Tripura Election Results 2023 : ತ್ರಿಪುರಾ ಮತ ಏಣಿಕೆ; 39 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ
ಅಗರ್ತಲ, ಮಾರ್ಚ್ 02: ತ್ರಿಪುರಾ ವಿಧಾನಸಭಾ ಚುನಾವಣೆ ಕುರಿತ ಎಲ್ಲಾ ಎಕ್ಸಿಟ್ ಪೋಲ್‌ಗಳು ಬಿಜೆಪಿ ಮತ್ತು ಅದರ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಕ್ಕೆ ಭಾರಿ ಜನಾದೇಶವನ್ನು ನೀಡಿವೆ. ಎಕ್ಸಿಟ್ ಪೋಲ್ ಭವಿಷ್ಯವಾಣಿಯ ಪ್ರಕಾರ 60 ಸ್ಥಾನಗಳ ಪೈಕಿ ಬಿಜೆಪಿ ಮೈತ್ರಿ ಕೂಟವು ಸುಮಾರು 40 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಇದೇ ರೀತಿ ಮತ ಏಣಿಕೆ ಆರಂಭದಲ್ಲೇ ತ್ರಿಪುರಾದಲ್ಲಿ 60 ಸ್ಥಾನಗಳ ಪೈಕಿ ಬಿಜೆಪಿ 39 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ರಾಜ್ಯದಲ್ಲಿ ಬಿಜೆಪಿ - ಐಪಿಎಫ್‌ಟಿ ಮೈತ್ರಿಗೆ ಎಡ ಪಕ್ಷಗಳು - ಕಾಂಗ್ರೆಸ್ ಮೈತ್ರಿ ಮತ್ತು ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ನೇತೃತ್ವದ ಪ್ರಾದೇಶಿಕ ಪಕ್ಷವಾದ ತಿಪ್ರಾ ಮೋಥಾ ಸವಾಲಾಗಿದೆ. ಎಕ್ಸಿಟ್ ಪೋಲ್‌ಗಳು ಸಿಪಿಎಂ ಎರಡಂಕಿಯ ಸಂಖ್ಯೆಯನ್ನು ಪಡೆಯಬಹುದು ಎಂದಿದ್ದು, ಕಾಂಗ್ರೆಸ್ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದೆ.

ಮತ ಏಣಿಕೆ ಆರಂಭಿಕ ಟ್ರೆಂಡ್‌ಗಳ ಪ್ರಕಾರ ಬಿಜೆಪಿ 39 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿ 15 ಸ್ಥಾನಗಳಲ್ಲಿ ಮತ್ತು ತಿಪ್ರಾ ಮೋಥಾ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆರಂಭಿಕ ಮುನ್ನಡೆಗಳು ಬಿಜೆಪಿಗೆ ಬಹುಮತದ ಗುರಿಯತ್ತ ಸಾಗಿಸುತ್ತಿವೆ.
60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸ್ಥಾನಗಳು ಬೇಕು. ಇವು ಕೇವಲ ಆರಂಭಿಕ ಮುನ್ನಡೆಗಳು. ತ್ರಿಪುರಾದಲ್ಲಿ ಚುನಾವಣಾ ಆಯೋಗವು ಯಾವುದೇ ಸ್ಥಾನಗಳ ಫಲಿತಾಂಶವನ್ನು ಪ್ರಕಟಿಸಿಲ್ಲ.

ಇನ್ನು, ತ್ರಿಪುರಾ ರಾಜ್ಯದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸರು ನೋಡಿಕೊಳ್ಳುತ್ತಿದ್ದು ಧ್ವಜ ಮೆರವಣಿಗೆ ಮತ್ತು ಪ್ರದೇಶದ ಪ್ರಾಬಲ್ಯ ಗಸ್ತು ನಡೆಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಫಲಿತಾಂಶ ಪ್ರಕಟವಾಗುವ ಹಿನ್ನೆಲೆ ಹಿಂಸಾಚಾರದ ಘಟನೆಗಳನ್ನು ತಡೆಯಲು ತ್ರಿಪುರಾದ ಎಲ್ಲಾ 60 ವಿಧಾನಸಭಾ ಕ್ಷೇತ್ರಗಳಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ನೂರಾರು ಶಾಂತಿ ಸಭೆಗಳನ್ನು ನಡೆಸಿದ್ದಾರೆ.












Click it and Unblock the Notifications