ಯುಪಿಐ ಬಳಕೆದಾರರಿಗೆ ಗುಡ್ ನ್ಯೂಸ್: ಶುಲ್ಕದ ಹೊರೆ ನಿಮ್ಮ ಮೇಲಿಲ್ಲ, ಕೇಂದ್ರ ಹಣಕಾಸು ಸಚಿವೆ ಸ್ಪಷ್ಟನೆ
UPI: ದೇಶದ ಪ್ರಮುಖ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ ಮೇಲೆ 'ಮರ್ಚೆಂಟ್ ಡಿಸ್ಕೌಂಟ್ ರೇಟ್' ವಿಧಿಸುವ ಕುರಿತು ಕಳೆದ ಕೆಲ ದಿನಗಳಿಂದ ಭಾರಿ ಚರ್ಚೆ ಶುರುವಾಗಿತ್ತು. ಇದರ ಬೆನ್ನಲ್ಲೇ ಇದೀಗ ಕೆಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದಕ್ಕೆ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆಯುವ ಕೆಲಸವನ್ನು ಮಾಡಿದ್ದಾರೆ.
ಯುಪಿಐ ಮೇಲೆ ಎಂಡಿಆರ್ ವಿಧಿಸುವ ಕುರಿತು ರಾಜಕೀಯ ಹಾಗೂ ಆರ್ಥಿಕ ವಲಯಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದು, ಮುಂದಿನ ದಿನಗಳಲ್ಲಿ ಎಂಡಿಆರ್ ಜಾರಿಗೆ ಬಂದರೂ ಅದರ ಯಾವುದೇ ನೇರ ಆರ್ಥಿಕ ಹೊರೆ ಸಾಮಾನ್ಯ ಗ್ರಾಹಕರ ಮೇಲೆ ಬೀಳುವುದಿಲ್ಲ. ಈ ಶುಲ್ಕವು ಕೇವಲ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಯುಪಿಐ ಶುಲ್ಕ; ಯಾರಿಗೆ ಹೊರೆ? ಯಾರಿಗೆ ಲಾಭ?
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಆರೋಪಗಳಿಗೆ ಉತ್ತರ ನೀಡಿದ ಅವರು, ಎಂಡಿಆರ್ ಜಾರಿಯಿಂದ ಸಂಗ್ರಹ ಆಗುವ ಆದಾಯವು ಬ್ಯಾಂಕ್‌ಗಳು ಮತ್ತು ಕಂಪನಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಇದರಿಂದ ಸೈಬರ್ ಭದ್ರತೆ ಹೆಚ್ಚಿಸಲು, ಸುಧಾರಿತ ತಂತ್ರಜ್ಞಾನ ಅಳವಡಿಸಲು ಹಾಗೂ ಉತ್ತಮ ಡಿಜಿಟಲ್ ಮೂಲಸೌಕರ್ಯ ನಿರ್ಮಿಸಲು ಸಾಧ್ಯವಾಗುತ್ತದೆ. ಅಂತಿಮವಾಗಿ ಈ ತಾಂತ್ರಿಕ ಸುಧಾರಣೆಗಳ ಲಾಭವು ಬಳಕೆದಾರರಿಗೇ ತಲುಪಲಿದೆ ಎಂದು ಅವರು ಸಮರ್ಥಸಿಕೊಂಡಿದ್ದಾರೆ.
'ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ'
ಸದ್ಯಕ್ಕೆ ಯುಪಿಐ ಮೇಲೆ ಎಂಡಿಆರ್ ವಿಧಿಸುವ ಬಗ್ಗೆ ಸರ್ಕಾರ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಕುರಿತು ಅಂತಿಮ ನಿರ್ಧಾರವನ್ನು ಎನ್‌ಪಿಸಿಐ ನೇತೃತ್ವದ ಸಮಿತಿಯು ತೆಗೆದುಕೊಳ್ಳಲಿದೆ. ಸಂಸತ್ತಿನಲ್ಲಿ ತೆರಿಗೆ ಹಾಗೂ ಇತರೆ ತಿದ್ದುಪಡಿ ಮಸೂದೆ ಅಂಗೀಕಾರಗೊಂಡ ನಂತರವಷ್ಟೇ ಈ ಪ್ರಕ್ರಿಯೆಗಳು ಆರಂಭವಾಗಲಿವೆ. ಮಸೂದೆ ಮಂಡನೆಯ ಸಂದರ್ಭದಲ್ಲಿ ವಿಪಕ್ಷಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರೆ, ಸಂಸತ್ತಿನ ಉಭಯ ಸೌಧಗಳಲ್ಲಿ ಈ ವಿಷಯದ ಬಗ್ಗೆ ಮತ್ತಷ್ಟು ವಿವರವಾದ ಸಂವಾದ ನಡೆಯುತ್ತಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ವಿಪಕ್ಷಗಳ ಆರೋಪಗಳೇನು?
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಚಾಲ್ತಿಯಲ್ಲಿರುವ ಉಚಿತ ಯುಪಿಐ ಪಾವತಿ ವ್ಯವಸ್ಥೆಗೆ ಹೊಸ ತಿದ್ದುಪಡಿ ಮಸೂದೆಯು ಧಕ್ಕೆ ತರಲಿದೆ. ಭವಿಷ್ಯದಲ್ಲಿ ಡಿಜಿಟಲ್ ಪಾವತಿಗಳ ಮೇಲೆ ಶುಲ್ಕ ವಿಧಿಸಲು ಇದು ದಾರಿ ಮಾಡಿಕೊಡುತ್ತದೆ ಹಾಗೂ ಇದರ ಅಂತಿಮ ಹೊರೆ ಪರೋಕ್ಷವಾಗಿ ಸಾಮಾನ್ಯ ಜನರ ಮೇಲೆಯೇ ಬೀಳಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಆರ್‌ಬಿಐ ಬಳಿ ಯುಪಿಐ ನಿರ್ವಹಣೆಗೆ ಅಗತ್ಯವಿರುವಷ್ಟು ಹಣಕಾಸಿನ ಸಂಪನ್ಮೂಲವಿದೆ. ಇತ್ತೀಚೆಗೆ ಆರ್‌ಬಿಐ ಸರ್ಕಾರಕ್ಕೆ ಭಾರಿ ಪ್ರಮಾಣದ ಹೆಚ್ಚುವರಿ ನಿಧಿಯನ್ನು ವರ್ಗಾಯಿಸಿದ್ದು, ಅದರಲ್ಲಿ ಸಣ್ಣ ಭಾಗವನ್ನು ಡಿಜಿಟಲ್ ಪಾವತಿ ಮೂಲಸೌಕರ್ಯದ ಉಸ್ತುವಾರಿಗೆ ಬಳಸಿಕೊಳ್ಳಬಹುದು. ಹೀಗಿರುವಾಗ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಶುಲ್ಕ ಹೇರುವ ಅಗತ್ಯ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಜೊತೆಗೆ ಅಮೆರಿಕದ ವ್ಯಾಪಾರ ಪ್ರತಿನಿಧಿ ವರದಿಯು ಭಾರತದ ಶುಲ್ಕರಹಿತ ಯುಪಿಐ ಮಾದರಿಯನ್ನು ವಿಮರ್ಶಿಸಿದ ಬೆನ್ನಲ್ಲೇ ಈ ತಿದ್ದುಪಡಿ ತರಲಾಗುತ್ತಿದೆ. ಸರ್ಕಾರ ಅಮೆರಿಕದಂತಹ ವಿದೇಶಿ ಶಕ್ತಿಗಳ ಒತ್ತಡಕ್ಕೆ ಮಣಿದು, ದೇಶೀಯ ಡಿಜಿಟಲ್ ಪಾವತಿ ಕ್ಷೇತ್ರವನ್ನು ವಿದೇಶಿ ಸಂಸ್ಥೆಗಳ ಲಾಭಕ್ಕಾಗಿ ತೆರೆಯಲು ಯತ್ನಿಸುತ್ತಿದೆಯೇ ಎಂಬ ಅನುಮಾನವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, ಯುಪಿಐ ಮೇಲಿನ ಶುಲ್ಕಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕವೇ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದೆ.


Click it and Unblock the Notifications
