ಆಮ್ಲೆಟ್ ಗೆ ಈರುಳ್ಳಿ ಹಾಕದಿದ್ದಕ್ಕೆ ಗುಂಡೇಟು!
ಲಖ್ನೋ, ಸೆ.24: ಉತ್ತರ ಪ್ರದೇಶದ ಈಟಾ ಪಟ್ಟಣದಲ್ಲಿ ಈರುಳ್ಳಿ ಕಾಟ ಒಬ್ಬರ ಪ್ರಾಣಕ್ಕೆ ಕುತ್ತುಂಟಾಗುವಂತೆ ಮಾಡಿದೆ. ತಾನು ಆರ್ಡರ್ ಮಾಡಿದ್ದ ಆಮ್ಲೆಟ್ ಗೆ ಈರುಳ್ಳಿ ಹಾಕದಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಗುಂಡೇಟಿನಿಂದ ಗಾಯಗೊಳಿಸಿದ್ದಾನೆ.
ಮಂಗಳವಾರ ಈ ಘಟನೆ ನಡೆದಿದ್ದು, ಈರುಳ್ಳಿ ಬಲು ದುಬಾರಿಯಾಗಿರುವುದರಿಂದ ಅದನ್ನು ಆಮ್ಲೆಟ್ ಗೆ ಬಳಸಲಾಗಲಿಲ್ಲ. ಆದರೆ ಅದರಿಂದ ಸಿಟ್ಟಿಗೆದ್ದ ಗ್ರಾಹಕ ತನ್ನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹೋಟೆಲ್ ಮಾಲೀಕ ದೀಪು ಕಶ್ಯಪ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಆದರೆ ಹಾಗೆ ಈರುಳ್ಳಿ ತಿನ್ನದೆ ಪಿತ್ತ ನೆತ್ತಿಗೇರಿಸಿಕೊಂಡ ವ್ಯಕ್ತಿಯೇನು ಕಡಿಮೆ ಆಸಾಮಿ ಅಲ್ಲ. ಅವನು ಹಳೆಯ ಕ್ರಿಮಿನಲ್ ಆಗಿದ್ದು ಹೆಸರು ಪೂಜಾರಿ. ತನ್ನ ನಾಲ್ವರು ಸಹಚರರೊಂದಿಗೆ ಹೋಟೆಲಿಗೆ ಬಂದ ಪೂಜಾರಿ ಈ ರಂಪಾಟ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಹೋಟೆಲ್ ಮಾಲೀಕ ದೀಪು ಕಶ್ಯಪನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹತ್ಯೆ ಯತ್ನ ಮತ್ತು ಸುಲಿಗೆ ಪ್ರಕರಣಗಳನ್ನು ಪೂಜಾರಿ ಮತ್ತು ಅವನ ನಾಲ್ವರು ಸಹಚರರ ವಿರುದ್ಧ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾ ನಿರೀಕ್ಷಕ ಅಶುತೋಷ್ ಪಾಂಡೆ IANS ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.












Click it and Unblock the Notifications