ಭಾರತ-ಅಮೆರಿಕ ಒಪ್ಪಂದಕ್ಕೆ ವಿರೋಧ: ರೈತರ ಸಂಘಟನೆಗಳಿಂದ ಫೆ.12ಕ್ಕೆ ಬೃಹತ್ ಪ್ರತಿಭಟನೆಗೆ ಕರೆ
ನವದೆಹಲಿ: ಭಾರತ ಮತ್ತು ಅಮೆರಿಕ ಮಧ್ಯ ಬಹುನಿರೀಕ್ಷೆಯ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಇದರ ಬೆನ್ನಲ್ಲೆ ಭಾರತದಲ್ಲಿ ರೈತಪರ ಸಂಘಟನೆಗಳು ಈ ಅಂತಾರಾಷ್ಟ್ರೀಯ ಒಪ್ಪಂದ ವಿರೋಧಿಸಿವೆ. ಒಪ್ಪಂದ ಕುರಿತು ಮಾಹಿತಿ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯೆಲ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿವೆ. ಇದೇ ಫೆಬ್ರವರಿ 12ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ.
ಶನಿವಾರ ಸಂಯುಕ್ತ ಕಿಸಾನ್ ಮೋರ್ಚಾ (SKM) ಸುದ್ದಿಗೋಷ್ಠಿ ನಡೆಸಿತು. ರೈತ ಪರ ನಾಯಕರು ಅಮೆರಿಕ ಜೊತೆಗೆ ಭಾರತ ಒಪ್ಪಂದ ಮಾಡಿಕೊಳ್ಳಬಾರದು. ಪ್ರಧಾನಿ ಮೋದಿ ಸಹಿ ಹಾಕದಂತೆ ಆಗ್ರಹಿಸಿವೆ. ಈ ಒಪ್ಪಂದದಿಂದ ಹತ್ತಿ ಆಮದಿಗೆ ಯಾವುದೇ ಸಡಿಲಿಕೆ ಸಿಗುವುದಿಲ್ಲ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನಂತಹ ರಾಜ್ಯಗಳ ಸೇಬು, ಹತ್ತಿ ಇನ್ನಿತರ ಬೆಳೆಗಾರರಿಗೆ ಮಾರಕವಾಗುತ್ತದೆ ಎಂದರು.

ಅಮೆರಿಕ-ಭಾರತ ವ್ಯಾಪಾರದ ಮಧ್ಯಂತರ ಒಪ್ಪಂದದ ಚೌಕಟ್ಟು ಅಮೆರಿಕದ ಕೃಷಿ ಕ್ಷೇತ್ರವು ಬಹುರಾಷ್ಟ್ರೀಯ ದೈತ್ಯರ ಮುಂದೆ ಸಂಪೂರ್ಣ ಶರಣಾಗತಿಯಾಗಿದೆ. ಪಶು ಆಹಾರ, ಕೆಂಪು ಸೋರ್ಗಮ್, ಮರದ ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್‌ಗಳು ಮತ್ತು ಹೆಚ್ಚುವರಿ ಉತ್ಪನ್ನಗಳನ್ನು ಜೊತೆಗೆ ಪಶು ಆಹಾರ ಮಾರುಕಟ್ಟೆಯ ನಿಯಂತ್ರಣವನ್ನು ಅಮೆರಿಕದ ಕಂಪನಿಗಳು ಸಂಪೂರ್ಣವಾಗಿ ಏಕಸ್ವಾಮ್ಯಗೊಳಿಸುತ್ತವೆ ಎಂದು ಮೋರ್ಚಾ ಸದಸ್ಯರು ಕಳವಳ ವ್ಯಕ್ತಪಡಿಸಿದರು.
ಫೆಬ್ರವರಿ 12 ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ
"ಜನವಿರೋಧಿ ಮೋದಿ ಸರ್ಕಾರಕ್ಕೆ ಸೂಕ್ತ ಪ್ರತ್ಯುತ್ತರ" ಎಂಬ ಘೋಷವಾಕ್ಯದಡಿ ಕಿಸಾಮ್ ಮೋರ್ಚಾ ಇದೇ ಫೆಬ್ರವರಿ 12 ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಹೆಚ್ಚಿನ ಪ್ರಮಾಣದ ರೈತರು ಭಾಗವಹಿಸಬೇಕು. ಕಾರ್ಮಿಕರು ಸಹ ಈ ಮುಷ್ಕರ ಬೆಂಬಲಿಸುವಂತೆ ಮೋರ್ಚಾ ನಾಯಕರು ಕೋರಿದ್ದಾರೆ.
ಅಮೆರಿಕ-ಭಾರತದ ಈ ಒಪ್ಪಂದದಲ್ಲಿ ಕೃಷಿ ಮತ್ತು ಡೈರಿ ಕ್ಷೇತ್ರಗಳು ಹೊರಗಿವೆ ಎಂದು ಸಚಿವ ಗೋಯೆಲ್ ಸುಳ್ಳು ಹೇಳಿದ್ದಾರೆ. ಡೈರಿ ಉತ್ಪನ್ನಗಳು ಯುಕೆ, ನ್ಯೂಜಿಲೆಂಡ್ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ಸಹಿ ಹಾಕಲಾದ ಎಫ್‌ಟಿಎಗಳ ಭಾಗವಾಗಿವೆ. ಈ ವಲಯಗಳು ಹೊರಗಿವೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಕೇಂದ್ರ ಸರ್ಕಾರ ರೈತರು ಮತ್ತು ದೇಶದ ಜನರಿಗೆ ದ್ರೋಹ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಗೋಯಲ್ ರಾಜೀನಾಮೆ ನೀಡಬೇಕು
ಈ ಒಪ್ಪಂದ ಕುರಿತು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಕಿಸಾನ್ ಮೋರ್ಚಾ ಕೇಂದ್ರ ಸಚಿವ ಪಿಯೋಷ್ ಗೋಯೆಲ್ ಪಾತ್ರವನ್ನು ದೇಶದ್ರೋಹಿ ಎಂದು ಕರೆದಿದೆ. ಅವರ ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ. ಭಾರತ-ಯುಎಸ್ ಮುಕ್ತ ವ್ಯಾಪಾರ ಒಪ್ಪಂದ ನಡೆದಿದ್ದೇ ಆದಲ್ಲಿ ಬೃಹತ್ ಮತ್ತು ಸಾಮೂಹಿಕ ಹೋರಾಟ ಎದುರಿಸಬೇಕಾಗುತ್ತದೆ ಎಂದು ಕಿಸಾನ್ ಮೋರ್ಚಾ ನಾಯಕರ ರಾಕೇಶ್ ಶೆಟ್ಟಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಅಮೆರಿಕ ಮೇಲೆ ಶೂನ್ಯ ಸುಂಕ!
ಭಾರತೀಯ ಸರಕುಗಳ ಮೇಲಿನ ಅಮೆರಿಕದ ಸುಂಕದ ಬಗ್ಗೆ ವಿವರಿಸಿದ ರೈತಪರ ನಾಯಕರು, 2023-24 ರಲ್ಲಿ 0-3ರಷ್ಟು ಸುಂಕ ಇತ್ತು. ಅದೀಗ ಶೇಕಡಾ 18ಕ್ಕೆ ಏರಿದೆ. ಇತ್ತ ಅಮೆರಿಕದ ಕೃಷಿ ಉತ್ಪನ್ನಗಳ ಮೇಲಿನ ಭಾರತೀಯ ಸುಂಕ ದರಗಳು ಶೇಕಡಾ 30 ರಿಂದ 150ರಷ್ಟಿತ್ತು. ಇದೀಗ ಅದನ್ನು ಶೂನ್ಯಕ್ಕೆ ಇಳಿಸಲಾಗಿದೆ. ಈ ಕ್ರಮಗಳು ಭಾರತದ ಕೃಷಿಯನ್ನು ಯುಎಸ್‌ನ ಎಂಎನ್‌ಸಿ ಕಂಪನಿಗಳ ಕೈಗೆ ಒಪ್ಪಿಸುವಂತಿದೆ ಎಂದರು.
ಇನ್ನೂ ಕೆಲವರು ಪಶುಗಳಿಗೆ ಆಹಾರವನ್ನು ಆಮದು ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ. ಈ ರೀತಿಯ ಬೇಡಿಕೆ ದೇಶದ ರೈತರಿಂದ ಬಂದಿದ್ದಲ್ಲ. ಜಾನುವಾರುಗಳಿಗೆ ಮೇವಿನ ಅಗತ್ಯವಿದೆ. ಮೆಕ್ಕೆಜೋಳ ಮತ್ತು ಸೋಯಾಬೀನ್ ಆಧಾರಿತ ಮೇವನ್ನು ಆಮದು ಮಾಡಿಕೊಳ್ಳುವಂತೆ ಒತ್ತಾಯಿಸಲಾಗಿದೆ. ಅಮೆರಿಕದಿಂದ ಪಶುಗಳಿಗೆ ಬರುವ ಆಹಾರದಲ್ಲಿ ಮಾಂಸಾಹಾರಿ ವಸ್ತುಗಳು ಸಹ ಇರಬಹುದು. ಈ ಬಗ್ಗೆ ನಾವು ಕೇಳಿದ್ದೇವೆ. ಸರ್ಕಾರ ನಮ್ಮ ಹಸುಗಳು ಮಾಂಸಾಹಾರ ಆಹಾರ ಸೇವಿಸಬೇಕೆಂದು ಬಯಸಿದೆಯೇ? ಎಂದು ಮೋರ್ಚಾ ನಾಯಕರು ಪ್ರಶ್ನಿಸಿದರು. ಅಲ್ಲದೇ ಮಾಂಸಾಹಾರದೊಂದಿಗೆ ಪೋಷಿಸಿದ ಪ್ರಾಣಿಗಳ ಹಾಲನ್ನು ಆಮದು ಮಾಡಿಕೊಳ್ಳಬಾರದು ಎಂದು ಆರ್‌ಎಸ್‌ಎಸ್ ಹೇಳಿಕೊಂಡಿತ್ತು ಎಂಬುದನ್ನು ನೆನಪಿಸಿದರು.
ಸೇಬು ಬೆಳೆಗಾರರ ಬಗ್ಗೆ ಕಾಳಜಿ ತೋರಬೇಕು
ಜಮ್ಮು ಮತ್ತು ಕಾಶ್ಮೀರದ ಸೇಬು ಬೆಳೆಯುವ ರೈತರ ಒಕ್ಕೂಟದ ನಾಯಕ ಮತ್ತು ಶಾಸಕ ಎಂ.ವೈ. ತಾರಿಗಾಮಿ ವ್ಯಾಪಾರ ಒಪ್ಪಂದವು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ. ಈಗಾಗಲೇ ನಾವು ಮಾರುಕಟ್ಟೆ ಸೌಲಭ್ಯಗಳ ಕೊರತೆ ಮತ್ತು ಹವಾಮಾನ ಸವಾಲು ಎದುರಿಸುತ್ತಿದ್ದೇವೆ. ಎರಡೂ ರಾಜ್ಯಗಳ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಹೊರತಾಗಿ ಇಲ್ಲಿ ಕೈಗಾರಿಕೆಗಳನ್ನು ಹೊಟ್ಟೆಪಾಡಿಗೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಇಲ್ಲ. ರೈತರಿಗೆ ಪ್ರಮುಖ ಆದಾಯ ಮೂಲವೇ ಸೇಬು ಬೆಳೆ ಮತ್ತು ಒಣ ಹಣ್ಣುಗಳ ಕೃಷಿ. ಆದ್ದರಿಂದ ಈ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ವಹಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.
ಇನ್ನೂ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಗೋಯೆಲ್ ಅವರು, ವಿರೋಧ ಪಕ್ಷಗಳು ಅಮೆರಿಕೆ ಜತೆಗಿನ ಈ ಒಪ್ಪಂದವು ರೈತ ವಿರೋಧಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಿವೆ. ರೈತರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.












Click it and Unblock the Notifications