ಯುಪಿ: ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗೆ ಉತ್ತೇಜನ ನೀಡಿದ ಸಿಎಂ ಯೋಗಿ ಆದಿತ್ಯನಾಥ್
ಲಕ್ನೋ ಏಪ್ರಿಲ್ 5: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಎರಡು ದಿನಗಳ ಕಾಲ ಗೋರಖ್‌ಪುರಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಯೋಗಿ ಅವರು ಇಂಟರ್ ಕಾಲೇಜಿನಲ್ಲಿ ನಿರ್ಮಿಸುತ್ತಿರುವ ಕ್ರೀಡಾಂಗಣದ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. ಇದರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.
'ಖೇಲೋ ಇಂಡಿಯಾ' ಅಭಿಯಾನದಡಿ ದೇಶಾದ್ಯಂತ ಕ್ರೀಡಾ ಮನೋಭಾವ ಮತ್ತು ಸಂಸ್ಕೃತಿಯನ್ನು ಬೆಳೆಸಲಾಗುತ್ತಿದೆ. ಈ ಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹತ್ತು ಕೋಟಿ ವೆಚ್ಚದಲ್ಲಿ ಮೂರು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಕ್ರೀಡಾಂಗಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗೆ ಉತ್ತೇಜನ ನೀಡಲಿದ್ದಾರೆ.

UPPCL ಅನ್ನು ಈ ಕ್ರೀಡಾಂಗಣದ ನಿರ್ಮಾಣಕ್ಕಾಗಿ ಕಾರ್ಯನಿರ್ವಾಹಕ ಸಂಸ್ಥೆಯಾಗಿ ನಾಮನಿರ್ದೇಶನ ಮಾಡಲಾಗಿದೆ. ಕ್ರೀಡಾಂಗಣದ ಶಂಕುಸ್ಥಾಪನೆ ಸಮಾರಂಭಕ್ಕೆ ಆಡಳಿತ ಮಂಡಳಿಯಿಂದ ಸಿದ್ಧತೆ ನಡೆದಿದೆ. ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಡಿಎಂ ಕೃಷ್ಣ ಕರುಣೇಶ್ ತಿಳಿಸಿದ್ದಾರೆ. ಇದರಲ್ಲಿ ವೇದಿಕೆ, ಹೆಲಿಪ್ಯಾಡ್ ನಿರ್ಮಾಣ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಕಾರ್ಯಕ್ರಮದ ಬಗ್ಗೆ ಸಂಪೂರ್ಣ ನಿಗಾ ವಹಿಸಲಾಗಿದೆ.
ಕ್ರೀಡೆಗೆ ಹೆಚ್ಚಿನ ಮಹತ್ವ
ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಿದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಗೆದ್ದವರಿಗೆ ನಗದು ಬಹುಮಾನದೊಂದಿಗೆ ಸನ್ಮಾನಿಸುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಕಳೆದ ತಿಂಗಳು ಸಂಸದ್ ಖೇಲ್ ಮಹಾಕುಂಭದ ಸಮಾರೋಪ ಸಮಾರಂಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಭಾಗವಹಿಸಿ, ರಾಜ್ಯದಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಬಿಜೆಪಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

'ರಾಜ್ಯದಲ್ಲಿ ಕ್ರೀಡೆಯ ಅಭಿವೃದ್ಧಿಗೆ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಇದರ ಅಂಗವಾಗಿ ಆಟದ ಮೈದಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಗ್ರಾಮಗಳಲ್ಲಿ ಜಿಮ್ ಆರಂಭಿಸಲಾಗಿದೆ. ಮಾತ್ರವಲ್ಲದೆ ಜಿಲ್ಲಾ ಮಟ್ಟದಲ್ಲಿ ಕ್ರೀಡಾಂಗಣ, ಮಿನಿ ಸ್ಟೇಡಿಯಂ ನಿರ್ಮಾಣ ಮಾಡಲಾಗಿದೆ. 1994ರ ನಂತರ ಕ್ರೀಡಾ ಹಾಸ್ಟೆಲ್‌ಗಳಿಗೆ ಹೆಚ್ಚು ಖರ್ಚು ಮಾಡಿಲ್ಲ. ಆದರೆ ಇದೀಗ ಬಿಜೆಪಿ ಸರಕಾರ ಈ ಕ್ರಮಗಳನ್ನು ಕೈಗೊಂಡಿದೆ' ಎಂದು ಸಿಎಂ ಯೋಗಿ ಹೇಳಿದರು.
'ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ ಕ್ರೀಡೆಗೆ ಉತ್ತೇಜನ ನೀಡಲು ಉತ್ತರ ಪ್ರದೇಶ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಸಾಕಷ್ಟು ಹಣವನ್ನು ಮೀಸಲಿಡಲಾಗಿದೆ. ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಲು ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ' ಎಂದರು.
ಮಾತ್ರವಲ್ಲದೆ ತಮ್ಮ ಸರ್ಕಾರ ಕ್ರೀಡಾ ಪಟುಗಳಿಗೆ ಉಚಿತ ಎಸಿ 3 ದರ್ಜೆಯ ಪ್ರಯಾಣವನ್ನು ಒದಗಿಸುತ್ತಿದೆ. ದೇಶದ ಮೊದಲ ಪ್ರಮುಖ ಕ್ರೀಡಾ ವಿಶ್ವವಿದ್ಯಾಲಯ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯವನ್ನು ಮೀರತ್‌ನಲ್ಲಿ ಸ್ಥಾಪಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ಬಹುಮುಖ್ಯವಾಗಿ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೂ ನಗದು ಬಹುಮಾನದ ಪ್ರೋತ್ಸಾಹಧನ ಹೆಚ್ಚಿಸಲಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು. ಪ್ರತಿ ಸಂಸದೀಯ ಕ್ಷೇತ್ರದಿಂದ 2000 ರಿಂದ 2500 ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿ ನೀಡಲಾಗುತ್ತಿದೆ. ಎಲ್ಲಾ 80 ಲೋಕಸಭಾ ಕ್ಷೇತ್ರಗಳನ್ನು ನೋಡಿದರೆ ಈ ಸಂಖ್ಯೆ 2 ಲಕ್ಷಕ್ಕೆ ತಲುಪಲಿದೆ ಎಂದರು.

ಒಲಂಪಿಕ್ಸ್ ನ ಸಿಂಗಲ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದವರಿಗೆ 6 ಕೋಟಿ ರೂ, ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂಪಾಯಿ ಹಾಗೂ ಕಂಚಿನ ಪದಕ ವಿಜೇತರಿಗೆ 2 ಕೋಟಿ ರೂಪಾಯಿ, ಒಲಿಂಪಿಕ್ಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಸಿಎಂ ಯೋಗಿ ಹೇಳಿದರು.t












Click it and Unblock the Notifications