ತಿಮ್ಮಪ್ಪನ ಭಕ್ತರಿಗೆ 2 ಲಕ್ಷ ಜೀವವಿಮೆ: TTDಯಿಂದ ದೇಶದಲ್ಲೇ ಮೊದಲ ಮಹತ್ವದ ನಿರ್ಧಾರ!
ತಿರುಮಲ ಶ್ರೀವಾರಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಟಿಟಿಡಿ ಆಡಳಿತ ಮಂಡಳಿ ವಿಮೆ ಸೌಲಭ್ಯವನ್ನು ಘೋಷಣೆ ಮಾಡಿದೆ. ತಿರುಮಲಕ್ಕೆ ಆಗಮಿಸುವ ಭಕ್ತರಿಗೆ ಮಹತ್ವದ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ನೈಸರ್ಗಿಕ ಕಾರಣಗಳಿಂದ ಮೃತಪಟ್ಟ ಭಕ್ತರ ಕುಟುಂಬಕ್ಕೆ ₹2 ಲಕ್ಷ ವಿಮಾ ಪರಿಹಾರ ನೀಡಲು ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿ ಅನುಮೋದನೆ ನೀಡಿದೆ. ದೇಶದಲ್ಲೇ ಇದೇ ಮೊದಲ ಬಾರಿಗೆ ಇಂತಹ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು TTD ತಿಳಿಸಿದೆ.
ಸೆಪ್ಟೆಂಬರ್ 9, 2026ರಂದು ನಡೆದ TTD ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಾರ್ಷಿಕ ಶ್ರೀ ವೆಂಕಟೇಶ್ವರ ಸ್ವಾಮಿಯ ಸಾಲಕಟ್ಲ ಬ್ರಹ್ಮೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಿರುಮಲಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆ ಮತ್ತು ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ನೈಸರ್ಗಿಕ ಸಾವಿಗೂ ₹2 ಲಕ್ಷ ವಿಮೆ
ತಿರುಮಲದಲ್ಲಿ ಯಾತ್ರೆಯ ವೇಳೆ ನೈಸರ್ಗಿಕ ಕಾರಣಗಳಿಂದ ಯಾವುದೇ ಭಕ್ತರು ಮೃತಪಟ್ಟರೆ, ಅವರ ಕುಟುಂಬಕ್ಕೆ ₹2 ಲಕ್ಷದ ವಿಮಾ ಮೊತ್ತ ದೊರೆಯಲಿದೆ. ದೇಶದ ಯಾವುದೇ ಪ್ರಮುಖ ತೀರ್ಥಕ್ಷೇತ್ರದಲ್ಲಿ ಈ ರೀತಿಯ ವ್ಯವಸ್ಥೆ ಇಲ್ಲ ಎಂಬುದು TTD ಮಂಡಳಿಯ ನಿರ್ಧಾರದ ವಿಶೇಷತೆಯಾಗಿದೆ.
TTD ಅಧ್ಯಕ್ಷ ಬಿ.ಆರ್. ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮುದ್ದಾಡ ರವಿಚಂದ್ರ ಸೇರಿದಂತೆ ಮಂಡಳಿ ಸದಸ್ಯರು ಭಾಗವಹಿಸಿದ್ದರು.
TTD ಸಿಬ್ಬಂದಿ ಕುಟುಂಬಕ್ಕೂ ವಿಮಾ ಮೊತ್ತ ಹೆಚ್ಚಳ
ಭಕ್ತರಿಗೆ ವಿಮಾ ಸೌಲಭ್ಯ ಕಲ್ಪಿಸುವುದರ ಜೊತೆಗೆ TTD ಸಿಬ್ಬಂದಿಯ ಕುಟುಂಬಗಳಿಗೂ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ತಿರುಮಲದಲ್ಲಿ ಅಪಘಾತದಿಂದ ಮೃತಪಟ್ಟ TTD ನೌಕರರ ಕುಟುಂಬಕ್ಕೆ ನೀಡಲಾಗುತ್ತಿದ್ದ ಅಪಘಾತ ವಿಮಾ ಮೊತ್ತವನ್ನು ₹3 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಇದರಿಂದ ಕರ್ತವ್ಯದ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟ ನೌಕರರ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಭದ್ರತೆ ದೊರೆಯಲಿದೆ.
ನಿವೃತ್ತ NPS, CPS ಪಿಂಚಣಿದಾರರಿಗೂ ಆರೋಗ್ಯ ಸೌಲಭ್ಯ
ನಿವೃತ್ತ CPS ಮತ್ತು NPS ಪಿಂಚಣಿದಾರರು ಹಾಗೂ ಅವರ ಕುಟುಂಬದ ಸದಸ್ಯರಿಗೆ Employee Health Facility (EHF) ಸೌಲಭ್ಯ ವಿಸ್ತರಿಸಲು ಮಂಡಳಿ ಅನುಮೋದನೆ ನೀಡಿದೆ. ಈ ಸೌಲಭ್ಯವನ್ನು OPS ಪಿಂಚಣಿದಾರರಿಗೆ ನೀಡಲಾಗುತ್ತಿರುವ ಮಾದರಿಯಲ್ಲೇ ಕಲ್ಪಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ TTDಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 48 SLPMC ಸಿಬ್ಬಂದಿಯ ವೇತನ ಹೆಚ್ಚಳಕ್ಕೂ ಮಂಡಳಿ ಒಪ್ಪಿಗೆ ನೀಡಿದೆ.
ಸ್ವಚ್ಛತೆ, ಜನದಟ್ಟಣೆ ನಿರ್ವಹಣೆಗೆ ₹1.60 ಕೋಟಿ
ಬ್ರಹ್ಮೋತ್ಸವದ ಸಂದರ್ಭದಲ್ಲಿ ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಸ್ವಚ್ಛತೆ ಮತ್ತು ಜನದಟ್ಟಣೆ ನಿರ್ವಹಣೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿ ನೈರ್ಮಲ್ಯ ಸಿಬ್ಬಂದಿಯ ಸಾರಿಗೆ ವೆಚ್ಚಕ್ಕಾಗಿ ಮೂರು ವರ್ಷಗಳ ಅವಧಿಗೆ ₹1.60 ಕೋಟಿ ಮಂಜೂರು ಮಾಡಲಾಗಿದೆ.
ಅಲ್ಲದೆ, ಲಡ್ಡು ಪ್ರಸಾದಕ್ಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು 400 ಹೆಚ್ಚುವರಿ ಹೊರಗುತ್ತಿಗೆ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಇದರಿಂದ ಲಡ್ಡು ತಯಾರಿಕೆ ಮತ್ತು ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ.
ಅನ್ನದಾನ ಕೇಂದ್ರಗಳ ತ್ಯಾಜ್ಯದಿಂದ ಬಯೋಗ್ಯಾಸ್
TTD ಮಂಡಳಿ ಮತ್ತೊಂದು ಮಹತ್ವದ ಪರಿಸರ ಸ್ನೇಹಿ ಯೋಜನೆಗೂ ಅನುಮೋದನೆ ನೀಡಿದೆ. ಅನ್ನಪ್ರಸಾದ ಕೇಂದ್ರಗಳು, ಕ್ಯಾಂಟೀನ್‌ಗಳು ಹಾಗೂ ಹೋಟೆಲ್‌ಗಳಿಂದ ಉತ್ಪತ್ತಿಯಾಗುವ ಆಹಾರ ತ್ಯಾಜ್ಯವನ್ನು ಬಳಸಿಕೊಂಡು ಬಯೋಗ್ಯಾಸ್ ಘಟಕ ಸ್ಥಾಪಿಸಲು IOCL ನೀಡಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ. ಈ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು GPS Renewables ಸಂಸ್ಥೆಗೆ ನೀಡಲಾಗಿದ್ದು, ಇದಕ್ಕಾಗಿ ₹2.80 ಕೋಟಿ ವೆಚ್ಚವಾಗಲಿದೆ.


Click it and Unblock the Notifications
