'ನಾನು ಸಾವರ್ಕರ್ ಅಲ್ಲ ಗಾಂಧಿ' ಹೇಳಿಕೆಗೆ ರಾಹುಲ್ ಗಾಂಧಿಗೆ ಉದ್ಧವ್ ಠಾಕ್ರೆ ಎಚ್ಚರಿಕೆ
ಮಾಲೆಗಾಂವ್ ಮಹಾರಾಷ್ಟ್ರ ಮಾರ್ಚ್ 27: ವಿನಾಯಕ ಸಾವರ್ಕರ್ ಅವರನ್ನು ಅವಮಾನಿಸದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿರುವ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ಸಾವರ್ಕರ್ ಅವರನ್ನು ಕೀಳಾಗಿಸಿದರೆ ವಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಮೂಡಲಿದೆ ಎಂದು ಭಾನುವಾರ ಎಚ್ಚರಿಸಿದ್ದಾರೆ.
ಉದ್ಧವ್ ಠಾಕ್ರೆ ಅವರು ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸುತ್ತಾರೆ. ಹೀಗಾಗಿ ಅವರನ್ನು ಅವಮಾನಿಸದಂತೆ ಕಾಂಗ್ರೆಸ್ ನಾಯಕರನ್ನು ಕೇಳಿಕೊಂಡರು.

"ಸಾವರ್ಕರ್ ಅವರು 14 ವರ್ಷಗಳ ಕಾಲ ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಊಹಿಸಲಾಗದ ಚಿತ್ರಹಿಂಸೆ ಅನುಭವಿಸಿದರು. ನಾವು ನೋವುಗಳನ್ನು ಮಾತ್ರ ಓದಬಲ್ಲೆವು. ಇದು ತ್ಯಾಗದ ಒಂದು ರೂಪವಾಗಿದೆ. ಸಾವರ್ಕರ್ ಅವರ ಅವಮಾನವನ್ನು ನಾವು ಸಹಿಸುವುದಿಲ್ಲ" ಎಂದು ಉದ್ಧವ್ ಠಾಕ್ರೆ ಹೇಳಿದರು.
ರಾಹುಲ್ ಗಾಂಧಿಯವರು ಸಾವರ್ಕರ್ ಅವರನ್ನು ಕೀಳಾಗಿ ಕಾಣುವುದನ್ನು ಮುಂದುವರಿಸಿದರೆ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕುಗಳು ಉಂಟಾಗುತ್ತವೆ ಎಂದು ಅವರು ಹೇಳಿದರು. "ವೀರ್ ಸಾವರ್ಕರ್ ನಮ್ಮ ದೇವರು ಮತ್ತು ಅವರಿಗೆ ಯಾವುದೇ ಅಗೌರವವನ್ನು ಸಹಿಸಲಾಗುವುದಿಲ್ಲ. ನಾವು ಹೋರಾಡಲು ಸಿದ್ಧರಿದ್ದೇವೆ. ಆದರೆ ನಮ್ಮ ದೇವರನ್ನು ಅವಮಾನಿಸುವುದನ್ನು ನಾವು ಸಹಿಸುವುದಿಲ್ಲ" ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥರು ಹೇಳಿದ್ದಾರೆ.
"ಉದ್ಧವ್ ಬಣ, ಕಾಂಗ್ರೆಸ್ ಮತ್ತು ಎನ್‌ಸಿಪಿಯ ಮೈತ್ರಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮಾಡಲ್ಪಟ್ಟಿದೆ. ಹೀಗಾಗಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ರಾಹುಲ್ ಗಾಂಧಿಯನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಲಾಗುತ್ತಿದೆ. ಆದರೆ ನಾವು ಇದರಲ್ಲಿ ಸಮಯ ವ್ಯರ್ಥ ಮಾಡಿದರೆ, ಪ್ರಜಾಪ್ರಭುತ್ವಕ್ಕೆ ತೊಂದರೆಯಾಗುತ್ತದೆ" ಎಂದು ಮಾಲೆಗಾಂವ್‌ನಲ್ಲಿ ರ್‍ಯಾಲಿ ಉದ್ಧವ್ ಠಾಕ್ರೆ ಹೇಳಿದರು.

ರಾಹುಲ್ ಗಾಂಧಿ ಹೇಳಿದ್ದೇನು?
'ದೇಶದಲ್ಲಿರುವ ಕಳ್ಳರ ಹೆಸರುಗಳು ಮೋದಿ ಅಂತ ಯಾಕಿದೆ?' ಎಂದು ರಾಹುಲ್ ಗಾಂಧಿ ವೇದಿಕೆಯಲ್ಲಿ ಪ್ರಶ್ನೆ ಮಾಡಿದ್ದರು. ಈ ಹೇಳಿಕೆಗಾಗಿ ರಾಹುಲ್ ಗಾಂಧಿ ಅವರನ್ನು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸೂರತ್ ನ್ಯಾಯಾಲಯದ ಆದೇಶದ ನಂತರ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯರಾಗಿ ಅನರ್ಹಗೊಳಿಸಲಾಯಿತು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಜೊತೆಗೆ ಕ್ಷಮೆಯಾಚನೆಗೆ ಒತ್ತಾಯಿಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ನನ್ನ ಹೆಸರು ಸಾವರ್ಕರ್ ಅಲ್ಲ, ನನ್ನ ಹೆಸರು ಗಾಂಧಿ ಮತ್ತು ಗಾಂಧಿ ಯಾರಿಗೂ ಕ್ಷಮೆ ಕೇಳುವುದಿಲ್ಲ" ಎಂದು ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಯ ನಂತರ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಶನಿವಾರ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದರು.

ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಉದ್ಧವ್ ಕಿಡಿ
ಉದ್ಧವ್ ಠಾಕ್ರೆ, ಅವರ ಸೇನಾ ಬಣವು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಮಿತ್ರ ಪಕ್ಷವಾಗಿದೆ. ರಾಹುಲ್ ಗಾಂಧಿಯವರು ಪ್ರಚೋದನೆಗೆ ಒಳಗಾಗಬೇಡಿ. ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ಒಟ್ಟಾಗಿ ಬನ್ನಿ ಎಂದು ಒತ್ತಾಯಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರಾಹುಲ್ ಗಾಂಧಿಯವರ ಟೀಕೆಗೆ ಸಂಬಂಧಿಸಿದಂತೆ ಬಿಜೆಪಿ ವಾದವನ್ನು ತೀವ್ರವಾಗಿ ಟೀಕಿಸಿದ ಉದ್ಧವ್ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿ ಭಾರತವಲ್ಲ ಎಂದು ಹೇಳಿದ್ದಾರೆ. ಮೋದಿ ಭಾರತವಲ್ಲ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರಾ?, ಮೋದಿಯನ್ನು ಪ್ರಶ್ನಿಸುವುದು ಬಿಟ್ಟು ಭಾರತವನ್ನು ಅವಮಾನಿಸುವುದಲ್ಲ ಎಂದರು.












Click it and Unblock the Notifications