ಉತ್ತರ ಪ್ರದೇಶ ಉಪಚುನಾವಣೆ : ಇಂಡಿಯಾ ಒಕ್ಕೂಟಕ್ಕೆ ಮೊದಲ ಅಗ್ನಿ ಪರೀಕ್ಷೆ!
ಬಿಜೆಪಿ ನೇತೃತ್ವದ ಎನ್‌ಡಿಎ ಬಣವನ್ನು ಮಣಿಸಲು ವಿಪಕ್ಷಗಳು ಇಂಡಿಯಾ ಹೆಸರಿನಲ್ಲಿ ಒಂದಾಗಿದೆ. ವಿಪಕ್ಷಗಳ ಮೈತ್ರಿಕೂಟಕ್ಕೆ ಈಗ ಮೊದಲ ಅಗ್ನಿ ಪರೀಕ್ಷೆ ಎದುರಾಗಿದ್ದು, ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಒಗ್ಗಟ್ಟಿನ ಮೂಲಕ ಹೋರಾಟ ಮಾಡಲಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಘೋಸಿ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್, ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ಅಪ್ನಾ ದಳ ಕಾಮೆರವಾಡಿ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದು, ಸಮಾಜವಾದಿ ಪಕ್ಷದ ಅಭ್ಯರ್ಥಿ ಸುಧಕರ್ ಸಿಂಗ್ ಅವರಿಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ. ಶನಿವಾರ ಈ ಮೂರು ಪಕ್ಷಗಳು ಘೋಸಿ ಉಪಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯನ್ನು ಬೆಂಬಲಿಸಲು ಅಧಿಕೃತ ಪತ್ರವನ್ನು ನೀಡಿವೆ.

ಕಾಂಗ್ರೆಸ್‌ನ ಯುಪಿ ಅಧ್ಯಕ್ಷ ಅಜಯ್ ರೈ ಎಎನ್‌ಐ ಜೊತೆ ಮಾತನಾಡಿ "ಈ ಚುನಾವಣೆಯು ಬಿಜೆಪಿಗೆ ಸೋಲಿಗೆ ಆರಂಭವಾಗಲಿದೆ. ದಾರಾ ಸಿಂಗ್ ಚೌಹಾಣ್ ಅವರ ಪಕ್ಷಾಂತರ ರಾಜಕೀಯದಿಂದಾಗಿ ಜನರು ಸಂಪೂರ್ಣವಾಗಿ ಬಿಜೆಪಿ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಅಲ್ಲಿನ ಜನರು ಬಿಜೆಪಿಯನ್ನು ಸೋಲಿಸಲು ಮನಸ್ಸು ಮಾಡಿದ್ದು, ಇಂಡಿಯಾ ಒಕ್ಕೂಟದ ಅಭ್ಯರ್ಥಿಯ ಗೆಲುವಿಗೆ ದೃಢ ಸಂಕಲ್ಪ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ನಾವು ನಮ್ಮ ಮುಖಂಡರು ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿದ್ದೇವೆ" ಎಂದು ಅವರು ಹೇಳಿದರು.
ಎಸ್‌ಪಿ ತೊರೆದು ಬಿಜೆಪಿ ಸೇರಿದ್ದ ದಾರಾ ಸಿಂಗ್
2022 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಎಸ್ಪಿ ಚಿಹ್ನೆಯ ಮೇಲೆ ಘೋಸಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಚುನಾಯಿತರಾದ ದಾರಾ ಸಿಂಗ್ ಚೌಹಾಣ್ ಅವರ ರಾಜೀನಾಮೆಯ ನಂತರ ಘೋಸಿ ಅಸೆಂಬ್ಲಿ ಸ್ಥಾನವು ತೆರವಾಗಿತ್ತು. ರಾಜೀನಾಮೆ ನೀಡಿದ ಬಳಿಕ ಚೌಹಾಣ್ ಅವರು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ವಿರೋಧ ಪಕ್ಷಗಳ ಬೆಂಬಲದ ಕುರಿತು ಬಿಜೆಪಿ ಯುಪಿ ವಕ್ತಾರ ರಾಕೇಶ್ ತ್ರಿಪಾಠಿ ಮಾತನಾಡಿ, "ಈ ಮೈತ್ರಿಯಲ್ಲಿನ ಒಡಕುಗಳು ಈಗಾಗಲೇ ಬಹಿರಂಗವಾಗಿದೆ. ಏಕೆಂದರೆ ಇದುವರೆಗೆ ಯಾವುದೇ ಕಾಂಗ್ರೆಸ್, ಆರ್‌ಎಲ್‌ಡಿ ನಾಯಕರು ಎಸ್‌ಪಿ ಅಭ್ಯರ್ಥಿಯ ಪರ ಪ್ರಚಾರಕ್ಕೆ ಮುಂದಾಗಿಲ್ಲ ಆದರೆ ಮತ್ತೊಂದೆಡೆ ಎನ್‌ಡಿಎ ನಾಯಕರು ಒಟ್ಟಿಗೆ ನಿಂತಿರುವುದು ಕಂಡುಬಂದಿದೆ. ನಾಮಪತ್ರ ಸಲ್ಲಿಕೆ ವೇಳೆಯೂ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
ಜನರ ಚಿತ್ತ ಬಿಜೆಪಿಯತ್ತ ದೃಢವಾಗಿದೆ ಎಂದು ಘೋಸಿಯಲ್ಲಿ ಬೀಡುಬಿಟ್ಟಿರುವ ಯುಪಿ ಇಂಧನ ಸಚಿವ ಎಕೆ ಶರ್ಮಾ ಎಎನ್‌ಐಗೆ ತಿಳಿಸಿದ್ದಾರೆ. "ಘೋಸಿಯಲ್ಲಿ ದಾರಾ ಸಿಂಗ್ ಚೌಹಾಣ್ ಭಾರೀ ಅಂತರದಿಂದ ಗೆಲ್ಲುತ್ತಾರೆ. ಈ ಇಂಡಿಯಾ ಮೈತ್ರಿಕೂಟವು ಬೆಸೆದ ಪಕ್ಷವಾಗಿದೆ. ಈ ಪಕ್ಷಗಳು ದೇಶವನ್ನು 70 ವರ್ಷಗಳಿಂದ ಕತ್ತಲೆಯಲ್ಲಿಟ್ಟಿವೆ. ನೀವು ಒಂದು ಫ್ಯೂಸ್ ಹೋಗಿರುವ ಬಲ್ಬ್, ಆರು ಫ್ಯೂಸ್ ಹೋಗಿರುವ ಬಲ್ಬ್‌ಳು ಅಥವಾ ಅಂತಹ 26 ಫ್ಯೂಸ್ ಹೋಗಿರುವ ಬಲ್ಬ್‌ಗಳನ್ನು ಆನ್ ಮಾಡಿದರೂ ಯಾವುದೇ ಬೆಳಕು ಬರುವುದಿಲ್ಲ, ಇಂಡಿಯಾ ಮೈತ್ರಿ ಕೂಡ ಅಂತಹ 26 ಬಲ್ಬ್‌ಗಳನ್ನು ಹೊಂದಿದೆ" ಎಂದು ಶರ್ಮಾ ಹೇಳಿದರು.
ಸೆಪ್ಟೆಂಬರ್ 5ರಂದು ಚುನಾವಣೆ
ಉತ್ತರ ಪ್ರದೇಶದ ಘೋಸಿ ಕ್ಷೇತ್ರದ ಉಪಚುನಾವಣೆ ಸೆಪ್ಟೆಂಬರ್ 5 ರಂದು ನಡೆಯಲಿದೆ. ಸೆಪ್ಟಂಬರ್ 8ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ವರ್ಷದ ಆರಂಭದಲ್ಲಿ ದಾರಾ ಸಿಂಗ್ ಚೌಹಾಣ್ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಈಗ ದಾರಾ ಸಿಂಗ್ ಚೌಹಾಣ್ ಅವರು ಬಿಜೆಪಿಯಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರ ಪ್ರಮುಖ ಎದುರಾಳಿ ಸುಧಕರ್ ಸಿಂಗ್ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದಾರೆ.












Click it and Unblock the Notifications