ಯುಪಿಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ: ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರಾ ಯೋಗಿ ಆದಿತ್ಯನಾಥ್?
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉತ್ತರಪ್ರದೇಶದಲ್ಲಿ ಆದ ಅಭಿವೃದ್ಧಿ ಕಾರ್ಯಗಳಿಂದಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಮಲಕ್ಕೆ ಜಯ ಪಕ್ಕಾ ಎಂದು ಭಾವಿಸಲಾಗಿತ್ತು. ಆದರೆ ಸಮಾಜವಾದಿ ಪಕ್ಷ ಬಿಜೆಪಿಗೆ ಭಾರೀ ಪೈಪೋಟಿ ನೀಡುತ್ತಿದೆ.
ಹೌದು... ಲೋಕಸಭಾ ಚುನಾವಣೆ 2024ರ ಮತ ಎಣಿಕೆ ಕಾರ್ಯ ಇಂದು (ಜೂನ್ 4) ಮುಂದುವರೆದಿದ್ದು ಬಿಜೆಪಿಗೆ ಸಮಾಜವಾದಿ ಪಕ್ಷ ಕಠಿಣ ಸ್ಪರ್ಧೆ ನೀಡುತ್ತಿದೆ. ಬಿಜೆಪಿ 37 ಸ್ಥಾನಗಳನ್ನು ತನ್ನ ತೆಕ್ಕೆಗೆ ಪಡೆದು ಮುನ್ನುಗ್ಗಿದರೆ, ಸಮಾಜವಾದಿ ಪಕ್ಷ 32 ಸ್ಥಾನಗಳನ್ನು ಪಡೆದು ಕಠಿಣ ಸ್ಪರ್ಧೆ ನೀಡುತ್ತಿದೆ.

ಬಿಜೆಪಿ ಅಧಿಕಾರ ಅವಧಿಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಇಡೀ ದೇಶವೇ ಕೊಂಡಾಡಿತ್ತು. ಇದೊಂದು ವಿಚಾರ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಸದ್ದು ಮಾಡಿತ್ತು. ರಾಮ ಮಂದಿರ ನಿರ್ಮಾಣದಿಂದಾಗಿ ವಿಶೇಷವಾಗಿ ಉತ್ತರಪ್ರದೇಶದ ಗರಿಮೆ ಉತ್ತುಂಗದಲ್ಲಿತ್ತು. ಇದಕ್ಕೆ ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರೇ ಕಾರಣ ಎಂದು ಯುಪಿಯ ಜನ ಕೊಂಡಾಡಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಜನ ದೇಶ ವಿದೇಶದಿಂದ ರಾಮ ಮಂದಿರಕ್ಕೆ ಭೇಟಿ ನೀಡಿ ಸಿಎಂ ಯೋಗಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದು ಬಿಜೆಪಿ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನಗಳ ಅಂತರದಿಂದ ಜಯ ಗಳಿಸಲಿದೆ ಎಂಬುದರ ಸೂಚನೆ ಕೂಡ ಆಗಿತ್ತು. ಆದರೆ ಈವರೆಗಿನ ಫಲಿತಾಂಶ ಬುಡಮೇಲಾಗಿಸಿದೆ. ಸಮಾಜವಾದಿ ಪಕ್ಷ ಬಿಜೆಪಿಯೊಂದಿಗೆ ತೀವ್ರ ಪೈಪೋಟಿಗೆ ಇಳಿದಿದೆ.

ಮತ ಎಣಿಕೆ ಕಾರ್ಯ ಇನ್ನೂ ಮುಂದುವರೆದಿದ್ದು, ಸಂಜೆ ವೇಳೆಗೆ ಫಲಿತಾಂಶ ಬಿಜೆಪಿ ಗೆಲ್ಲುವ ನಿರೀಕ್ಷೆಯನ್ನು ಹುಸಿಯಾಗಿಸುವ ಸಾಧ್ಯತೆ ಕೂಡ ಇದೆ. ಹಾಗೊಂದು ವೇಳೆ ಉತ್ತರಪ್ರದೇಶದಲ್ಲಿ ಬಿಜೆಪಿ ಸೋಲನ್ನು ಕಂಡರೆ ಈ ಫಲಿತಾಂಶ ಇಡೀ ದೇಶಕ್ಕೆ ಅಚ್ಚರಿಯ ಫಲಿತಾಂಶ ಆಗುವುದರಲ್ಲಿ ಅನುಮಾನವೇ ಇಲ್ಲ.
ಸಿಎಂ ಸ್ಥಾನ ಕಳೆದುಕೊಳ್ಳುತ್ತಾರಾ ಯೋಗಿ ಆಧಿತ್ಯನಾಥ್?
ಇದರಿಂದಾಗಿ ಒಂದು ವೇಳೆ ಬಿಜೆಪಿ ಸೋತರೆ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರಾ ಯೋಗಿ ಆಧಿತ್ಯನಾಥ್ ಎನ್ನುವ ಅನುಮಾನ ಸೃಷ್ಟಿಯಾಗಿದೆ. ಹಾಗೊಂದು ವೇಳೆ ಬಿಜೆಪಿ ಸೋತರೆ ಸೋಲಿನ ಹೊಣೆಯನ್ನು ಹೊತ್ತು ಯೋಗಿ ಆದಿತ್ಯನಾಥ್ ಸಿಎಂ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ.
ಉತ್ತರಪ್ರದೇಶ ಲೋಕಸಭಾ ಚುನಾವಣೆ
ಪ್ರಸ್ತುತ ಲಭ್ಯವಿರುವ ಮಾಹಿತಿಗಳ ಪ್ರಕಾರ ಉತ್ತರ ಪ್ರದೇಶದಲ್ಲಿ 37 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಸಮಾಜವಾದಿ ಪಕ್ಷ 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಉತ್ತರಪ್ರದೇಶ ರಾಜ್ಯದ ಪಾತ್ರ ಬಹಳ ನಿರ್ಣಾಯಕವಾಗಿದ್ದು, ಒಟ್ಟು 80 ಸೀಟುಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸೀಟುಗಳನ್ನು ಪಡೆದವರಿಗೇ ಕೇಂದ್ರದಲ್ಲಿ ಅಧಿಕಾರ ಖಚಿತ ಎಂಬ ಅಭಿಪ್ರಾಯವಿದೆ. ವಾರಣಾಸಿಯಲ್ಲಿ ಪ್ರಧಾನಿ ಮೋದಿ, ಕನೌಜ್‌ನಲ್ಲಿ ಅಖಿಲೇಶ್ ಯಾದವ್, ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಮುನ್ನಡೆ ಸಾಧಿಸಿದ್ದಾರೆ.
ಉತ್ತರಪ್ರದೇಶದಲ್ಲಿ ವಾರಣಾಸಿ, ರಾಯ್ ಬರೇಲಿ, ಅಮೇಥಿ, ಕನ್ನೌಜ್, ಮೈನ್‌ಪುರಿ, ಅಜಮ್‌ಗಢ, ಘಾಜಿಯಾಬಾದ್, ಮೀರತ್, ಫೈಜಾಬಾದ್, ಮಥುರಾ, ಗೌತಮ್ ಬುದ್ಧ ನಗರ, ಕಾನ್ಪುರ, ಗೋರಖ್‌ಪುರ ಗಮನ ಸೆಳೆದಿರುವ ಪ್ರಮುಖ ಕ್ಷೇತ್ರಗಳಾಗಿವೆ.












Click it and Unblock the Notifications