ಪರೀಕ್ಷೆಗೆ ಹೋಗಿದ್ದ ಯುವತಿ ವಾಪಸ್ ಆಗಿದ್ದು ಹೆಣವಾಗಿ: ಯುಪಿಯಲ್ಲಿ ದಲಿತ ಯುವತಿಯ ಹತ್ಯೆ
ನವದೆಹಲಿ, ಏಪ್ರಿಲ್. 17: ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಕಾಲೇಜು ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದ ಯುವತಿಯೊಬ್ಬರನ್ನು ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆಗೈದ ದುರಂತ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆತಂಕದ ವಿಷಯವೆಂದರೇ ಘಟನೆಯು ಪೊಲೀಸ್ ಠಾಣೆ ಹತ್ತಿರದಲ್ಲೇ ಸಂಭವಿಸಿದೆ.
ಸ್ಥಳೀಯ ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿ ಜನನಿಬಿಡ ರಸ್ತೆಯಲ್ಲಿ ದುರಂತ ಸಂಭವಿಸಿದೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಯುವತಿಯ ತಲೆಗೆ ಗುಂಡಯ ಹಾರಿಸಿ, ಗನ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೃತ ವಿದ್ಯಾರ್ಥಿನಿಯನ್ನು 21 ವರ್ಷದ ರೋಶ್ನಿ ಅಹಿರ್ವಾರ್ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಪರೀಕ್ಷೆ ಮುಗಿಸಿ ಐಟ್‌ನಲ್ಲಿರುವ ರಾಮ್ ಲಖನ್ ಪಟೇಲ್ ಮಹಾವಿದ್ಯಾಲಯದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ಸಂಭವಿಸಿದೆ. ಬಜಾಜ್ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಂಟ್ರಿಮೇಡ್ ಪಿಸ್ತೂಲ್‌ನೊಂದಿಗೆ ಆಕೆಯ ಬಳಿಗೆ ಬಂದು ಆಕೆಯ ತಲೆಗೆ ಗುಂಡು ಹಾರಿಸಿದ್ದು, ರೋಶ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಆರೋಪಿಗಳನ್ನು ಹಿಡಿಯಲು ಧಾವಿಸಿದ್ದಾರೆ. ಆದರೆ ಗನ್ ಎಸೆದು ಅವರು ಪರಾರಿಯಾಗಿದ್ದಾರೆ.
ಯುವತಿಯ ಪೋಷಕರು ರಾಜ್ ಅಹಿರ್ವಾರ್ ಎಂಬುವರ ವಿರುದ್ಧ ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವೈರಲ್ ಆಗಿದ್ದು, ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.
उत्तर प्रदेश के जालौन में बाइक सवार दो युवकों ने दिन दहाड़े एक छात्रा की गोली मारकर हत्या कर दी ।
— Rashtriya Janata Dal (@RJDforIndia) April 17, 2023
गोदी मीडिया के भेड़िए और भाजपाई क्या इस मौत को भी सेलिब्रेट करेंगे?
pic.twitter.com/rowX9Y2HzX
ಯುವತಿ ಕಾಲೇಜು ಸಮವಸ್ತ್ರದಲ್ಲಿದ್ದು, ಆಕೆಯ ಪಕ್ಕದಲ್ಲೇ ಪಿಸ್ತೂಲ್ ಕಾಣಿಸುತ್ತಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಷ್ಟ್ರೀಯ ಜನತಾ ದಳ ಕೂಡ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಯುಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

"ಉತ್ತರ ಪ್ರದೇಶದ ಜಲೌನ್‌ನಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ವಿದ್ಯಾರ್ಥಿನಿಯೊಬ್ಬಳನ್ನು ಹಾಡಹಗಲೇ ಗುಂಡಿಕ್ಕಿ ಕೊಂದಿದ್ದಾರೆ. ಗೋದಿ ಮಾಧ್ಯಮದ ತೋಳಗಳು ಮತ್ತು ಬಿಜೆಪಿಯವರು ಈ ಸಾವನ್ನೂ ಸಂಭ್ರಮಿಸುತ್ತಾರೆಯೇ?" ಎಂದು ಖಂಡಿಸಿದೆ.
ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು, ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದರು ಎಂದು ಜಲೌನ್ ಪೊಲೀಸ್ ವರಿಷ್ಠಾಧಿಕಾರಿ ಡಾ.ಇರಾಜ್ ರಾಜಾ ತಿಳಿಸಿದ್ದಾರೆ.












Click it and Unblock the Notifications