ಬಜೆಟ್ 2020: ಗೃಹ ಸಾಲದ ಬಡ್ಡಿ ಮೇಲೆ ತೆರಿಗೆ ವಿನಾಯಿತಿ ಮತ್ತೊಂದು ವರ್ಷ ವಿಸ್ತರಣೆ
ನವದೆಹಲಿ, ಫೆಬ್ರವರಿ 1: ಗೃಹ ಸಾಲದ ಬಡ್ಡಿಯ ಮೇಲೆ 3.5 ಲಕ್ಷ ರೂ.ವರೆಗೂ ನೀಡಲಾಗುತ್ತಿರುವ ತೆರಿಗೆ ವಿನಾಯಿತಿಯನ್ನು 2021ರ ಮಾರ್ಚ್ 31ರವರೆಗೂ ವಿಸ್ತರಿಸಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಕಳೆದ ಬಜೆಟ್‌ನಲ್ಲಿ ಗೃಹ ಸಾಲದ ಬಡ್ಡಿಯ ಮೇಲಿನ ತೆರಿಗೆ ವಿನಾಯಿತಿಯ ಮಿತಿಯನ್ನು 2 ಲಕ್ಷ ರೂ.ದಿಂದ 3.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಈ ಬಾರಿ ಗರಿಷ್ಠ ಮಿತಿಯನ್ನು ಹೆಚ್ಚಿಸದೆ ಇದ್ದರೂ, ಪ್ರಸ್ತುತ ಇರುವ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ಆದಾಯ ತೆರಿಗೆ ಕಾನೂನಿನ ಪ್ರಕಾರ ಜನರು ಗೃಹ ಸಾಲದ ಮೇಲಿನ ಬಡ್ಡಿ ಪಾವತಿಯನ್ನು ತಮ್ಮ ಒಟ್ಟು ಆದಾಯದಲ್ಲಿನ ಕಡಿತ ಎಂದು ಘೋಷಿಸಿಕೊಳ್ಳಲು ಅವಕಾಶವಿದೆ. ಪ್ರಸ್ತುತ ನಿಮಯದಡಿ 3.5 ಲಕ್ಷ ರೂವರೆಗೂ ಬಡ್ಡಿ ಮೇಲೆ ವಿನಾಯಿತಿ ಪಡೆಯಬಹುದು. ಇಷ್ಟು ಹಣ ಕಡಿತವಾದ ಬಳಿಕವಷ್ಟೇ ಆದಾಯ ತೆರಿಗೆ ಅನ್ವಯವಾಗುತ್ತದೆ. ಮೊದಲು ಇದನ್ನು 2019-20ರ ಅವಧಿಗೆ ಮಾತ್ರ ನೀಡಲಾಗಿತ್ತು. ಈಗ ಮತ್ತೊಂದು ವರ್ಷ ವಿಸ್ತರಿಸಲಾಗಿದೆ.

2021ರ ಮಾರ್ಚ್ 31ರ ಒಳಗೆ 45 ಲಕ್ಷ ರೂ.ವರೆಗಿನ ಮೌಲ್ಯದ ಮನೆಗಾಗಿ ಗೃಹ ಸಾಲ ಪಡೆದುಕೊಂಡವರಿಗೆ ಇದರಿಂದ ಲಾಭವಾಗಲಿದೆ. ತಾವು ವಾಸವಿರುವ ಮನೆಗಳ ಗೃಹ ಸಾಲಕ್ಕೆ ಪಾವತಿಸಿದ ಬಡ್ಡಿಗೆ ಸಹ 2 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿ ಇದ್ದು, ಅದರ ಮೇಲೆ ಸೆಕ್ಷನ್ 80EEA ಅಡಿ ಹೆಚ್ಚುವರಿವಾಗಿ 1.5 ಲಕ್ಷ ರೂ. ತೆರಿಗೆ ವಿನಾಯಿತಿ ನೀಡಲಾಗುತ್ತಿದೆ.
ಸೆಕ್ಷನ್ 80ಸಿ ಅಡಿ ಅಸಲು ಮೊತ್ತದ 1.5 ಲಕ್ಷ ರೂ ಮಿತಿ ಮತ್ತು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿನ 2 ಲಕ್ಷ ರೂ. ಬಡ್ಡಿಯ ಮೇಲಿನ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಲಿದೆ ಅಥವಾ ಮಿತಿಯನ್ನು ಕೈಬಿಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.












Click it and Unblock the Notifications