ಉಜ್ಜಯಿನಿ ದೇವಸ್ಥಾನದಲ್ಲಿ ಗಾಳಿಗೆ ಪ್ರತಿಮೆ ನಾಶ, ಇದು ಸಿಎಂ ಚೌಹಾಣ್ ಸರ್ಕಾರ: ಕಾಂಗ್ರೆಸ್ ವ್ಯಂಗ್ಯ
ಭೋಪಾಲ್, ಮೇ 30: ಮಧ್ಯ ಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ 2022ರಲ್ಲಿ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಂಡಿದ್ದ ಬಹುಕೋಟಿ ವೆಚ್ಚದ ಮಹಾಕಾಲ್ ಲೋಕ ಕಾರಿಡಾರ್ ಭಾನುವಾರ ಮಧ್ಯಾಹ್ನ ಬೀಸಿದ ಬಿರುಗಾಳಿಯಿಂದ ಸಪ್ತಋಷಿಗಳ ಪ್ರತಿಮೆಗಳಿಗೆ ಹಾನಿಯಾಗಿದೆ. ಇದುವೇ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಆಡಳಿತ ವೈಖರಿ ಎಂದು ಕಾಂಗ್ರೆಸ್ ಟೀಕಿಸಿದೆ.
ಕೋಟಿಗಟ್ಟಲೇ ರೂಪಾಯಿ ವೆಚ್ಚದ ಪ್ರತಿಮೆಗಳು ಕೆಲವೇ ತಿಂಗಳುಗಳ ಬಳಿಕ ಕೇವಲ ಬಿರುಗಾಳಿಗೆ ಉರುಳಿವೆ. ಪ್ರತಿಮೆಗಳ ಕೈಗಳು, ತಲೆ ಮುರಿದಿವೆ. ಈ ಸಂಬಂಧ ಮಧ್ಯಪ್ರದೇಶದ ಕಾಂಗ್ರೆಸ್ ಟ್ವೀಟ್ ಮಾಡಿದ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದೆ. ಪ್ರತಿಮೆ ಲೋಕಾರ್ಪಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸರ್ಕಾರ ಕುರಿತು ಮಾತನಾಡಿದ್ದ ಭಾಷಣದ ವಿಡಿಯೋ ತುಣಕು ಹಂಚಿಕೊಂಡಿದೆ.

ಮಧ್ಯಪ್ರದೇಶದಲ್ಲಿನ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರದಿಂದ ಇಂತಹ ಋಷಿಮುನಿಗಳ ಪ್ರತಿಮೆ ಲೋಕಾರ್ಪಣೆ ಆಗಿದೆ. ಇಲ್ಲಿ ದಿವ್ಯ ಅಲೌಖಿಕ ದರ್ಶನ ಪಡೆದು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು. ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಇಂತದೊಂದು ಭವ್ಯತೆಗೆ ಸೃಷ್ಟಿಗೆ ಶ್ರಮಿಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ತಿಳಿಸಿ ಲೋಕಾರ್ಪಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು.
ಭಾನುವಾರ ಬೀಸಿದ ಬಿರುಗಾಳಿ ಸಹಿತ ಮಳೆಗೆ ದೇವಸ್ಥಾನದಲ್ಲಿ ಏಳು ಪ್ರತಿಮೆಗಳಲ್ಲಿ ಆರು ಸ್ಥಳಾಂತರಗೊಂಡಿವೆ. ಅಲ್ಲದೇ ಎರಡು ಹಾನಿಗೊಳಗಾಗಿವೆ. ಇದರ ಜೊತೆಗೆ ಬಿರುಗಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಕೇವಲ ಮಳೆ ಗಾಳಿ ಹೀಗೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಸ್ಥಾಪಿಸಿದ್ದ ಪ್ರತಿಮೆಗಳು ಉರುಳುತ್ತವೆ ಎಂದರೆ ಬಿಜೆಪಿ ಸರ್ಕಾರದ ಯೋಜನೆ, ಆಡಳಿತ ಕುರಿತು ಸಂಶಯ ವ್ಯಕ್ತವಾಗುತ್ತದೆ ಎಂದು ಕಾಂಗ್ರೆಸ್ ಕುಟುಕಿದೆ.

ಮಹಾಕಾಳೇಶ್ವರನ ಮೇಲೆಯೂ ದಾಳಿ?
ಬಿಜೆಪಿ ಸರ್ಕಾರವು ಮಹಾಕಾಳೇಶ್ವರನ ಮೇಲೆಯೂ ದಾಳಿ ನಡೆಸಿದೆ ಎಂದು ಕುಟುಕಿರುವ ಕಾಂಗ್ರೆಸ್ ಇದು ಶಿವರಾಜ್ ಚೌಹಾಣ್ ಸರ್ಕಾರದ ಆಡಳಿತ ಎಂದು ಟ್ವೀಟ್ ಮೂಲಕ ದೂರಿದೆ.
2022 ರ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಮಹಾಕಾಲ್ ಲೋಕ ದೇವಾಲಯದ ಕಾರಿಡಾರ್‌ನಲ್ಲಿ ಘಟನೆ ಸಂಭವಿಸಿದೆ. ದೇವಾಲಯದ ಕಾರಿಡಾರ್‌ನಲ್ಲಿ ಆರು ಪ್ರತಿಮೆಗಳನ್ನು ಅವುಗಳ ಪೀಠದಿಂದ ಸ್ಥಳಾಂತರಿಸಿರುವುದರಿಂದ ಯಾರಿಗೂ ಗಾಯಗಳಾಗಿಲ್ಲ.
ಇನ್ನೂ ಇದೆ ವೇಳೆ ಅಲ್ಲಿ ಸುಮಾರು 50 ಮರಗಳು ಹಾಗೂ ಹಲವು ವಿದ್ಯುತ್ ಕಂಬಗಳು ಧರೆಗುರುಳಿವೆ. ಮಹಾಕಾಲ್ ಲೋಕದಲ್ಲಿ 155 ವಿಗ್ರಹಗಳಿವೆ. ಹಾನಿಗೊಳಗಾದ ಮೂರ್ತಿಗಳನ್ನು ಗುತ್ತಿಗೆದಾರರೇ ದುರಸ್ತಿಗೊಳಿಸಿದ್ದಾರೆ. ಸಿಎಂ ಚೌಹಾಣ್ ಅವರು ಉಜ್ಜಯಿನಿ ಜಿಲ್ಲಾಧಿಕಾರಿ ಮತ್ತು ವಿಭಾಗೀಯ ಆಯುಕ್ತರಿಗೆ ಘಟನೆ ಪರಿಶೀಲನೆಗೆ ಸೂಚಿಸಿದ್ದರು.












Click it and Unblock the Notifications