ಎಲಾನ್ ಮಸ್ಕ್ ಟೆಸ್ಲಾಗೆ ಟಕ್ಕರ್ ಕೊಡಲು ಸಿದ್ಧವಾದ Flying Car: ಇಂಜಿನಿಯರಿಂಗ್ ಓದದ ರವಿ ತಮಟ ಸಾಹಸ
ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ಒಡೆತನದ ಟೆಸ್ಲಾ ಕಂಪನಿಯು ಭವಿಷ್ಯದಲ್ಲಿ ಹಾರುವ ಕಾರುಗಳನ್ನ ಮಾರುಕಟ್ಟೆಗೆ ತರುವ ಸುಳಿವು ನೀಡಿದೆ. ಟೆಸ್ಲಾ ರೋಡ್‌ಸ್ಟರ್ ಕಾರುಗಳು ಸ್ಪೇಸ್‌ಎಕ್ಸ್ ತಂತ್ರಜ್ಞಾನ ಬಳಸಿ ಗಾಳಿಯಲ್ಲಿ ತೇಲುವ ಸಾಮರ್ಥ್ಯ ಹೊಂದಲಿವೆ ಎಂಬ ಸುದ್ದಿ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಆದರೆ, ಈ ಶತಕೋಟಿ ಡಾಲರ್ ಕಂಪನಿಗಳ ನಡುವೆ, ಭಾರತದ ಸಣ್ಣ ಹಳ್ಳಿಯ ಯುವಕನೊಬ್ಬ ಯಾವುದೇ ಇಂಜಿನಿಯರಿಂಗ್ ಪದವಿ ಇಲ್ಲದೆ ತನ್ನದೇ ಆದ ಸ್ವದೇಶಿ ಫ್ಲೈಯಿಂಗ್ ಕಾರ್ ನಿರ್ಮಿಸಿ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಕಾಫ್ಲಿಖಾನ್ ಎಂಬ ಸಣ್ಣ ಹಳ್ಳಿಯ ಯುವಕ ರವಿ ತಮಟ ಈ ಅಸಾಧಾರಣ ಸಾಧನೆ ಮಾಡಿದ ವಿಜ್ಞಾನಿ. ಕೇವಲ ಕಲಾ ವಿಭಾಗದಲ್ಲಿ ಪದವಿ ಪಡೆದಿರುವ ಇವರು, ಸತತ 13 ವರ್ಷಗಳ ಕಾಲ ಇಂಟರ್‌ನೆಟ್‌ನಲ್ಲಿ ಮಾಹಿತಿ ಕಲೆಹಾಕಿ, ಸ್ವಂತ ಪರಿಶ್ರಮದಿಂದ 'ಹ್ಯಾಪಿಡಾ ಸ್ಕೈನೆಕ್ಸ್' ಎಂಬ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರಿನ ಮಾದರಿಯನ್ನ ಯಶಸ್ವಿಯಾಗಿ ನಿರ್ಮಿಸಿದ್ದಾರೆ.
ಎಲಾನ್ ಮಸ್ಕ್ ಟೆಸ್ಲಾಗೆ ಭಾರತದ ಯುವಕನ ಪೈಪೋಟಿ
ಟೆಸ್ಲಾ ಸೇರಿದಂತೆ ವಿಶ್ವದ ಅನೇಕ ಬೃಹತ್ ಆಟೋಮೊಬೈಲ್ ಕಂಪನಿಗಳು ಹಾರುವ ಕಾರುಗಳ ಸಂಶೋಧನೆಗೆ ಕೋಟ್ಯಂತರ ರೂಪಾಯಿ ಸುರಿಯುತ್ತಿವೆ. ಆದರೆ, ರವಿ ತಮಟ ಅವರು ತಮ್ಮದೇ ಆದ 'ಹ್ಯಾಪಿಡಾ ಸ್ಕೈ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ನಿರ್ಮಿಸಿದ್ದಾರೆ.
ಇದೇ ಆಗಸ್ಟ್ ತಿಂಗಳಲ್ಲಿ ಈ ವಾಹನದ ಪ್ರಾಯೋಗಿಕ ಹಾರಾಟ ಕೂಡ ಯಶಸ್ವಿಯಾಗಿದೆ. ಇದು ಒಂದು ಸೀಟಿನ ವಾಹನವಾಗಿದ್ದು, ರನ್‌ವೇ ಇಲ್ಲದೆ ನೇರವಾಗಿ ಮೇಲಕ್ಕೆ ಹಾರುವ ಮತ್ತು ಕೆಳಕ್ಕೆ ಇಳಿಯುವ ವಿಶೇಷ ತಂತ್ರಜ್ಞಾನವನ್ನ ಹೊಂದಿದೆ. ಇದಕ್ಕೆ ಯಾವುದೇ ವಿಮಾನದ ಇಂಧನ ಅಥವಾ ಎಥೆನಾಲ್ ಅಗತ್ಯವಿಲ್ಲ, ಇದು ಸಂಪೂರ್ಣವಾಗಿ ಬ್ಯಾಟರಿ ಚಾಲಿತವಾಗಿದೆ.
13 ವರ್ಷಗಳ ಕಠಿಣ ಶ್ರಮ ಹಾಗೂ ಇಂಟರ್‌ನೆಟ್ ಕಲಿಕೆ
ರವಿ ತಮಟ ಅವರ ತಂದೆ ಹರೀಶ್ ರಾಮ್ ವೃತ್ತಿಯಲ್ಲಿ ಒಬ್ಬ ಮೆಕ್ಯಾನಿಕ್. ಆದ್ರೆ ರವಿ ಅವರಿಗೆ ಯಾವುದೇ ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿಜ್ಞಾನ ಅಥವಾ ಇಂಜಿನಿಯರಿಂಗ್ ಹಿನ್ನೆಲೆ ಇರಲಿಲ್ಲ. ಅತ್ಯಾಧುನಿಕ ಲ್ಯಾಬ್‌ಗಳ ಸೌಲಭ್ಯವೂ ಅವರಿಗಿರಲಿಲ್ಲ. ಆದರೂ, 2015ರಿಂದ ಹಾರುವ ಕಾರು ನಿರ್ಮಿಸುವ ಕನಸು ಕಂಡ ಅವರು, ಇಂಟರ್‌ನೆಟ್ ಅನ್ನೇ ತಮ್ಮ ಗುರುವಾಗಿ ಸ್ವೀಕರಿಸಿದರು.
ಆನ್‌ಲೈನ್‌ನಲ್ಲಿ ಲಭ್ಯವಿದ್ದ ಮಾಹಿತಿಯನ್ನ ಓದಿ, ಅರ್ಥಮಾಡಿಕೊಂಡು ಸತತವಾಗಿ ಪ್ರಯೋಗಗಳನ್ನ ಮಾಡುತ್ತಾ 13 ವರ್ಷಗಳ ಬಳಿಕ ತಮ್ಮ ಕನಸನ್ನ ನನಸು ಮಾಡಿದ್ದಾರೆ. ಮನುಷ್ಯನಿಗೆ ಕಲಿಯುವ ಆಸಕ್ತಿ ಇದ್ದರೆ ತರಗತಿಯ ನಾಲ್ಕು ಗೋಡೆಗಳ ಆಚೆಗೂ ಸಾಧನೆ ಮಾಡಬಹುದು ಎಂಬುದಕ್ಕೆ ರವಿ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.
ಬೆಟ್ಟಗುಡ್ಡಗಳ ಪ್ರಯಾಣದ ಸವಾಲು
ರವಿ ತಮಟ ಅವರು ಬೆಳೆದದ್ದು ಜಾಗೇಶ್ವರ ಧಾಮದ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ. ಅಲ್ಲಿನ ಅಂಕುಡೊಂಕಾದ ರಸ್ತೆಗಳಲ್ಲಿ ಪ್ರಯಾಣ ಮಾಡುವುದು, ಅದರಲ್ಲೂ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು.
ಈ ಕಷ್ಟವೇ ಅವರಿಗೆ 'ಪರ್ಸನಲ್ ಏರ್ ಮೊಬಿಲಿಟಿ' ಅಥವಾ ಫ್ಲೈಯಿಂಗ್ ಕಾರ್ ನಿರ್ಮಿಸಲು ಪ್ರೇರಣೆ ನೀಡಿತು. ಈ ಕಾರು ಗುಡ್ಡಗಾಡು ಪ್ರದೇಶಗಳಲ್ಲಿ ಕಡಿಮೆ ಅಂತರದ ಪ್ರಯಾಣವನ್ನು ವೇಗವಾಗಿ ಮಾಡಲು ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳನ್ನ ರಕ್ಷಿಸಲು ಭವಿಷ್ಯದಲ್ಲಿ ಹೆಚ್ಚು ಉಪಯುಕ್ತವಾಗಲಿದೆ.
🚨 UTTARAKHAND | MAN TESTS HOMEMADE ELECTRIC FLYING VEHICLEAlmora-based innovator Ravi Tamta has successfully conducted a test flight of his self-built single-seater flying vehicle ‘Hapida Skynex’.The electric-powered prototype was developed using locally available resources and showcases Tamta’s work in flying-vehicle technology.🎥 Viral / Visuals from the test flight#Almora #Innovation
— contentkikamii (@contentkikamii) August 8, 2026
ಹಿಂದೆಯೂ ಹಲವು ಸಾಧನೆಗಳ ಸರದಾರ
'ಹ್ಯಾಪಿಡಾ ಸ್ಕೈನೆಕ್ಸ್' ರವಿ ಅವರ ಮೊದಲ ಆವಿಷ್ಕಾರವೇನಲ್ಲ. ಈ ಹಿಂದೆಯೂ ಅವರು ದೈನಂದಿನ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಅನೇಕ ವಸ್ತುಗಳನ್ನ ನಿರ್ಮಿಸಿದ್ದಾರೆ. ನಡೆಯುವಾಗಲೇ ಮೊಬೈಲ್ ಚಾರ್ಜ್ ಮಾಡುವ ಶೂಗಳು, ಅಂಧರಿಗಾಗಿ ಸ್ಮಾರ್ಟ್ ವಾಕಿಂಗ್ ಸ್ಟಿಕ್, ಬಿದಿರು ಸೀಳುವ ಯಂತ್ರ ಹಾಗೂ ಅರಣ್ಯ ಇಲಾಖೆಗಾಗಿ ಬೆಂಕಿ ನಂದಿಸುವ ವಿಶೇಷ ಉಪಕರಣಗಳನ್ನ ಅವರು ಈ ಮೊದಲು ಅಭಿವೃದ್ಧಿಪಡಿಸಿದ್ದಾರೆ.
ಸದ್ಯ ರವಿ ತಮಟ ನಿರ್ಮಿಸಿರುವ ಈ ಫ್ಲೈಯಿಂಗ್ ಕಾರ್ ಕೇವಲ ಆರಂಭಿಕ ಹಂತದ ಮಾದರಿಯಾಗಿದೆ. ಇದು ವಾಣಿಜ್ಯ ಉದ್ದೇಶಗಳಿಗೆ ಹಾಗೂ ಪ್ರಯಾಣಿಕರ ಬಳಕೆಗೆ ಮುಕ್ತವಾಗುವ ಮುನ್ನ ಬ್ಯಾಟರಿ ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಸ್ಥಿರತೆಯ ಕುರಿತು ಇನ್ನಷ್ಟು ಕಠಿಣ ಪರೀಕ್ಷೆಗಳಿಗೆ ಒಳಪಡಬೇಕಿದೆ.
ಅಲ್ಲದೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅನುಮೋದನೆ ಕೂಡ ಪಡೆಯಬೇಕಿದೆ. ಏನೇ ಆಗಲಿ, ಎಲಾನ್ ಮಸ್ಕ್ ಅವರಂತಹ ಜಾಗತಿಕ ಕುಳಗಳೇ ತಲೆಕೆಡಿಸಿಕೊಂಡಿರುವ ಹಾರುವ ಕಾರಿನ ವಿಚಾರದಲ್ಲಿ, ಭಾರತದ ಹಳ್ಳಿಯ ಯುವಕನೊಬ್ಬ ಪ್ರಾಯೋಗಿಕ ಯಶಸ್ಸು ಸಾಧಿಸಿರುವುದು ಇಡೀ ದೇಶವೇ ಹೆಮ್ಮೆಪಡುವಂತಹ ವಿಷಯವಾಗಿದೆ.


Click it and Unblock the Notifications
