರು ಡೆಲಿವರಿ ಬಾಯ್‌ಗಳಿಂದ ಸಾಕಷ್ಟು ಬೈಸಿಕೊಂಡಿದ್ದಾರೆ.
ಇಷ್ಟಕ್ಕೆ ಮುಗಿಯದೇ ಒಬ್ಬರು ಅಮೇಜಾನ್‌ನಿಂದ 70 ಕೋಟಿ ರೂಪಾಯಿ ಮೌಲ್ಯದ ಯುದ್ಧ ಟ್ಯಾಂಕರ್ ಬುಕ್ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಟ್ರೋಲ್, ಮೀಮ್ಸ್ ಗಳು ಹರಿದಾಡುತ್ತಿವೆ. ಮತ್ತೊಬ್ಬರು 'ಇಲ್ಲಿ ಅಂಗಾಂಗ ದಾನ ಮಾಡಲಾಗುತ್ತದೆ' ಎಂದು ವೀರಮಣಿ ಅವರ ಅಡ್ರೆಸ್ ಹಾಕಿದ್ದಾರೆ. ದಾನ ಪಡೆಯುವವರು ವೀರಮಣಿ ಅವರನ್ನು ಸಂಪರ್ಕಿಸುವಂತೆ ಕೋರಿದ್ದಕ್ಕೆ ಕೆಲವರು ಮನೆಗೂ ಆಗಮಿಸಿದ್ದಾರೆ. ಇದೆಲ್ಲ ಕಂಡು ವೀರಮಣಿ ದಂಗಾಗಿದ್ದು, ಕಳೆದ ಎರಡು ದಿನಗಳಿಂದ ಫುಲ್ ಟ್ರೆಂಡ್ ಆಗಿಬಿಟ್ಟಿದ್ದಾರೆ.
ಸಾಕು ನಿಲ್ಲಿಸುವಂತೆ: ಪರಿ ಪರಿಯಾಗಿ ಬೇಡಿಕೊಂಡ ವೀರಮಣಿ
ಇದೆಲ್ಲ ನೋಡಿದ ವೀರಮಣಿ ಅವರಿಗೆ ತಲೆಕೆಟ್ಟು ಹೋಗಿದ್ದು, ದಯಮಾಡಿ ನಿಲ್ಲಿಸಿ ಎಂದು ಮತ್ತೊಂದು ವಿಡಿಯೋ ಮೂಲಕ ಬೇಡಿಕೊಂಡಿದ್ದಾರೆ. ತಮಗೆ ಬಂದ ಕ್ಯಾಶ್ ಆನ್ ಡೆಲಿವರಿ ವಿವರ ನೀಡುತ್ತಲೇ ಬೇಸರ ಹೊರ ಹಾಕಿದ್ದಾರೆ. ಅಷ್ಟೇಲ್ಲ ಖರೀದಿಸಲು ನನ್ನ ಬಳಿ ಹಣ ಇಲ್ಲ. ನಾನು ಮನೆ ಬಿಟ್ಟು, ಊರೇ ಬಿಟ್ಟು ಹೋಗುತ್ತಿದ್ದೇನೆ ಎಂದು ಕೇಳಿಕೊಂಡಿದ್ದಾರೆ. ಇದೆಲ್ಲವು ನೋಡುಗರಿಗೆ ಹಾಸ್ಯದಂತೆ ಭಾಸವಾಗಿದೆ. ಅನೇಕರು ಆನ್‌ಲೈನ್ ದುರ್ಬಳಕೆ ಕುರಿತು ಮಾತನಾಡಿದ್ದಾರೆ. ಮತ್ತಷ್ಟು ಜನ ನಕ್ಕು ಇದೊಂದು ಪಾಠ ಎಂದು ಹೇಳಿದ್ದಾರೆ.
ವೀರಮಣಿ ಅವರ ಮನೆಗೆ ಸ್ಥಳೀಯ ಪೊಲೀಸರು ಭೇಟಿ ನೀಡಿ ವೀರಮಣಿ ಜತೆ ಮಾತುಕತೆ ನಡೆಸಿದ್ದಾರೆ. ಫಾಲೋವರ್ಸ್ ಈ ರೀತಿ ಆರ್ಡರ್ ಮಾಡದಂತೆ, ಇದೆಲ್ಲವನ್ನು ಇಲ್ಲಿಗೆ ನಿಲ್ಲಿಸುವಂತೆ ಅವರು ಸಹ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications
