ಉತ್ತರಾಖಂಡ್ ಸಚಿವ ಹರಕ್ ಸಿಂಗ್ ರಾವತ್ ರಿಗೆ ಕೊವಿಡ್-19 ಸೋಂಕು
ಡೆಹ್ರಾಡೂನ್, ಅಕ್ಟೋಬರ್.02: ಉತ್ತರಾಖಂಡ್ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ವಿಧಾನಸಭಾ ಕಲಾಪ ಆರಂಭಕ್ಕೂ ಒಂದು ದಿನ ಮೊದಲು ಸಚಿವರಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು.
ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಸಚಿವರನ್ನು ಗುರುವಾರ ಡೂನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹರಕ್ ಸಿಂಗ್ ರಾವತ್ ರನ್ನು ತಪಾಸಣೆ ನಡೆಸಿದ ಆಸ್ಪತ್ರೆಯ ವೈದ್ಯ ಡಾ. ಆಶುತೋಷ್ ಸಯಾನ್, ಸಚಿವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ರೀತಿ ಉಸಿರಾಟ ತೊಂದರೆಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಸಪ್ಟೆಂಬರ್.23ರಂದೇ ಸಚಿವ ಹರಕ್ ಸಿಂಗ್ ರಾವತ್ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅಂದಿನಿಂದ ಒಂದು ವಾರ ಗೃಹ ದಿಗ್ಬಂಧನದಲ್ಲಿದ್ದ ಸಚಿವರಲ್ಲಿ ಗುರುವಾರವಷ್ಟೇ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ತಿಳಿದು ಬಂದಿದೆ.

ಭಾರತದಲ್ಲಿ ಕೊರೊನಾವೈರಸ್ ಕಂಡೀಷನ್:
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 64 ಲಕ್ಷದ ಹೊಸ್ತಿಲಿನಲ್ಲಿದೆ. ಕಳೆದ 24 ಗಂಟೆಗಳಲ್ಲೇ 81,484 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕಳೆದ ಗುರುವಾರ ಬೆಳಗ್ಗೆ 9 ಗಂಟೆಯಿಂದ ಶುಕ್ರವಾರ ಬೆಳಗ್ಗೆ 9 ಗಂಟೆವರೆಗೂ ಕೊರೊನಾವೈರಸ್ ಸೋಂಕಿಗೆ 1095 ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆ 99773ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 63,94,069ಕ್ಕೆ ಏರಿಕೆಯಾಗಿದೆ. ಈ ಪೈಕಿ 53,52,078 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ 9,42,217 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications