Wayanad Landslide: ವಯನಾಡ್ ದುರಂತ- ಮೃತರಲ್ಲಿ 18 ಮಂದಿ ಕರ್ನಾಟಕದವರು!
ಕೇರಳದ ವಯನಾಡು ಭೂಕುಸಿತದಲ್ಲಿ ಕುಟುಂಬಸ್ಥರನ್ನು ಹಾಗೂ ಮನೆಯನ್ನು ಕಳೆದುಕೊಂಡು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ವಯನಾಡಿನಲ್ಲಿ ಕರ್ನಾಟಕದವರು ವಾಸವಾಗಿದ್ದು ಭೂಕುಸಿತ ದುರಂತದಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ.
ಕರ್ನಾಟಕದ ಒಟ್ಟು 18 ಜನ ವಯನಾಡು ದುರಂತದಲ್ಲಿ ಬಲಿಯಾಗಿದ್ದಾರೆ. ಈ ಪೈಕಿ ಮೈಸೂರಿನ ಒಂಬತ್ತು, ಚಾಮರಾಜನಗರದ ನಾಲ್ವರು, ಮಂಡ್ಯದ ಇಬ್ಬರು ಮತ್ತು ಕೊಡಗು ಜಿಲ್ಲೆಯ ಮೂವರು ಸೇರಿದ್ದಾರೆ. ಈವರೆಗೆ ಐವರ ಮೃತದೇಹಗಳನ್ನು ಗುರುವಾರ ಗುರುತಿಸಲಾಗಿದೆ.

ಮೈಸೂರಿನ ಸಾವಿತ್ರಿ (54) ಮತ್ತು ಚೂರಲ್ಮಳ ನಿವಾಸಿ ಶಿವಣ್ಣ (50), ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕತ್ತರಗಟ್ಟ ಗ್ರಾಮದ ಮುಂಡಕ್ಕೈ ನಿವಾಸಿಗಳಾದ ಲೀಲಾವತಿ (55) ಮತ್ತು ಮೊಮ್ಮಗ ನಿಹಾಲ್ (2.5), ಚಾಮರಾಜನಗರದ ನಿವಾಸಿ ರಾಜೇಂದ್ರ (50) ಅವರ ಮೃತ ದೇಹವನ್ನು ಪತ್ತೆ ಮಾಡಲಾಗಿದೆ.
ಲೀಲಾವತಿ ಮತ್ತು ನಿಹಾಲ್ ಅವರ ಮೃತದೇಹಗಳನ್ನು ಮಂಡ್ಯಕ್ಕೆ ತರಲು ಮಂಡ್ಯ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಉಳಿದವರ ಅಂತ್ಯಸಂಸ್ಕಾರವನ್ನು ಮೆಪ್ಪಾಡಿಯಲ್ಲಿ ಸಾಮೂಹಿಕವಾಗಿ ಮಾಡಲಾಯಿತು.

ವಯನಾಡು ಭೂಕುಸಿತದಲ್ಲಿ ಬಲಿಯಾದ ಕೊಡಗು ಜನ
ವಯನಾಡು ದುರಂತದಲ್ಲಿ ಕೊಡಗಿನ ಕೆಲ ಜನ ಮೃತಪಟ್ಟಿದ್ದಾರೆ. ಮುಂಡಕೈಯಲ್ಲಿ ನೆಲೆಸಿರುವ ಕೊಡಗಿನ ಸಿದ್ದಾಪುರದ ಚಿಕ್ಕಪ್ಪ ದೊರೆಸ್ವಾಮಿ (52) ಮತ್ತು ಸೋದರ ಸಂಬಂಧಿ ದರ್ಶಿನಿ (18) ಹಾಗೂ ಕೊಡಗಿನ ಸಿದ್ದಾಪುರದ ರೋಹಿತ್ (9) ಮೃತರಾಗಿದ್ದಾರೆ. ಘಟನೆ ನಡೆದಾಗ ರೋಹಿತ್ ತನ್ನ ಚಿಕ್ಕಪ್ಪ ದೊರೆಸ್ವಾಮಿ ಅವರ ಮನೆಗೆ ಹೋಗಿದ್ದರು. ಅವರ ಶವಗಳನ್ನು ಗುರುತಿಸಲಾಗಿದೆ.
ಪತ್ತೆಯಾಗದವರ ಸಂಖ್ಯೆ
ವಯನಾಡು ಭೂಕುಸಿತದಲ್ಲಿ ಸಾವನ್ನಪ್ಪಿದ ಕನ್ನಡಿಗರಲ್ಲಿ ಕೆಲವರು ಇನ್ನೂ ಪತ್ತೆಯಾಗಬೇಕಿದೆ. ಅಪ್ಪಣ್ಣನ್ (39), ಸಬಿತಾ (43), ದಿವ್ಯಾ (35), ಅಶ್ವಿನ್ (13), ಜಿತು (11), ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಉಕ್ಕಲಗೆರೆಯಲ್ಲಿ ಗುರುಮಲ್ಲನ್ (60), ಚಾಮರಾಜನಗರ ತಾಲೂಕಿನ ಇರಸವಾಡಿಯ ರಾಜೇಂದ್ರ ಅವರ ಪತ್ನಿ ರತ್ನಮ್ಮ (45) ಅವರ ಮೃತ ದೇಹಗಳು ಇನ್ನೂ ಪತ್ತೆಯಾಗಬೇಕಿದೆ.
ಬದುಕುಳಿದವರು
ಇನ್ನೂ ಈ ದುರಂತದಲ್ಲಿ ಕೆಲವರನ್ನು ರಕ್ಷಣೆ ಮಾಡಿ ಕರೆತರಲಾಗಿದೆ. ಅಲ್ಲಿಗೆ ವಲಸೆ ಹೋಗಿ ನೆಲೆಸಿದ 10 ಬದುಕುಳಿದ ಕರ್ನಾಟಕದವರನ್ನು ವಾಪಸ್ ಮರಳಿ ಕರೆತರಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಡದಹಳ್ಳಿಯ ರಾಜೇಶ್ ಎಂಬುವವರ ಪತ್ನಿ ರಾಧಾ ವಯನಾಡಿನಲ್ಲಿ ಸಂಬಂಧಿಕರನ್ನು ಭೇಟಿಗೆ ಹೋಗಿ ಸಿಕ್ಕೊಕೊಂಡಿದ್ದರು. ಅವರನ್ನು ರಕ್ಷಣೆ ಮಾಡಿ ವಾಪಸ್ ಕರೆತರಲಾಗಿದೆ. ಗುಂಡ್ಲುಪೇಟೆ ತಾಲೂಕಿನ ತ್ರಿಯಂಬಕಪುರ ಗ್ರಾಮದ ಸ್ವಾಮಿಶೆಟ್ಟಿ (70) ಎಂಬುವವರು ವಯನಾಡಿನ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದರು. ಇವರನ್ನೂ ಸದ್ಯ ರಕ್ಷಣೆ ಮಾಡಿ ವಾಪಸ್ ಕರೆತರಲಾಗಿದೆ.
ಚಾಮರಾಜನಗರದಿಂದ ವಲಸೆ ಬಂದು ನೆಲೆಸಿದ್ದ ಆರು ಹಾಗೂ ಗುಂಡ್ಲುಪೇಟೆಯಿಂದ ಬದುಕುಳಿದ ನಾಲ್ವರನ್ನು ವಾಪಸ್ ಕರೆತರಲಾಗಿದೆ. ಮೇಪ್ಪಾಡಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಸೇಂಟ್ ಜೋಸೆಫ್ ಯುಪಿ ಶಾಲೆಯ ಪರಿಹಾರ ಶಿಬಿರದಲ್ಲಿ ಇನ್ನೂ ನರಸೀಪುರ ತಾಲೂಕಿನ ಉಕ್ಕಲಗೆರೆಯ 25 ಮಂದಿ, ಚಾಮರಾಜನಗರ ಜಿಲ್ಲೆಯ 10 ಮಂದಿ ಸೇರಿದಂತೆ ಮೂವತ್ತೈದು ಮಂದಿ ಆಶ್ರಯ ಪಡೆದಿದ್ದಾರೆ.
ಸಿಎಂ ಸಾಂತ್ವಾನ
ವಯನಾಡಿನ ಭೂಕುಸಿತ ದುರಂತದಲ್ಲಿ ಕುಟುಂಬಸ್ಥರನ್ನು ಹಾಗೂ ಮನೆಯನ್ನು ಕಳೆದುಕೊಂಡ ಟಿ ನರಸೀಪುರ ತಾಲೂಕಿನ ಉಕ್ಕಲಗೆರೆಯ ಮಹದೇವಮ್ಮ ಅವರೊಂದಿಗೆ ಕರೆ ಮೂಲಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಸಾಂತ್ವನ ಹೇಳಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ದುರಂತದಲ್ಲಿ ಮೂವರು ಪುತ್ರರು, ಮೂವರು ಸೊಸೆಯಂದಿರು, ಮೂವರು ಮೊಮ್ಮಕ್ಕಳನ್ನು ಕಳೆದುಕೊಂಡಿರುವ ಮಹದೇವಮ್ಮ ಸದ್ಯ ಮಗಳು ರತ್ನಾ ಅವರೊಂದಿಗೆ ಮೆಪ್ಪಾಡಿಯ ಪರಿಹಾರ ಶಿಬಿರದಲ್ಲಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications