ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಟಿಎಂಸಿಗೆ 14,000, ಬಿಜೆಪಿಗೆ 3,344 ಸ್ಥಾನ, ಮುಂದುವರೆದ ಮತ ಎಣಿಕೆ
ಕೋಲ್ಕತ್ತಾ, ಜುಲೈ. 11: ಪಶ್ಚಿಮ ಬಂಗಾಳ ಪಂಚಾಯಿತ್ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಈವರೆಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಂಗಳವಾರ ಪಶ್ಚಿಮ ಬಂಗಾಳದಾದ್ಯಂತ ಒಟ್ಟು 63,229 ಸ್ಥಾನಗಳ ಪೈಕಿ 14,767 ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 3,344 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ರಾಜ್ಯ ಚುನಾವಣಾ ಆಯೋಗದ (ಎಸ್‌ಇಸಿ) ವೆಬ್‌ಸೈಟ್‌ನ ಪ್ರಕಾರ, ಮತಗಳ ಎಣಿಕೆ ಮುಂದುವರೆದಿದ್ದು, ಸಿಪಿಎಂ 1,086 ಗ್ರಾಮ ಪಂಚಾಯತ್ ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 783 ಸ್ಥಾನಗಳನ್ನು ಮತ್ತು ಸ್ವತಂತ್ರ ಅಭ್ಯರ್ಥಿಗಳು 854 ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ತಿಳಿಸಿದೆ. ಬಿಗಿ ಭದ್ರತೆಯ ನಡುವೆ 339 ಮತ ಎಣಿಕೆ ಕೇಂದ್ರಗಳಲ್ಲಿ ಮೂರು ಹಂತದ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗಳ ಮತ ಎಣಿಕೆ ನಡೆಯುತ್ತಿದೆ.

ಆರಂಭಿಕ ವರದಿಗಳು ಮತ್ತು ಫಲಿತಾಂಶಗಳ ಪ್ರಕಾರ ಪಶ್ಚಿಮ ಬಂಗಾಳದ ಒಟ್ಟು 3,317 ಗ್ರಾಮ ಪಂಚಾಯತ್‌ಗಳ ಪೈಕಿ 1,783 ರಲ್ಲಿ ತೃಣಮೂಲ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬಿಜೆಪಿ 262 ಗ್ರಾಮ ಪಂಚಾಯಿತಿಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 137 ಮತ್ತು ಎಡರಂಗ 112 ಗ್ರಾಮ ಪಂಚಾಯಿತಿಗಳಲ್ಲಿ ಮುನ್ನಡೆ ಸಾಧಿಸಿತ್ತು. 14 ಗ್ರಾಮ ಪಂಚಾಯಿತಿಗಳಲ್ಲಿ ಐಎಸ್‌ಎಫ್ ಮುನ್ನಡೆ ಸಾಧಿಸಿದೆ. ಎಸ್‌ಇಸಿ ವೆಬ್‌ಸೈಟ್ ಪ್ರಕಾರ 74 ಗ್ರಾಮ ಪಂಚಾಯತ್‌ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಇತರ ಪಕ್ಷಗಳು ಮುನ್ನಡೆ ಸಾಧಿಸಿವೆ.
ರಾಜ್ಯಾದ್ಯಂತ 341 ಪಂಚಾಯತ್ ಸಮಿತಿಗಳ ಪೈಕಿ 28 ಪಂಚಾಯತ್ ಸಮಿತಿಗಳಲ್ಲಿ ಟಿಎಂಸಿ ಮುನ್ನಡೆ ಸಾಧಿಸಿದೆ. 20 ಜಿಲ್ಲಾ ಪರಿಷತ್ತಿನ ಮತ ಎಣಿಕೆ ಇನ್ನಷ್ಟೇ ಆರಂಭವಾಗಬೇಕಿದೆ. ಪಶ್ಚಿಮ ಬಂಗಾಳವು 63,229 ಸ್ಥಾನಗಳೊಂದಿಗೆ 3,317 ಗ್ರಾಮ ಪಂಚಾಯತ್‌ಗಳನ್ನು ಹೊಂದಿದೆ. 9,730 ಸ್ಥಾನಗಳೊಂದಿಗೆ 341 ಪಂಚಾಯತ್ ಸಮಿತಿಗಳು ಮತ್ತು 928 ಸ್ಥಾನಗಳೊಂದಿಗೆ 20 ಜಿಲ್ಲಾ ಪರಿಷತ್‌ಗಳನ್ನು ಹೊಂದಿದೆ.

ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗಳ ವೇಳೆ ನಡೆದ ವ್ಯಾಪಕ ಹಿಂಸಾಚಾರದಿಂದ 21 ಜನರು ಬಲಿಯಾಗಿದ್ದಾರೆ. ಹಲವು ಜಿಲ್ಲೆಗಳಲ್ಲಿ ಮತಗಟ್ಟೆ ವಶಪಡಿಸಿಕೊಳ್ಳಲಾಗಿದೆ. ಮತಪೆಟ್ಟಿಗೆ ಲೂಟಿ ಮಾಡಲಾಗಿದೆ. ಮತಯಂತ್ರಗಳನ್ನು ನಾಶಪಡಿಸಿದ ಘಟನೆಗಳೂ ವರದಿಯಾಗಿವೆ.












Click it and Unblock the Notifications