ಉತ್ತರಾಖಂಡ್ ಹಿಮಸ್ಫೋಟದಲ್ಲಿ ಪ್ರಾಣಹಾನಿಗೆ ಯುಎಸ್ ಸಂತಾಪ
ಡೆಹ್ರಾಡೂನ್, ಫೆಬ್ರವರಿ.09: ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟದ ಬೆನ್ನಲ್ಲೇ ಉಂಟಾದ ಹಿಮಪಾತದಿಂದ ಪ್ರಾಣಹಾನಿ ಸಂಭವಿಸಿದ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸಂತಾಪ ಸೂಚಿಸಿದೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದೆ.
ಈ ಸವಾಲಿನ ಸಮಯದಲ್ಲಿ ನಮ್ಮ ಭಾರತೀಯ ಸ್ನೇಹಿತರೊಂದಿಗೆ ನಮ್ಮ ಆಲೋಚನೆಗಳಿವೆ. ಮೃತರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇವೆ. ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿ ಹಾಗೂ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ" ಎಂದು ರಾಜ್ಯ ಇಲಾಖೆ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.
ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಜೋಶಿಮಠ್ ಪ್ರದೇಶದಲ್ಲಿ ಹಿಮಪರ್ವತ ಸ್ಫೋಟದಿಂದ ಅಲಕ್ ನಂದ್, ದೌಲಿಗಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 171ಕ್ಕೂ ಅಧಿಕ ಮಂದಿ ಕಾರ್ಮಿಕರು ನಾಪತ್ತೆ ಆಗಿದ್ದಾರೆ.

ಸುರಂಗದಲ್ಲಿ ಸಿಲುಕಿದ 35 ಕಾರ್ಮಿಕರು:
ಫೆ. 8ರ ರಾತ್ರಿ ಎಂಟು ಗಂಟೆಯವರೆಗೂ 26 ಮೃತದೇಹಗಳು ಪತ್ತೆಯಾಗಿವೆ. 171 ಜನರು ಇನ್ನೂ ಪತ್ತೆಯಾಗಿಲ್ಲ. ಸುಮಾರು 35 ಜನರು ಸುರಂಗದ ಒಳಗೆ ಇದ್ದಾರೆ ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಉತ್ತರಾಖಂಡ್ ನಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟಿಯನ್ ಗಡಿ ಪೊಲೀಸರ ತಂಡವು ಉತ್ತರಾಖಂಡ್ ನ ಹಲವು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಭಾರತೀಯ ಸೇನಾ ಪಡೆಯ 6 ತಂಡ ಮತ್ತು ನೌಕಾಪಡೆಯ ಆರು ತಂಡವನ್ನು ಕಾರ್ಯಾಚರಣೆಗಾಗಿ ಕಳುಹಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರಕ್ಕಾಗಿ 20 ಕೋಟಿ:
ಉತ್ತರಾಖಂಡ್ ನಲ್ಲಿ ಸಂಭವಿಸಿದ ಹಿಮನದಿ ಸ್ಫೋಟ ಮತ್ತು ಪ್ರವಾಹ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ರಕ್ಷಣಾ ಕಾರ್ಯಾಚರಣೆ ಅನುಕೂಲಕ್ಕಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 20 ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗುವುದು ಎಂದು ಘೋಷಿಸಿದರು.
ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವರು ಮತ್ತು ಉತ್ತರಾಖಂಡ್ ಸಂಸದರ ಸಭೆ ನಡೆಸಲಾಯಿತು ಉತ್ತರಾಖಂಡ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಯಾವ ಹಂತದಲ್ಲಿ ನಡೆಯುತ್ತಿದೆ ಎನ್ನುವುದರ ಕುರಿತು ಪ್ರಧಾನಿ ಮೋದಿ ಮಾಹಿತಿ ಪಡೆದುಕೊಂಡರು.












Click it and Unblock the Notifications