Tripura Election Results 2023: ತ್ರಿಪುರಾದಲ್ಲಿ ಗೆಲುವು ಸಾಧಿಸಿದ ಸಿಎಂ ಮಾಣಿಕ್ ಸಹಾ
ಮಾಣಿಕ್ ಸಹಾ 2016 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 2022 ರಲ್ಲಿ ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಗರ್ತಲ, ಮಾರ್ಚ್ 02: ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಟೌನ್ ಬರ್ಡೋವಾಲಿ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಆಶಿಶ್ ಕುಮಾರ್ ಸಹಾ ಅವರನ್ನು 1,257 ಮತಗಳಿಂದ ಸೋಲಿಸಿದ್ದಾರೆ.
ಟೌನ್ ಬರ್ಡೋವಾಲಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು ತಮ್ಮ ಗೆಲುವಿನ ಪ್ರಮಾಣಪತ್ರವನ್ನು ಪಡೆದು, ಸಂತಸ ಹಂಚಿಕೊಂಡಿದ್ದಾರೆ. " ನನ್ನ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಈ ಪ್ರಮಾಣ ಪತ್ರ ಪಡೆಯುತ್ತಿದ್ದೇನೆ. ಇದಕ್ಕಿಂತ ಒಳ್ಳೆಯ ವಿಷಯ ಏನಿದೆ..?" ಎಂದು ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಮಾಹಿತಿ ಪ್ರಕಾರ ಬಿಜೆಪಿ ಮತ್ತು ಅದರ ಮಿತ್ರಪಕ್ಷ 34 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಭಾರತೀಯ ಜನತಾ ಪಕ್ಷ ಮತ್ತು ಅದರ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (IPFT) 60 ಸ್ಥಾನಗಳಲ್ಲಿ 34 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಬಹುಮತದ ಗಡಿ ದಾಟಿದೆ. 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ ಬಹುಮತ 31 ಸ್ಥಾನಗಳು. ಎಕ್ಸಿಟ್ ಪೋಲ್‌ಗಳು ರಾಜ್ಯದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಬಿಜೆಪಿಗೆ ಸ್ಪಷ್ಟವಾದ ಜನಾದೇಶ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ.
*ಮಾಣಿಕ್ ಸಹಾ ಪರಿಚಯ?*
ದಂತ ಶಸ್ತ್ರಚಿಕಿತ್ಸಕ, ರಾಜಕಾರಣಿ ಮಾಣಿಕ್ ಸಹಾ ಅವರು 2022 ರಲ್ಲಿ ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಬಿಪ್ಲಬ್ ಕುಮಾರ್ ದೇಬ್ ಅವರು ರಾಜ್ಯ ಚುನಾವಣೆಗಳಿಗೆ ಒಂದು ವರ್ಷ ಇರುವಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 70 ವರ್ಷದ ಮಾಜಿ ಕಾಂಗ್ರೆಸ್ ನಾಯಕ ಕೇವಲ ಆರು ವರ್ಷಗಳ ಹಿಂದೆ ಬಿಜೆಪಿಗೆ ಸೇರಿದ್ದರೂ ಇದ್ದಕ್ಕಿದ್ದಂತೆ ಉನ್ನತ ಸ್ಥಾನದಲ್ಲಿ ಆಸೀನರಾದರು.

ಮಾಣಿಕ್ ಸಹಾ ಅವರು ಮುಖ್ಯಮಂತ್ರಿಯಾಗುವ ಮೊದಲು ತ್ರಿಪುರಾದಲ್ಲಿ ಏಕೈಕ ರಾಜ್ಯಸಭಾ ಸ್ಥಾನವನ್ನು ಹೊಂದಿದ್ದರು. ಅವರು ಟೌನ್ ಬೋರ್ಡೋವಾಲಿ ಕ್ಷೇತ್ರದಿಂದ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಮಾಣಿಕ್ ಸಹಾ 2016 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 2020 ರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. 2022 ರಲ್ಲಿ ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಿಎಂ ಮಾಣಿಕ್ ಸಹಾ ಅವರು ತಮ್ಮ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿಯನ್ನು ಪಾಟ್ನಾದ ಸರ್ಕಾರಿ ಡೆಂಟಲ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ತ್ರಿಪುರಾ ವೈದ್ಯಕೀಯ ಕಾಲೇಜು ಮತ್ತು ಅಗರ್ತಲಾದ ಬಿಆರ್ ಅಂಬೇಡ್ಕರ್ ಸ್ಮಾರಕ ಬೋಧನಾ ಆಸ್ಪತ್ರೆಯಲ್ಲಿ ದಂತ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿದ್ದರು. ಇದರ ಜೊತೆಗೆ ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರು ಮತ್ತು ಮಾಜಿ ಬ್ಯಾಡ್ಮಿಂಟನ್ ಆಟಗಾರರಾಗಿದ್ದರು. ಮಾಣಿಕ್ ಸಹಾ ತಮ್ಮ ಕ್ಲೀನ್ ಇಮೇಜ್ ಮತ್ತು ಪ್ರಾಮಾಣಿಕ ರಾಜಕಾರಣಕ್ಕಾಗಿ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದಾರೆ.












Click it and Unblock the Notifications