INDIA Vs NDA : 26 ವಿರೋಧ ಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಹೆಸರು : ಅರ್ಥವೇನು ಗೊತ್ತಾ?
ಬೆಂಗಳೂರು, ಜುಲೈ 18: 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯನ್ನು ಮಣಿಸಲು ರಣತಂತ್ರ ರೂಪಿಸಲು ಮತ್ತು ಒಗ್ಗಟ್ಟಿನ ಹೋರಾಟ ರೂಪಿಸಲು ಬೆಂಗಳೂರಿನಲ್ಲಿ ಸಭೆ ಸೇರಿರುವ 26 ವಿರೋಧ ಪಕ್ಷಗಳ ಒಕ್ಕೂಟವನ್ನು ಇಂಡಿಯಾ ಹೆಸರಿಡಲಾಗಿದೆ.
ಆಡಳಿತ ಪಕ್ಷವನ್ನು ಎದುರಿಸಲು ಪ್ರಯತ್ನಿಸುವ ಮೆಗಾ ವಿರೋಧ ಪಕ್ಷದ ಹೆಸರನ್ನು I-N-D-I-A ಅಥವಾ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ ಎಂದು ಕರೆಯಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಸಭೆಯ ಮೊದಲ ದಿನ ಅನೌಪಚಾರಿಕವಾಗಿತ್ತು, ಚರ್ಚೆಗಳ ಬಳಿಕ ಔತಣಕೂಟ ಇತ್ತು. ಆದರೆ ಮಂಗಳವಾರ, ಮಹಾಮೈತ್ರಿಕೂಟದ ಹೆಸರಿನ ಬಗ್ಗೆ ಚರ್ಚೆಯೊಂದಿಗೆ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಸೋಮವಾರ ನಡೆದ ಔತಣಕೂಟದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹೆಸರುಗಳನ್ನು ಸೂಚಿಸುವಂತೆ ತಿಳಿಸಲಾಗಿದ್ದು, ಈ ಕುರಿತು ಚರ್ಚಿಸಿ ಸಭೆಯಲ್ಲಿ ಒಮ್ಮತಕ್ಕೆ ಬಂದಿದ್ದು, ಎನ್‌ಡಿಎ ವಿರುದ್ಧ ಸ್ಪರ್ಧಿಸಲು ಇಂಡಿಯಾ ಹೆಸರಲ್ಲಿ 26 ಪಕ್ಷಗಳು ಒಗ್ಗಟ್ಟಾಗಿವೆ.
ಸೋನಿಯಾ ಗಾಂಧಿ ಅಧ್ಯಕ್ಷೆ
ಮೂಲಗಳ ಪ್ರಕಾರ, ಮಾಜಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಈ ಒಕ್ಕೂಟಕ್ಕೆ ಅಧ್ಯಕ್ಷರನ್ನಾಗಿ ಹೆಸರಿಸಲು ನಿರ್ಧರಿಸಲಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಚಾಲಕರಾಗಿದ್ದಾರೆ. ಗಾಂಧಿ ಅವರು 2004 ರಿಂದ 2014 ರವರೆಗೆ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಹೆಚ್ಚುವರಿಯಾಗಿ, ಎರಡು ಉಪಸಮಿತಿಗಳನ್ನು ರಚಿಸಲಾಗುತ್ತದೆ: ಒಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮತ್ತು ಸಂವಹನ ಅಂಶಗಳನ್ನು ಅಂತಿಮಗೊಳಿಸಲು, ಇನ್ನೊಂದು ಜಂಟಿ ವಿರೋಧದ ಕಾರ್ಯಕ್ರಮಗಳು, ರ್‍ಯಾಲಿಗಳು ಮತ್ತು ಸಮಾವೇಶಗಳನ್ನು ಯೋಜಿಸಲು ಎಂದು ತಿಳಿದು ಬಂದಿದೆ.
ಭಾಗವಹಿಸಿದ ಪ್ರಮುಖ ನಾಯಕರು
ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆಯಲ್ಲಿ ಸೋನಿಯಾ ಗಾಂಧಿ ಅವರಲ್ಲದೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಎಂಕೆ ಸ್ಟಾಲಿನ್, ನಿತೀಶ್ ಕುಮಾರ್, ಅರವಿಂದ್ ಕೇಜ್ರಿವಾಲ್, ಹೇಮಂತ್ ಸೊರೆನ್, ಮಮತಾ ಬ್ಯಾನರ್ಜಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಭಾಗವಹಿಸಿದ್ದಾರೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮೊದಲ ದಿನದ ವಿಪಕ್ಷ ಸಭೆಗೆ ಹಾಜರಾಗಲಿಲ್ಲ. ಪವಾರ್ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ., ಕುಮಾರಸ್ವಾಮಿ ಅವರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
"ಬಿಜೆಪಿ ವಿರುದ್ಧ ಹೋರಾಡಲು ಇಚ್ಛಾಶಕ್ತಿ ಮತ್ತು ಧೈರ್ಯ ಹೊಂದಿರುವ ಎಲ್ಲಾ ಪಕ್ಷಗಳಿಗೂ ಸ್ವಾಗತ" ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.
ಸಮಾನ ಮನಸ್ಕ ವಿರೋಧ ಪಕ್ಷಗಳು ಸಾಮಾಜಿಕ ನ್ಯಾಯ, ಅಂತರ್ಗತ ಅಭಿವೃದ್ಧಿ ಮತ್ತು ರಾಷ್ಟ್ರೀಯ ಕಲ್ಯಾಣದ ಕಾರ್ಯಸೂಚಿಯನ್ನು ಉತ್ತೇಜಿಸಲು ಒಟ್ಟಿಗೆ ಕೆಲಸ ಮಾಡುತ್ತವೆ. ದ್ವೇಷ, ವಿಭಜನೆ, ಆರ್ಥಿಕ ಅಸಮಾನತೆ ಮತ್ತು ಲೂಟಿಯ ನಿರಂಕುಶಾಧಿಕಾರ ಮತ್ತು ಜನವಿರೋಧಿ ರಾಜಕಾರಣದಿಂದ ಭಾರತದ ಜನರನ್ನು ಮುಕ್ತಗೊಳಿಸಲು ನಾವು ಬಯಸುತ್ತೇವೆ. ಈ ಭಾರತಕ್ಕಾಗಿ ನಾವು ಒಗ್ಗಟ್ಟಾಗುತ್ತೇವೆ"ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ವಿರೋಧ ಪಕ್ಷಗಳ ಸಭೆಗೆ ಪ್ರತ್ಯುತ್ತರವಾಗಿ ಬಿಜಪಿ ದೆಹಲಿಯಲ್ಲಿ ಮಂಗಳವಾರ ಎನ್‌ಡಿಎ ಪಕ್ಷಗಳ ಸಭೆ ನಡೆಸುತ್ತಿದೆ. ಇದರಲ್ಲಿ 38 ಪಕ್ಷಗಳು ಭಾಗಿಯಾಗಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.












Click it and Unblock the Notifications