Vande Bharat Express to Tirupati: ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್; ಓಡಲಿದೆ ಹೊಸ ವಂದೇ ಭಾರತ್ ರೈಲು
ಬೆಂಗಳೂರು, ಮಾರ್ಚ್ 04: ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಉತ್ತಮ ಸಂಪರ್ಕ ಕಲ್ಪಿಸಲು ಪ್ರಯತ್ನ ಪಡುತ್ತಿದೆ. ಹಲವು ಪ್ಯಾಸೆಂಜರ್ ರೈಲುಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಹಲವು ಮಾರ್ಗಗಳಲ್ಲಿ ಹೊಸ ಹೊಸ ರೈಲುಗಳ ಸಂಪರ್ಕ ನೀಡುತ್ತಿದೆ. ಇದರ ಜೊತೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಬೇಡಿಕೆ ಹೆಚ್ಚಾಗಿದ್ದು, ಈ ಬಗ್ಗೆಯೂ ಹೊಸ ಅಪ್‌ಡೇಟ್ಸ್ ನೀಡುತ್ತಿದೆ.
ದೇಶದ ಪ್ರಮುಖ ಯಾತ್ರಾ ಸ್ಥಳವಾದ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಕೋಟ್ಯಾಂತರ ಜನ ಭೇಟಿ ನೀಡುತ್ತಾರೆ. ಎಷ್ಟು ಬಸ್‌ಗಳು, ರೈಲು, ಹೆಲಿಕಾಪ್ಟರ್‌ಗಳ ಸಂಪರ್ಕವಿದ್ದರೂ ಜನ ಸಾಗರವೇ ಹರಿದು ಹೋಗುತ್ತದೆ. ವಿಶೇಷ ದಿನಗಳಲ್ಲಿ ಈ ಜನಸಂದಣಿ ಹೆಚ್ಚಾಗುತ್ತದೆ. ಬಸ್ಸು, ರೈಲುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದೇ ನಿಟ್ಟಿನಲ್ಲಿ ತಿರುಪತಿ ಸಮೀಪದಲ್ಲಿರುವ ರೇಣಿಗುಂಟಾ ರೈಲು ನಿಲ್ದಾಣಕ್ಕೆ ಹೊಸ ವಂದೇ ಭಾರತ್ ರೈಲು ಸೇವೆ ನೀಡಲು ಇಲಾಖೆ ಸಿದ್ಧವಾಗಿದೆ.

ತಿರುಪತಿಗೆ ಬೆಂಗಳೂರಿನಿಂದ ವಂದೇ ಭಾರತ್ !
ಪಕ್ಕದ ಆಂಧ್ರಪ್ರದೇಶದಲ್ಲಿರುವ ತಿರುಪತಿ ತಿರುಮಲ ಯಾತ್ರಾ ಸ್ಥಳಕ್ಕೆ ಕರ್ನಾಟಕದಿಂದ ಕೋಟ್ಯಾಂತರ ಭಕ್ತರು ತೆರಳುತ್ತಾರೆ. ಶ್ರೀವಾರಿ ಪೂಜೆಯ ಸಮಯಗಳಲ್ಲಿ ಹೆಚ್ಚಿನ ಬಸ್ಸು, ರೈಲುಗಳ ಬೇಡಿಕೆಯಿರುತ್ತದೆ. ಇದರ ಜೊತೆಗೆ ತಿರುಪತಿಗರ ಸಮೀಪದಲ್ಲಿರುವ ರೇಣಿಗುಂಟಾ ನಿಲ್ದಾಣದವರೆಗೂ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳನ್ನು ಬಿಡಬೇಕು ಎಂಬ ಬೇಡಿಕೆಯಿತ್ತು.
ಇದೇ ಕಾರಣಕ್ಕೆ ಒಂದು ವಾರದೊಳಗೆ ಬೆಂಗಳೂರು ಮತ್ತು ರೇಣಿಗುಂಟಾ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಓಡಿಸಲು ರೈಲ್ವೆ ಮಂಡಳಿ ಯೋಜಿಸಿದೆ. ರೇಣಿಗುಂಟಾ ರೈಲು ನಿಲ್ದಾಣ ತಿರುಪತಿ ದೇವಾಲಕ್ಕೆ ಸಮೀಪದಲ್ಲಿರುವ ಕಾರಣ ಭಕ್ತಾಧಿಗಳಿಗೆ ಹೆಚ್ಚು ಪ್ರಯೋಜನವಾಗಲಿದೆ.
"ಮಾರ್ಚ್ 10 ರೊಳಗೆ ಒಂದು ರೇಕ್ ಸಿದ್ಧವಾಗಿಟ್ಟುಕೊಳ್ಳಲು ನಮಗೆ ತಿಳಿಸಲಾಗಿದೆ. ರೇಣಿಗುಂಟಾ ನಿಲ್ದಾಣವು ತಿರುಪತಿಗೆ ಬಹಳ ಸಮೀಪದಲ್ಲಿರುವುದರಿಂದ ಇದು ಯಾತ್ರಾರ್ಥಿಗಳಿಗೆ ಸಹಾಯ ಮಾಡುತ್ತದೆ" ಎಂದು ಬೆಂಗಳೂರು ವಿಭಾಗದ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಚೆನ್ನೈ- ತಿರುಪತಿ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್
ಇತ್ತೀಚೆಗೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಚೆನ್ನೈ ಮತ್ತು ತಿರುಪತಿ ನಡುವೆ ಓಡಾಟ ಶುರು ಮಾಡಿದೆ. ಅಂದರೆ ಚೆನ್ನೈ ಮತ್ತು ವಿಜಯವಾಡವನ್ನು ಸಂಪರ್ಕಿಸುವ ಮೂಲಕ, ಚೆನ್ನೈನಿಂದ ಪ್ರಯಾಣಿಕರು ಈಗ ಆಂಧ್ರಪ್ರದೇಶದ ಪ್ರಮುಖ ಯಾತ್ರಾಸ್ಥಳವಾದ ತಿರುಪತಿಯನ್ನು 95 ನಿಮಿಷಗಳಲ್ಲಿ ತಲುಪಬಹುದು.
ಹೈಸ್ಪೀಡ್ ರೈಲು ತಿರುಪತಿಯಿಂದ 9 ಕಿಮೀ ದೂರದಲ್ಲಿರುವ ಚೆನ್ನೈ ಮತ್ತು ರೇಣಿಗುಂಟಾ ನಡುವಿನ 136.6 ಕಿಮೀ ದೂರವನ್ನು ಕೇವಲ ಒಂದು ಗಂಟೆ 35 ನಿಮಿಷಗಳಲ್ಲಿ ಕ್ರಮಿಸುತ್ತದೆ. ಚೆನ್ನೈನಿಂದ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ಕೂಡ ರೇಣಿಗುಂಟಾ ರೈಲು ನಿಲ್ದಾಣಕ್ಕೆ ತಲುಪಲಿದೆ.
ಇನ್ನು ಚೆನ್ನೈನಿಂದ ಹೊರಡುವ ಸಪ್ತಗಿರಿ ಮತ್ತು ಗರುಡಾದ್ರಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳು ಚೆನ್ನೈನಿಂದ ರೇಣಿಗುಂಟಾಕ್ಕೆ ಪ್ರಯಾಣಿಸಲು ಎರಡು ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಖಾಸಗಿ ಅಥವಾ ಸರ್ಕಾರಿ ಬಸ್‌ಗಳಲ್ಲಿ ರಸ್ತೆ ಮಾರ್ಗದ ಪ್ರಯಾಣವು ಸರಾಸರಿ ಮೂರು ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿಯೇ ಈ ವಂದೇ ಭಾರತ್ ಎಕ್ಸ್‌ಪ್ರಸ್ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಈಗ ಬೆಂಗಳೂರಿನಿಂದ ಕೂಡ ತಿರುಪತಿಗೆ ಸಮೀಪವಿರುವ ರೇಣಿಗುಂಟಾ ರೈಲು ನಿಲ್ದಾಣಕ್ಕೆ ವಂದೇ ಭಾರತ್ ಎಕ್ಸ್‌ಪ್ರಸ್ ಸೇವೆ ನೀಡಲಿದ್ದು, ಭಕ್ತಾದಿಗಳು ಆರಾಮವಾದ ಪ್ರಯಾಣದ ಆನಂದ ಪಡೆಯಬಹುದು. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಇಲಾಖೆ ಕೆಲವೆ ದಿನಗಳಲ್ಲಿ ಹಂಚಿಕೊಳ್ಳಲಿದೆ.












Click it and Unblock the Notifications