Vande Bharat Express: ಈ ಮಾರ್ಗದ ರೈಲಿನಲ್ಲಿನ ಜಮ್ಮು-ಕಾಶ್ಮೀರದ ಸಸ್ಯಾಹಾರ ಮೀಲ್ ಪರಿಚಯ
ಬೆಂಗಳೂರು, ಸೆಪ್ಟಂಬರ್ 08: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ದಶಕಗಳಿಂದಲೂ ರೈಲ್ವೆ ಇಲಾಖೆ ಜೊತೆಗೆ ಸೇವೆ ನೀಡುತ್ತಾ ಬಂದಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ದೇಶವ್ಯಾಪಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದೇ ವೇಳೆ IRCTC ಮಾರ್ಗವೊಂದರ ರೈಲಿನಲ್ಲಿ ಅಧಿಕೃತವಾಗಿ ಸಸ್ಯಹಾರಿ ಪಾಕ ಪದ್ಧತಿಯನ್ನು ಪ್ರಯಾಣಿಕರಿಗೆ ಪರಿಚಯಿಸಿದೆ.
ಜಮ್ಮು ಮತ್ತು ಕಾಶ್ಮೀರದ ಶ್ರೀಮಂತ ಆಹಾರ ಪರಂಪರೆಯನ್ನು ಉತ್ತೇಜಿಸಲು ವಂದೇ ಭಾರತ್ ರೈಲಿನಲ್ಲಿ ಸಸ್ಯಹಾರ ಊಟ ಮಾಡಬಹುದಾಗಿದೆ. ಹೌದು, ಭಾನುವಾರದಿಂದ (ಸೆ.7) ಕತ್ರಾ-ಶ್ರೀನಗರ ಮಾರ್ಗವಾಗಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಹಣ್ಣು, ತರಕಾರಿ, ಸೀಡ್ಸ್, ನಟ್ಸ್ ಹೊಂದಿದ ಸಸ್ಯಾಹಾರಿ ಪಾಕ ಪದ್ಧತಿಯನ್ನು ಪ್ರಯಾಣಿಕರಿಗೆ ಒದಗಿಸಲಿದೆ. ಸ್ಥಳೀಯವಾಗಿ ತಯಾರಿಸಿದ ಮಸಾಲೆ ಬಳಕೆ ಮಾಡಲಾಗುತ್ತದೆ. ಅಡುಗೆ ವಿಧಾನ ಎಲ್ಲವು ಕಣಿವೆ ರಾಜ್ಯದ್ದೆ ಆಗಿರುತ್ತದೆ. ಇಲ್ಲಿ ಬರುವ ಪ್ರವಾಸಿಗರಿಗೆ ಕಾಶ್ಮೀರದ ಅಡುಗೆ ರುಚಿ ಸವಿಯಲು ಅವಕಾಶ ಸಿಕ್ಕಂತಾಗಿದೆ.

ಸಾಂಪ್ರದಾಯಿಕ ಉಪಹಾರ ಮತ್ತು ಊಟ ಮೊದಲ ಬಾರಿಗೆ ಈ ರೈಲಿನಲ್ಲಿ ನೀಡಲಾಗುತ್ತದೆ. ಊಟದಲ್ಲಿ ಕಹ್ವಾ, ತಾಜಾ ಬೇಕರಿ ಉತ್ಪನ್ನಗಳು, ರಾಜ್ಮಾ, ಕಾಶ್ಮೀರಿ ಪುಲಾವ್, ಬಬ್ರು, ಅಂಬಾಲ್, ಜಮ್ಮು ಪರಾಠ, ಪನೀರ್ ಚಮನ್, ದಮ್ ಆಲೂ ಮತ್ತು ತಾಜಾ ಸೇಬುಗಳಂತಹ ಭಕ್ಷ್ಯಗಳು ಒಳಗೊಂಡ ಮೀಲ್ ಇದಾಗಿರಲಿದೆ. ಮೆನುವಿನ ಜೊತೆಗೆ ಉಪ್ಪಿಟ್ಟು, ಅವಲಕ್ಕಿ, ಕಟ್ಲೆಟ್‌ಗಳ ಸಹ ಸಿಗುತ್ತದೆ. ಅಂಬಲ್ ಕಡ್ಡು, ಸಿಹಿ ಮತ್ತು ಹುಳಿ ಡೋಗ್ರಾ ಶೈಲಿಯ ಕುಂಬಳಕಾಯಿ ಕರಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಸಿಗುವ ಪದಾರ್ಥಗಳಿಂದ ಸಿದ್ಧಪಡಿಸುವ ಆಹಾರಗಳು ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿವೆ.
IRCTC ಸೆಪ್ಟೆಂಬರ್ 7 ರಂದು ಕತ್ರಾ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರನ್ನು ಸ್ವಾಗತಿಸಿತು. ಅವರಿಗೆಲ್ಲ ಹೊಸ ಪಾಕ ಪದ್ಧತಿಯ ಆಹಾರ ನೀಡಲಾಯಿತು. ಪ್ರಯಾಣಿಕರಲ್ಲಿ ಬಹುತೇಕರು ಸ್ಥಳೀಯ ಆಹಾರದ ರುಚಿ, ಅಡುಗೆ ವಿಧಾನ, ಗುಣಮಟ್ಟವನ್ನು ಹಾಡಿ ಹೊಗಳಿದ್ದಾರೆ. ರುಚಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
IRCT ಅಧ್ಯಕ್ಷ ಹರ್ಜೋತ್ ಸಿಂಗ್ ಸಂಧು ಅವರು ಮಾತನಾಡಿ, ಕಾಶ್ಮೀರ ಕಣಿವೆಯಲ್ಲಿ ನಿಜವಾದ ಮತ್ತು ಸ್ಮರಣೀಯ ಪ್ರಯಾಣದ ಅನುಭವ ಒದಗಿಸುವ ಗುರಿ ಹೊಂದಿದ್ದೇವೆ. ಪ್ರವಾಸಿಗರಿಗೆ ಉದ್ದೇಶಿತ ಗಮ್ಯಸ್ಥಾನವನ್ನು ತಲುಪುವ ಮೊದಲೇ ಕಾಶ್ಮೀರ ಆಹಾರ ಪದ್ಧತಿಯ ಅನುಭವ ಪಡೆಯಬಹುದು ಎಂದರು.
ಇಲ್ಲಿ ನಾವು ಶುಚಿತ್ವಕ್ಕೆ, ಆಹಾರ ಪ್ಯಾಕೇಜಿಂಗ್‌ಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಅತ್ಯಾಧುನಿಕ ಅಡುಗೆಮನೆ ಸಹ ಇದರಲ್ಲಿದೆ. ಪ್ಯಾಕೇಜಿಂಗ್ ಅಲ್ಯೂಮಿನಿಯಂ ಫಾಯಿಲ್‌ನಿಂದ ವಿಮಾನಯಾನ ಶೈಲಿಯ ಟೆಫ್ಲಾನ್-ಲೇಪಿತ ಕ್ಯಾಸರೋಲ್‌ಗಳು ಮತ್ತು ಪರಿಸರ ಸ್ನೇಹಿ ಟ್ರೇಗಳ ಮೂಲಕ ಆಹಾರ ಒದಗಿಸಲಾಗುತ್ತದೆ. ನಿಗಮದ ಸಿಬ್ಬಂದಿ ಮೇಲ್ವಿಚಾರಣೆ ಮಾಡುತ್ತಾರೆ. ಪ್ರಯಾಣಿಕರಿಗೆ ಇಷ್ಟವಾಗುವಂತೆ ಗುಣಮಟ್ಟ ಕಾಯ್ದುಕೊಳ್ಳಳಾಗುತ್ತದೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಉಚಿತ್ ಸಿಂಘಾಲ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications