Nipah Virus: ಕೇರಳದಲ್ಲಿ ನಿಪಾ ವೈರಸ್‌ಗೆ ಇಬ್ಬರು ಸಾವು: ಖಚಿತಪಡಿಸಿದ ಕೇಂದ್ರ ಆರೋಗ್ಯ ಸಚಿವ
ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಪಾಹ್ ವೈರಸ್ ನಿಂದ ಎರಡು ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ನಿಪಾ ವೈರಸ್ ಸೋಂಕಿನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಕೇಂದ್ರ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

"ನಾನು ಕೇರಳದ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ, ಈ ಋತುವಿನಲ್ಲಿ ಹಲವಾರು ಬಾರಿ ಈ ವೈರಸ್‌ನ ವರದಿಗಳು ಬಂದಿವೆ. ಪ್ರಕರಣಗಳು ಬರುತ್ತಿವೆ, ಈ ವೈರಸ್ ಬಾವಲಿಗಳಿಂದ ಹರಡುತ್ತದೆ. ಈ ಬಗ್ಗೆ ಆರೋಗ್ಯ ಸಚಿವಾಲಯವು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಎಂದು ಸೂಚನೆ ನೀಡಲಾಗಿದೆ" ಎಂದು ಮಾಂಡವಿಯಾ ಹೇಳಿದರು.
Union Health Minister Mansukh Mandaviya says two deaths in Kerala's Kozhikode confirmed to have been caused by Nipah virus
— Press Trust of India (@PTI_News) September 12, 2023
ಇಬ್ಬರು ನಿಪಾ ವೈರಸ್‌ಗೆ ಬಲಿ
ಅಧಿಕೃತ ಮೂಲಗಳ ಪ್ರಕಾರ, ಮಾರಣಾಂತಿಕ ವೈರಸ್ ಪರೀಕ್ಷಿಸಲು ಕೇರಳದ ಇನ್ನೂ ನಾಲ್ವರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಸೋಮವಾರ ಮುಂಜಾನೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಕೋಝಿಕ್ಕೋಡ್‌ಗೆ ಆಗಮಿಸಿದ್ದು, ನಿಪಾಹ್ ವೈರಸ್ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಶಂಕಿತ ನಿಪಾ ಪೀಡಿತರ 75 ಸದಸ್ಯರ ಪ್ರಾಥಮಿಕ ಸಂಪರ್ಕ ಪಟ್ಟಿಯನ್ನು ಸದ್ಯಕ್ಕೆ ಸಿದ್ಧಪಡಿಸಲಾಗಿದೆ ಎಂದು ಸಚಿವ ಮಾಂಡವಿಯಾ ಖಚಿತಪಡಿಸಿದರು. ಎರಡು ಸಾವುಗಳು ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ಮೃತರ ಪೈಕಿ ಒಬ್ಬರ ಸಂಬಂಧಿಕರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ಕೇರಳ ಆರೋಗ್ಯ ಇಲಾಖೆ ತಿಳಿಸಿದೆ.
ಮೊದಲ ಸಾವು ಆಗಸ್ಟ್ 30 ರಂದು ಮತ್ತು ಎರಡನೇ ಸಾವು ಸೋಮವಾರ ಸಂಭವಿಸಿದೆ. ಆರೋಗ್ಯ ಸಚಿವರು ಸ್ಥಳೀಯ ಆರೋಗ್ಯ ಕಾರ್ಯಕರ್ತರಿಗೆ ತೀವ್ರ ನಿಗಾ ಇರಿಸುವಂತೆ ಸೂಚಿಸಿದ್ದಾರೆ. ಕೇರಳದಲ್ಲಿ ಮತ್ತೆ ನಿಪಾ ವೈರಸ್ ಕಾಣಿಸಿಕೊಂಡಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications