Vande Bharat Sleeper Train: ಶ್ರೀನಗರಕ್ಕೆ ರೈಲು ಸೇವೆ: ಎಲ್ಲಿಂದ? ಟಿಕೆಟ್ ದರ, ವೇಳಾಪಟ್ಟಿ
ನವದೆಹಲಿ, ಅಕ್ಟೋಬರ್ 09: ದೇಶದಲ್ಲಿ ಕೇಂದ್ರ ಸರ್ಕಾರವು ವಂದೇ ಭಾರತ್ ರೈಲುಗಳನ್ನು ಹೊಸ ಹೊಸ ಮಾರ್ಗಗಳಿಗೆ ಪರಿಚಯಿಸುತ್ತಲೇ ಬರುತ್ತಿದೆ. ಇದೀಗ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾ ಆಗುವ ಉದ್ದೇಶದಿಂದ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ವಂದೇ ಭಾರತ್ ರೈಲು ಸೇವೆಯನ್ನು ರೈಲ್ವೆ ಇಲಾಖೆಯು ಪ್ರಾರಂಭಿಸುತ್ತಿದೆ. ಹಾಗಾದರೆ ಎಲ್ಲಿಂದ ಎಲ್ಲಿಗೆ? ಯಾವ ಮಾರ್ಗ, ಟಿಕೆಟ್ ದರ, ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ರೈಲ್ವೆ ಇಲಾಖೆ ಜಾರಿಗೆ ತರಲು ಉದ್ದೇಶಿಸಿರುವ ವಂದೇ ಭಾರತ್ ಸ್ಲೀಪರ್ ರೈಲನ್ನು ಬೆಂಗಳೂರಿನ ಭಾರತ್ ಅರ್ಥ್ ಮೂವರ್ ಲಿಮಿಟೆಡ್ (BEML) ತಯಾರಿಕೆ ಮಾಡುತ್ತಿದೆ. ಈ ರೈಲುಗಳನ್ನು ದೇಶದ ಮಾರ್ಗಗಳಲ್ಲಿ 2025ಕ್ಕೆ ಕಾರ್ಯಾಚರಣೆ ಮಾಡುವ ಸಾಧ್ಯತೆ ಇದೆ. ಇದರಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ, ಐಶಾರಾಮಿ ಸೇವೆ ಸಿಗಲಿದೆ. ದೂರದ ಸ್ಥಳಕ್ಕೆ ತೆರಳುವವರಿಗೆ ಈ ರೈಲು ಅತ್ಯುತ್ತಮ ಆಯ್ಕೆ ಆಗಲಿದೆ.

ಇದೇ ವರ್ಷ ಕಳೆದ ಸೆಪ್ಟಂಬರ್ ನಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು, ವಂದೇ ಭಾರತ್ ಪ್ರೋಟೊಟೈಪ್ ರೈಲನ್ನು ಲೋಕಾರ್ಪಣೆಗೊಳಿಸಿದ್ದರು. ಇದರ ಬೆನ್ನಲ್ಲೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ಜಮ್ಮು ಕಾಶ್ಮೀರದ ವ್ಯಾಪ್ತಿಯ ಶ್ರೀನಗರಕ್ಕೆ ವಂದೇ ಭಾರತ್ ರೈಲು ಓಡಿಸಲು ನಿರ್ಧರಿಸಲಾಗಿದೆ.
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ದೆಹಲಿಯಿಂದ ಶ್ರೀನಗರಕ್ಕೆ ಸೇವೆ ಒದಗಿಸಲಿದೆ. ಸಾರ್ವಜನಿಕರು, ಪ್ರಯಾಣಿಕರಿಗೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೈಗೊಂಡ ನಿರ್ಧಾರವಾಗಿದೆ. ಸೇವೆ ಆರಂಭವಾದ ಬಳಿಕ ಈ ಸೇವೆಯನ್ನು ಬಾರಾಮಲ್ಲಾ ವರೆಗೆ ವಿಸ್ತರಣೆ ಮಾಡುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿ - ಶ್ರೀನಗರ ರೈಲು ಸಂಚರಿಸುವ ಮಾರ್ಗ
ಉತ್ತರ ರೈಲ್ವೆ (Northern Railway) ಈ ದೆಹಲಿ ಮತ್ತು ಶ್ರೀನಗರ ಮಧ್ಯೆದ ವಂದೇ ಭಾರತ್ ರೈಲನ್ನು ನಿರ್ವಹಣೆ ಮಾಡಲಿದೆ. ನಿತ್ಯ ಕಾರ್ಯಾಚರಣೆ ನಡೆಸುವ ಜವಾಬ್ದಾರಿ ಹೊತ್ತಿದೆ. ಈ ರೈಲು ನವದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವಿನ ಸಂಬಂಧ ಬಲಪಡಿಸುವ ಜೊತೆಗೆ ಈ ರೈಲು ಪ್ರಮುಖ ನಗರಗಳನ್ನು ಸಂಪರ್ಕ ಸೇವೆಯಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೈಲು ಕ್ರಮಿಸುವ ಪ್ರಯಾಣದ ಮಾಹಿತಿ
ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಶ್ರೀನಗರವರೆಗೆ ಒಟ್ಟು 800 ಕಿಲೋ ಮೀಟರ್ ದೂರವಿದೆ. ಇಷ್ಟು ದೂರವನ್ನು ಈ ವಂದೇ ಭಾರತ್ ಸ್ಲೀಪರ್ ರೈಲು ಕೇವಲ 13 ಗಂಟೆಗಳಲ್ಲಿ ಕ್ರಮಿಸಲಿದೆ. ಸದ್ಯ ಈ ಮಾರ್ಗದಲ್ಲಿನ USBHL ಯೋಜನೆಯು ಕಾರ್ಯಪ್ರಗತಿಯಲ್ಲಿದೆ. ಇದು ರೈಲಿನ ತ್ವರಿತ ಸೇವೆ, ದೂರವನ್ನು ಸುಸೂತ್ರವಾಗಿ ಕ್ರಮಿಸಲು ನೆರವಾಗಲಿದೆ.
ವಂದೇ ಭಾರತ್ ರೈಲಿನ ಸಮಯ, ನಿಲುಗಡೆ ವಿವರ
ವಂದೇ ಭಾರತ್ ಸ್ಲೀಪರ್ ರೈಲು ನವದೆಹಲಿ ರೈಲು ನಿಲ್ದಾಣವನ್ನು ನಿತ್ಯ ಬೆಳಗ್ಗೆ 7 ಗಂಟೆಗೆ ಬಿಟ್ಟು ವಿವಿಧ ಪ್ರಮುಖ ನಗರಗಳ ಮಾರ್ಗವಾಗಿ ಮರುದಿನ ಬೆಳಗ್ಗೆ 8 ಗಂಟೆ ಹೊತ್ತಿಗೆ ಶ್ರೀನಗರ ತಲುಪುತ್ತದೆ. ಈ ವೇಳೆ ಮಾರ್ಗ ಮಧ್ಯೆ ನೀರ್ಣಾಯಕ ನಿಲ್ದಾಣಗಳಾದ ಅಂಬಾಲಾ ಕ್ಯಾಂಟ್ ಜಂಕ್ಷನ್, ಲುಧಿಯಾನ ಜಂಕ್ಷನ್, ಕಥುವಾ, ಜಮ್ಮು ತಾವಿ, ಶ್ರೀಮಾತಾ ವೈಷ್ಣೋ ದೇವಿ ಕತ್ರಾ, ಸಂಗಲ್ದನ್ ಮತ್ತು ಬನಿಹಾಲ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.
ದೆಹಲಿ-ಶ್ರಿನಗರ ಟಿಕೆಟ್ ದರ ಎಷ್ಟಿದೆ?
ಈ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಮೂರು ವರ್ಗದ ಆಸನಗಳು ಪ್ರಯಾಣಿಕರಿಗೆ ಲಭ್ಯ ಇರುತ್ತದೆ. AC -3 ಶ್ರೇಣಿ (3A), AC-2 ಶ್ರೇಣಿ (2A) ಹಾಗೂ AC ಫಸ್ಟ್ ಕ್ಲಾಸ್ (1A) ವರ್ಗದ ಆಸನಗಳನ್ನು ನೀವು ಬುಕ್ ಮಾಡಬಹುದು. ಇನ್ನೂ ಟಿಕೆಟ್ ದರಗಳು 3ಎಗೆ ₹2,000, 2ಎ ಸೀಟು ಕಾಯ್ದಿರಿಸಲು ₹2,500 ಮತ್ತು 1ಎಗೆ ಆಸಯ ಕಾಯ್ದಿರಿಸಲು ನೀವು ₹3,000 ದರ ವ್ಯಯಿಸಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಈ ರೈಲು ಸೇವೆ ಆರಂಭದ ದಿನಾಂಕ ಇಲಾಖೆಯು ಶೀಘ್ರವೇ ಪ್ರಕಟಿಸಲಿದೆ.












Click it and Unblock the Notifications