Vande Bharat Express: ಊಟದಲ್ಲಿ ಜಿರಳೆ ನೋಡಿ ಪ್ರಯಾಣಿಕ ಶಾಕ್: ಫೋಟೊ ವೈರಲ್
ಬೆಂಗಳೂರು, ಫೆಬ್ರವರಿ 06: ಪ್ರಯಾಣಿಕರಿಂದ ಭಾರಿ ಸ್ಪಂದನೆ ಪಡೆದ ಭಾರತೀಯ ರೈಲ್ವೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಊಟದ ವಿಚಾರದಲ್ಲಿ ಭಾರಿ ಸುದ್ದಿಯಾಗಿದೆ.
ಹೌದು, ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತನ್ನ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಊಟವನ್ನು ಒದಗಿಸುತ್ತದೆ. ಅದೇ ರೀತಿ ಪ್ರಯಾಣದ ವೇಳೆ ಪ್ರಯಾಣಿಕರೊಬ್ಬರ ಊಟದಲ್ಲಿ ಸತ್ತ ಜಿರಳೆ ಪತ್ತೆ ಆಗಿದ್ದು. ಆ ಪ್ರಯಾಣಿಕರು ಊಟ, ಸತ್ತ ಜಿರಳೆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆಗುತ್ತಿದೆ.

ಫೆಬ್ರುವರಿ 1ರಂದು ನಡೆದ ಘಟನೆ
ಘಟನೆ ಬಗ್ಗೆ ವಿವರಿಸಿ ಪೋಸ್ಟ್ ಮಾಡಿರುವ ಆ ಪ್ರಯಾಣಿಕ ಡಾ. ಶುಭೇಂದು ಕೇಶಾರಿ ಅವರು, 'ಫೆಬ್ರವರಿ 1ರಂದು ರೈಲು ನಂ. 20173 RKMP ನಲ್ಲಿ ಐಆರ್‌ಸಿಸಿ ಅವರು ನೀಡಿದ ಆಹಾರದ ಪ್ಯಾಕೆಟ್‌ನಲ್ಲಿ ಸತ್ತ ಜಿರಳೆಯನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ, ರಾಣಿ ಕಮಲಾಪತಿಯಿಂದ ಜಬಲ್‌ಪುರ ಜಂಕ್ಷನ್‌ಗೆ ಪ್ರಯಾಣಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಬಳಿಕವೇ ಘಟನೆ ಮುನ್ನೆಲೆಗೆ ಬಂದಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಐಷಾರಾಮಿ ಸೇವೆಗಳು, ಉತ್ತಮ ಗುಣಮಟ್ಟದ ಸುರಕ್ಷತೆ ಮತ್ತು ವೇಗಕ್ಕೆ ಹೆಸರುವಾಸಿ ಆಗಿದೆ. ಇನ್ನೂ ಈ ಘಟನೆ ಗಮನಿಸಿರುವ IRCTC ತನ್ನ X ಹ್ಯಾಂಡಲ್ ಮೂಲಕ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದೆ. ಆದ ಪ್ರಮಾದಕ್ಕೆ, ಅನಾನುಕೂಲತೆಗೆ ಪ್ರಯಾಣಿಕರಿಗೆ ಕ್ಷಮೆ ಕೇಳಿದೆ.

ಪ್ರಯಾಣಿಕರಿಗೆ ಕ್ಷಮೆ ಕೇಳಿದ IRCTC
ಪ್ರಯಾಣಿಕರಿಗೆ ಘಟನೆಯಿಂದಾಗಿರುವ ಈ ಕೆಟ್ಟ ಅನುಭವಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತಿದ್ದೇವೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಂಬಂಧಪಟ್ಟ ಸೇವಾ ಪೂರೈಕೆದಾರರಿಗೆ ಭಾರಿ ದಂಡ ವಿಧಿಸಲಾಗಿದೆ. ಇದಲ್ಲದೆ, ಮೂಲದಲ್ಲಿ ಮೇಲ್ವಿಚಾರಣೆ ಬಲಪಡಿಸಲಾಗಿದೆ ಎಂದು IRCTC ಮಾಹಿತಿ ನೀಡಿದೆ.
ಹೀಗೆ ರೈಲಿನಲ್ಲಿ IRCTC ಕ್ಯಾಟರರ್ ಒದಗಿಸಿದ ಅಶುಚಿಯಾದ ಆಹಾರದ ಅನೇಕ ಘಟನೆಗಳು ಈ ಹಿಂದೆ ವರದಿಯಾಗಿವೆ. ಕಳೆದ ವರ್ಷ ಜುಲೈನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರೊಬ್ಬರು IRCTC ಊಟದಲ್ಲಿ ಬಡಿಸಿದ ಚಪಾತಿಯಲ್ಲಿ ಜಿರಳೆ ಫೋಟೊ ಹಂಚಿಕೊಂಡಿದ್ದರು. ಭೋಪಾಲ್‌ನಿಂದ ಗ್ವಾಲಿಯರ್‌ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೂ ಊಟದಲ್ಲಿ ಜಿರಳೆ ಸಿಕ್ಕಿತ್ತು. ಆಗಲೂ IRCTC ಕ್ಷಮೇ ಕೇಳಿತ್ತು.












Click it and Unblock the Notifications