ಸನಾತನ ಧರ್ಮದ ಬಗೆಗಿನ ಹೇಳಿಕೆ: ವ್ಯಾಪಕ ವಿರೋಧ, ಹೇಳಿಕೆಗೆ ಬದ್ಧ ಎಂದ ಉದಯನಿಧಿ ಸ್ಟಾಲಿನ್
ಸನಾತನ ಧರ್ಮದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಅವರು ನೀಡಿರುವ ಹೇಳಿಕೆ ಸದ್ಯ ಭಾರಿ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಪಕ್ಷದ ಮುಖಂಡರು, ಹಿಂದೂ ಧಾರ್ಮಿಕ ಮುಖಂಡರು ಈ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಉದಯನಿಧಿ ಸ್ಟಾಲಿನ್ ಚೆನ್ನೈನಲ್ಲಿ ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘವನ್ನು ಉದ್ದೇಶಿಸಿ ತಮ್ಮ ಭಾಷಣದಲ್ಲಿ ಮಾತನಾಡುತ್ತಾ, "ಸನಾತನ ಧರ್ಮವನ್ನು "ನಿರ್ಮೂಲನೆ ಮಾಡಬೇಕು" ಎಂದು ಹೇಳಿದರು, ಇದು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದರು. "ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ನಿರ್ಮೂಲನೆ ಮಾಡಬೇಕು. ಸೊಳ್ಳೆಗಳು, ಡೆಂಗ್ಯೂ ಜ್ವರ, ಮಲೇರಿಯಾ ಮತ್ತು ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು," ಎಂದು ಹೇಳಿದ್ದರು.

ಈ ಹೇಳಿಕೆ ನಂತರ ವಿವಾದದ ಸ್ವರೂಪ ಪಡೆದುಕೊಂಡಿತ್ತು, ಬಿಜೆಪಿ ಮುಖಂಡರು ಉದಯನಿಧಿ ವಿರುದ್ಧ ಮುಗಿಬಿದ್ದಿದ್ದರು, ಪಕ್ಷದ ವಕ್ತಾರರು ಅವರ ಹೇಳಿಕೆಯನ್ನು "ಜನಾಂಗೀಯ ಹತ್ಯೆಯ ಕರೆ" ಎಂದು ಕರೆದಿದ್ದರು. ಅಮಿತ್ ಶಾ, ಸಿಟಿ ರವಿ, ಅಮಿತ್ ಮಾಳವಿಯ ಸೇರಿದಂತೆ ಹಲವರು ಉದಯನಿಧಿ ಅವರ ಹೇಳಿಕೆಯನ್ನು ಟೀಕಿಸಿದ್ದರು.
ಹೇಳಿಕೆ ಬದ್ದ, ಏನೆ ಬಂದರೂ ಎದುರಿಸಲು ಸಿದ್ಧ!
ತಮ್ಮ ಹೇಳಿಕೆ ವಿವಾದವಾದ ಬಳಿಕ ಪ್ರತಿಕ್ರಿಯೆ ನೀಡಿದ್ದ ಉದಯನಿಧಿ ಸ್ಟಾಲಿನ್, ತನ್ನ ಹೇಳಿಕೆಗೆ ಬದ್ಧವಾಗಿದ್ದೇನೆ, ಈ ಬಗ್ಗೆ ಯಾವುದೇ ಪ್ರಕರಣಗಳನ್ನು ಎದುರಿಸಲು ಸಿದ್ಧವಿದ್ದೇನೆ ಎಂದು ಹೇಳಿದ್ದರು. ನಾನು ಸನಾತನ ಧರ್ಮವನ್ನು ಮಾತ್ರ ಟೀಕಿಸಿದ್ದೇನೆ ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದೇನೆ ಎಂದು ಪುನರುಚ್ಚರಿಸುತ್ತಿದ್ದೇನೆ. ಇದನ್ನು ನಾನು ನಿರಂತರವಾಗಿ ಹೇಳುತ್ತೇನೆ ಎಂದು ತಮಿಳುನಾಡು ಯುವ ಕಲ್ಯಾಣ ಮತ್ತು ಕ್ರೀಡಾ ಸಚಿವ ಉದಯನಿಧಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ನಕಲಿ ಸುದ್ದಿಗಳನ್ನು ಹರಡುತ್ತಿದೆ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಆಡಳಿತ ಪಕ್ಷವು ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಯಿಂದ ಹೆದರಿದೆ ಮತ್ತು ಜನರ ಗಮನವನ್ನು ತಿರುಗಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಉದಯನಿಧಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು "ಈ ದೇಶದ ಸಂಸ್ಕೃತಿ, ಇತಿಹಾಸ ಮತ್ತು ಸನಾತನ ಧರ್ಮವನ್ನು ಅವಮಾನಿಸಿದ್ದಾರೆ" ಎಂದು ಇಂಡಿಯಾ ಒಕ್ಕೂಟದ ಮೇಲೆ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮುಕ್ತ ಭಾರತ ಎಂದರೆ ಕಾಂಗ್ರೆಸಿಗರನ್ನು ಕೊಲ್ಲು ಎಂದಲ್ಲ!
ವಿಪಕ್ಷಗಳ ಟೀಕೆಗೆ ಉತ್ತರಿಸಿದ ಉದಯನಿಧಿ ಸ್ಟಾಲಿನ್, "ನಾನು ನರಮೇಧಕ್ಕೆ ಆಹ್ವಾನಿಸಿದ್ದೇನೆ ಎಂದು ಕೆಲವರು ಬಾಲಿಶವಾಗಿದ್ದಾರೆ ಮತ್ತು ಇತರರು ದ್ರಾವಿಡಂ ಅನ್ನು ರದ್ದುಗೊಳಿಸಬೇಕು ಎಂದು ಹೇಳುತ್ತಿದ್ದಾರೆ. ಅಂದರೆ ಡಿಎಂಕೆಯವರನ್ನು ಕೊಲ್ಲಬೇಕೆ? 'ಕಾಂಗ್ರೆಸ್ ಮುಕ್ತ ಭಾರತ' ಎಂದು ಪ್ರಧಾನಿ ಮೋದಿ ಹೇಳಿದಾಗ ಕಾಂಗ್ರೆಸ್ಸಿಗರನ್ನು ಕೊಲ್ಲಬೇಕೆ? ಸನಾತನ ಎಂದರೇನು? ಸನಾತನ ಎಂದರೆ ಯಾವುದನ್ನೂ ಬದಲಾಯಿಸಬಾರದು ಮತ್ತು ಎಲ್ಲವೂ ಶಾಶ್ವತ. ಆದರೆ ದ್ರಾವಿಡ ಮಾದರಿಯು ಬದಲಾವಣೆಗೆ ಕರೆ ನೀಡುತ್ತದೆ ಮತ್ತು ಎಲ್ಲರೂ ಸಮಾನರಾಗಿರಬೇಕು ಎಂದು ಹೇಳುತ್ತದೆ" ಎಂದು ಉದಯನಿಧಿ ಅವರು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.












Click it and Unblock the Notifications