Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ
ಚೆನ್ನೈ: ಹಲವು ವಿಳಂಬಗಳ ಬಳಿಕ 2026ರ ಜನವರಿಯಲ್ಲಿ ಬಹುನಿರೀಕ್ಷೆಯ ವಂದೇ ಭಾರತ್ ಸ್ಲೀಪರ್ ರೈಲಿನ (Vande Bharat Sleeper Train) ಸಂಚಾರ ಆರಂಭವಾಯಿತು. ನಂತರ ಈ ರೈಲುಗಳ ಪೂರೈಕೆಯಲ್ಲಿ, ಉತ್ಪಾದನೆ ಗುರಿ ತಲುಪುವಲ್ಲಿ ಒಪ್ಪಂದ ಮಾಡಿಕೊಂಡ ಚೆನ್ನೈ ಮತ್ತು ಬೆಂಗಳೂರಿನ ಕಂಪನಿಗಳು ವಿಫಲವಾಗಿವೆ ಎನ್ನಲಾಗಿದೆ. ಹೀಗಾಗಿ ದೇಶದಲ್ಲಿ ಹೆಚ್ಚು ಸ್ಲೀಪರ್ ವಂದೇ ಭಾರತ್ ರೈಲುಗಳನ್ನು ಪರಿಚಯಿಸುವ ರೈಲ್ವೆ ಇಲಾಖೆಯ ಮಹತ್ವದ ಉಪಕ್ರಮಕ್ಕೆ ಹಿನ್ನೆಡೆ ಉಂಟಾಗಿದೆ.
ದೇಶದಲ್ಲಿ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು ಇದೇ ವರ್ಷಾರಂಭದಲ್ಲಿ ಹೌರಾ ಮತ್ತು ಕಾಮಾಕ್ಯ ಮಾರ್ಗದಲ್ಲಿ ಸಂಚಾರ ಆರಂಭಿಸಿತು. ಇದರ ಬೆನ್ನಲ್ಲೆ ಇನ್ನಷ್ಟು ರೈಲುಗಳು ಹಳಿಗೆ ಇಳಿಯಬೇಕಿತ್ತು. ಆದರೆ ನಿಗದಿತ ಅವಧಿಯಲ್ಲಿ ರೈಲು ಬೋಗಿಗಳ ಪೂರೈಕೆ ಆಗುತ್ತಿಲ್ಲ. ಇದರಿಂದ ಯೋಜನೆಗೆ ಅಡೆತಡೆ ಉಂಟಾಗಿದೆ. ಉತ್ಪಾದನೆಯಲ್ಲಿ ವಿಳಂಬವಾಗುತ್ತಿದೆ. ಮೂರು ವರ್ಷಗಳ ಹಿಂದೆ ಪ್ರಮುಖ ಚೆನ್ನೈ ಹಾಗೂ ಬೆಂಗಳೂರು ಕಂಪನಿಗಳಿಗೆ ಉತ್ಪಾದನೆಗೆ ಸಂಬಂಧಿಸಿದಂತೆ ಒಪ್ಪಂದ ನೀಡಲಾಗಿತ್ತು. ಬಾಕಿ ರೇಕ್‌ಗಳ ಅಂತಿಮ ವಿತರಣೆಯ ಗಡುವು ಮುಂದೂಡಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಬೇಕಾದ ಅಧಿಕಾರಿಗಳು ಮೌನ ವಹಿಸಿದ್ದಾರೆ.

ಬೆಂಗಳೂರು BEML, ಚೆನ್ನೈ ICF ಕಂಪನಿಗಳಿಂದ ಉತ್ಪಾದನೆ ಒಪ್ಪಂದ
ಮೂರು ವರ್ಷಗಳ ಹಿಂದೆ ವಂದೇ ಭಾರತ್ ಸ್ಲೀಪರ್ ರೈಲು ಉತ್ಪಾದನೆಗಾಗಿ ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಬೆಂಗಳೂರಿನಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಂತೆ 16 ಕೋಚ್‌ಗಳ ಒಟ್ಟು 10 ವಂದೇ ಭಾರತ್ ಸ್ಲೀಪರ್ ರೈಲುಗಳ ಉತ್ಪಾದನೆಗೆ ಆಗಬೇಕಿದೆ. ಉತ್ಪಾದನೆ ಆಗುತ್ತಿದ್ದಂತೆ ಅಗತ್ಯ ಪರೀಕ್ಷೆ ಪೂರ್ಣಗೊಳಿಸಿ ತ್ವರಿತವಾಗಿ ಹಳಿಗೆ ಇಳಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿತ್ತು.
ವರ್ಷಗಳಲ್ಲಿ ನಿರೀಕ್ಷಿತ ರೈಲುಗಳ ಉತ್ಪಾದನೆ ಆಗಬೇಕಿತ್ತು, ಆದರೆ ಉತ್ಪಾದನೆ ನಿಧಾನವಾಗಿದೆ. ಆರು ತಿಂಗಳ ಹಿಂದೆ ಬಿಇಎಂಎಲ್ ಕೇವಲ ಎರಡು ರೈಲುಗಳನ್ನು ಮಾತ್ರ ಹಸ್ತಾಂತರಿಸಿತ್ತು. ಮಾರ್ಚ್ 2026 ರೊಳಗೆ ಉಳಿದ 08 ರೈಲುಗಳನ್ನು ನೀಡುವುದಾಗಿ ಬಿಇಎಂಎಲ್ ಭರವಸೆ ನೀಡಿತ್ತು. ಆದರೆ ಮಾರ್ಚ್ ತಿಂಗಳ ಅಂತ್ಯಕ್ಕೆ ಬಂದರೂ ಹೊಸ ರೈಲುಗಳು/ಬೋಗಿಗಳು ಪೂರೈಕೆ ಆಗಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ಉತ್ಪಾದನೆ ನಿಧಾನವಾಗಿದೆ ಎನ್ನಲಾಗಿದೆ.
50 ರೈಲು ತಯಾರಿಸುವುದಾಗಿ ಹೇಳಿದ್ದ ಐಸಿಎಫ್
ಇದೇ ವಿಚಾರವಾಗಿ ಬಿಇಎಂಎಲ್ ಯಾವುದೇ ಸಂವಹನ ನಡೆದಿಲ್ಲ ಎಂದು ಐಸಿಎಫ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ಐಸಿಎಫ್ ಎರಡು ವರ್ಷಗಳ ಹಿಂದೆ ಸ್ವತಂತ್ರವಾಗಿ ತಾನು 50 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ತಯಾರಿಸುವುದಾಗಿ ಘೋಷಿಸಿತ್ತು. ಈ ರೈಲುಗಳ ಪ್ರತಿ ಗಂಟೆಗೆ 180 ಕಿಲೋ ಮೀಟರ್ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿವೆ. ಒಟ್ಟು 16 ಬೋಗಿಗಳ ಸಹಿತ ರಾತ್ರಿ ವೇಳೆ ದೀರ್ಘ ಪ್ರಯಾಣ ಸೇವೆಗೆ ನಿಯೋಜಿಸಲು ತೀರ್ಮಾನಿಸಲಾಗಿದೆ.
ವಂದೇ ಭಾರತ್ ಸ್ಲೀಪರ್ ರೈಲುಗಳ ವಿಚಾರದಲ್ಲಿ ಯಾವುದು ಅಂದುಕೊಂಡಂತೆ ಆಗುತ್ತಿಲ್ಲ. ಹೀಗಾಗಿ ಬಹುದೂರದ ಪ್ರಯಾಣಕ್ಕೆ ಸ್ಲೀಪರ್ ವಂದೇ ಭಾರತ್ ರೈಲು ಆಯ್ಕೆ ಮಾಡಿಕೊಳ್ಳಲು ಕಾತರರಾಗಿದ್ದ ರೈಲು ಪ್ರಯಾಣಿಕರು ಇನ್ನಷ್ಟು ತಿಂಗಳುಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications